ಲೋಕಸಭಾ ಚುನಾವಣೆ : ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಬಹಿರಂಗ ಕಡ್ಡಾಯ

ತುಮಕೂರು

        ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ಮಾಹಿತಿಯನ್ನು ಕಡ್ಡಾಯವಾಗಿ ಮಾಧ್ಯಮಗಳಲ್ಲಿ ಜಾಹೀರಾತುಗೊಳಿಸಬೇಕು. ಇಂತಹದೊಂದು ಆದೇಶ ಇದೆ ಮೊದಲ ಬಾರಿಗೆ ಚುನಾವಣಾ ಆಯೋಗದಿಂದ ಹೊರಬಿದ್ದಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಆಯೋಗ ಮುಂದಾಗಿದ್ದು, ನಾಮಪತ್ರ ಸಲ್ಲಿಸಿದ ನಂತರ ಪ್ರತಿ ಅಭ್ಯರ್ಥಿಯೂ ಈ ಬಗ್ಗೆ ಘೋಷಣೆ ಮಾಡಿಕೊಳ್ಳುವಂತೆ ಆಯೋಗ ಸೂಚಿಸಿದೆ.

         ಏನಿದು ಪ್ರಕರಣ?: ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧ ಹೇರುವಂತೆ ಸುಪ್ರಿಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಸಲ್ಲಿಕೆಯಾಗಿದ್ದವು. ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಎಂಬ ಆದೇಶ ಹೊರಡಿಸಬೇಕು. ಆ ಮೂಲಕ ರಾಜಕೀಯ ಅಪರಾಧೀಕರಣಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಉದ್ದೇಶವಾಗಿತ್ತು.

        2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಅರ್ಜಿಗಳನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಅರ್ಜಿಗಳನ್ನು ಸಂಪೂರ್ಣವಾಗಿ ಮಾನ್ಯ ಮಾಡಲು ನಿರಾಕರಿಸಿತ್ತು. ಆದರೆ ಮಾರ್ಗದರ್ಶಿ ಸೂತ್ರವೊಂದನ್ನು ಹೊರಡಿಸಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೇಳಲಾಗದು.

        ಆದರೆ ಇದಕ್ಕೆ ಸಂಬಂಧಿಸಿದಂತೆ ಶಾಸನ ಮಾಡುವ ಅಧಿಕಾರ ಪಾರ್ಲಿಮೆಂಟ್‍ಗೆ ಇದೆ. ಅವರೇ ಕಾನೂನು ಮಾಡಲಿ, ಆ ಮೂಲಕ ರಾಜಕೀಯ ಅಪರಾಧಿಕರಣಕ್ಕೆ ಕಡಿವಾಣ ಹಾಕಲಿ ಎಂದು ಹೇಳಿದ ಸರ್ವೋಚ್ಛ ನ್ಯಾಯಾಲಯವು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕಾರಣಿಗಳ ಬಗ್ಗೆ ತಿಳಿದುಕೊಳ್ಳುವ ಅಧಿಕಾರವಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ತಮ್ಮನ್ನು ಪ್ರತಿನಿಧಿಸುವವರು ಹೇಗಿದ್ದಾರೆ ಎಂಬುದು ಮತದಾರರಿಗೆ ತಿಳಿಯಬೇಕು.

        ಅದಕ್ಕಾಗಿ ಪ್ರತಿ ಅಭ್ಯರ್ಥಿಯೂ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಮತದಾನ ಮುಗಿಯುವುದರ ಒಳಗೆ ತಮ್ಮ ಅಪರಾಧ ಪ್ರಕರಣಗಳ ವೃತ್ತಾಂತವನ್ನು ಕ್ಷೇತ್ರದ ಮತದಾರರ ಮುಂದೆ ಮಾಧ್ಯಮಗಳ ಮೂಲಕ ಜಾಹೀರುಗೊಳಿಸಬೇಕು ಎಂದು 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

         ಸುಪ್ರೀಂಕೋರ್ಟ್‍ನ ಈ ಆದೇಶವನ್ನು ಇದೇ ಪ್ರಥಮ ಬಾರಿಗೆ ಎದುರಾಗಿರುವ ಲೋಕಸಭಾ ಚುನಾವಣೆಯಲ್ಲಿ ಜಾರಿಗೊಳಿಸಲು ಆಯೋಗ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಸುತ್ತೋಲೆಯನ್ನೂ ಹೊರಡಿಸಿದೆ. ದೇಶದ ಯಾವುದೇ ಭಾಗದಲ್ಲಿ ಯಾವುದೇ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದರೂ ತನ್ನ ಮೇಲೆ ಇರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ನೀಡಬೇಕು.

         ಶಿಕ್ಷೆಗೆ ಒಳಗಾದ, ವಿಲೇವಾರಿಗೆ ಬಾಕಿ ಇರುವ, ಅಂದರೆ ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾದ ನಂತರ ಇರುವ ಪ್ರಕರಣಗಳ ವಿವರ ಹಾಗೂ ತೀರ್ಪು ಪ್ರಕಟವಾಗಿದ್ದರೆ ಆ ವಿವರ ಇವೆಲ್ಲವನ್ನೂ ನಾಮಪತ್ರ ಹಿಂತೆಗೆದುಕೊಳ್ಳುವ ದಿನದ ನಂತರ, ಮತದಾನ ಆರಂಭವಾಗುವ 24 ಗಂಟೆ ಮೊದಲು ಬಹಿರಂಗಪಡಿಸಬೇಕು. ತಾನು ಕಣಕ್ಕಿಳಿದಿರುವ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆಯಲ್ಲಿ ಮೂರು ಪ್ರತ್ಯೇಕ ದಿನಗಳಲ್ಲಿ ಜಾಹೀರಾತು ನೀಡಬೇಕು.

         ಚುನಾವಣಾ ಆಯೋಗದ ಷರತ್ತು ಪೂರೈಸಲು ನಾಮಕಾವಸ್ಥೆಗಾಗಿ ಯಾವುದೋ ಒಂದು ಪತ್ರಿಕೆಯಲ್ಲಿ ಮಾಹಿತಿ ಪ್ರಕಟಿಸಿದರೆ ಸಾಲದು. ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆಯೇ ಆಗಬೇಕು. ಅದೂ ಸಹ ಸೂಕ್ತ ಜಾಗದಲ್ಲಿ ಪ್ರಕಟವಾಗಬೇಕು. ಇದಕ್ಕಾಗಿಯೇ ಕೆಲವು ನಿರ್ದೇಶನಗಳನ್ನು ಆಯೋಗ ನೀಡಿದೆ.

          ಇಷ್ಟೇ ಅಲ್ಲ, ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಸುದ್ದಿ ವಾಹಿನಿಯೊಂದರಲ್ಲೂ ಮತದಾನ ಅಂತ್ಯವಾಗಲು 48 ಗಂಟೆಗಳ ಮೊದಲು 3 ಪ್ರತ್ಯೇಕ ದಿನಗಳಲ್ಲಿ ಪ್ರಚುರಪಡಿಸಬೇಕು. ಮಾಧ್ಯಮಗಳಲ್ಲಿ ಹೀಗೆ ಪ್ರಚಾರಪಡಿಸಿರುವುದರ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೃಢೀಕರಣ ಸಲ್ಲಿಸಬೇಕು. ಇದು ಅಭ್ಯರ್ಥಿಗಳಿಗೆ ಮಾತ್ರವೇ ಸೀಮಿತವಾಗುವುದಿಲ್ಲ. ಪಕ್ಷದ ವತಿಯಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಆಯಾ ಪಕ್ಷಗಳೂ ಕೂಡ ತನ್ನ ಅಭ್ಯರ್ಥಿಗಳ ಪ್ರಕರಣಗಳ ಹಿನ್ನೆಲೆಯ ಮಾಹಿತಿಯನ್ನು ಜಾಹೀರಾತುಗಳ ಮೂಲಕ ಮತದಾರರ ಮುಂದೆ ಬಿಚ್ಚಿಡಬೇಕು.

           ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಆಯೋಗ ಈ ಸುತ್ತೋಲೆ ಹೊರಡಿಸಿದ್ದು, ಆಯೋಗದ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ಚುನಾವಣೆ ಮುಗಿದ 30 ದಿನಗಳ ಒಳಗೆ ಮಾಧ್ಯಮಗಳಲ್ಲಿ ಪ್ರಚಾರವಾದ ತುಣುಕುಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಒಂದು ವೇಳೆ ಇದರಲ್ಲೇನಾದರೂ ಲೋಪ ಕಂಡುಬಂದರೆ ಚುನಾವಣಾಧಿಕಾರಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಸಮಗ್ರ ಮಾಹಿತಿ ಸಲ್ಲಿಸುತ್ತಾರೆ.

         ಆನಂತರದ ಪ್ರಕ್ರಿಯೆಗಳು ತುಂಬಾ ಕಷ್ಟದಾಯಕ. ಅಂದರೆ, ಜಾಹೀರಾತು ನೀಡದೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ನ್ಯಾಯಾಂಗ ನಿಂದನೆಯ ಪ್ರಕರಣಕ್ಕೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಅಥವಾ ಅಪೂರ್ಣ ಮಾಹಿತಿ ನೀಡಿ ಕೆಲವು ಮಾಹಿತಿಗಳನ್ನು ಗೌಪ್ಯವಾಗಿಟ್ಟರೆ ಅದಕ್ಕೂ ಸಹ ಕಾನೂನಿನ ಕ್ರಮ ಕೈಗೊಳ್ಳಲು ಅವಕಾಶಗಳಿವೆ.

          ಇನ್ನೊಂದು ವಿಷಯವೆಂದರೆ, ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಕಟಿಸುವ ಜಾಹೀರಾತಿನ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಯಾವುದೇ ಪ್ರಕರಣಗಳು ಇಲ್ಲವೆಂದಾದರೆ ಜಾಹೀರಾತು ಪ್ರಕಟಿಸುವ ಅಗತ್ಯವಿಲ್ಲ.

         ಇದೇ ಪ್ರಥಮ ಬಾರಿಗೆ ಈ ಆದೇಶ ಜಾರಿಯಾಗಿರುವುದರಿಂದ ಒಂದಷ್ಟು ಗೊಂದಲಗಳು ಉಂಟಾಗಿರುವುದು ಸಹಜ. ಆದರೂ ಆಯೋಗ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಯಾವ ಸಂದರ್ಭದಲ್ಲಿ ಜಾಹೀರಾತು ನೀಡಬೇಕು? ಹೇಗೆ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಿದೆ. ಆಯೋಗದ ನಿರ್ದೇಶನವನ್ನು ಪಾಲಿಸಬೇಕಾದುದು ಅಭ್ಯರ್ಥಿಗಳ ಕರ್ತವ್ಯ. ವಿಫಲವಾದರೆ ನ್ಯಾಯಾಂಗ ನಿಂದನೆಯ ತೂಗುಗತ್ತಿಗೆ ಒಳಗಾಗಬೇಕಾದೀತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap