ಬೆಂಗಳೂರು
ಬರುವ 2019ರ ಲೋಕಸಭಾ ಚುನಾವಣೆಯ ರಾಜಕೀಯದ ಮೇಲೆ ಪರಿಣಾಮ ಬೀರುವ ಭಾರಿ ಮಹತ್ವದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟೆಗೆಗಳಲ್ಲಿ ಭದ್ರವಾಗಿದೆ.
ಆರು ತಿಂಗಳಿನಲ್ಲಿ ಲೋಕಸಭೆಗೆ ಚುನಾವಣೆ ಎದುರಾಗಲಿದ್ದು, ಈ ಹೊತ್ತಿನಲ್ಲಿ ನಡೆದ ಚುನಾವಣೆ ಭಾರಿ ನಿರೀಕ್ಷೆ ಮೂಡಿಸಿದೆ. ಪ್ರಮುಖವಾಗಿ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಒಲವು ಯಾವ ಪಕ್ಷದತ್ತ ಇದೆ ಎನ್ನುವುದನ್ನು ಅರಿಯಲು ಈ ಚುನಾವಣೆ ದಿಕ್ಸೂಚಿಯಾಗಿದೆ.
ರಾಜ್ಯದಲ್ಲಿ ಬಿಜೆಪಿಗೆ ಶಕ್ತಿಯಾಗಿದ್ದ ಗಣಿ ರೆಡ್ಡಿ ಪಡೆಯ ಶ್ರೀರಾಮುಲು ಸಾಮಥ್ರ್ಯವನ್ನು ಪರೀಕ್ಷೆಗೆ ಒಳಪಡಿಸುವ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವರ್ಚಸ್ಸಿಗೆ ಈ ಚುನಾವಣೆ ಸಾಣೆ ಹಿಡಿಯಲಿದೆ.
ಬಳ್ಳಾರಿ ಚುನಾವಣಾ ಕಣ ಇಡೀ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯೋತ್ತರದಲ್ಲಿ ನಿರಂತರವಾಗಿ 14 ಬಾರಿ ಗೆಲುವು ಸಾಧಿಸಿತ್ತು. ನಂತರ ಇದು ಗಣಿ ರೆಡ್ಡಿಗಳ ಪ್ರಾಬಲ್ಯಕ್ಕೆ ಒಳಪಟ್ಟಿತ್ತು. ಇದೀಗ ಆ ಶಕ್ತಿಯನ್ನು ಕುಂದಿಸಲು ಕಾಂಗ್ರೆಸ್ ನಾಯಕರು ಭಾರಿ ಪ್ರಯತ್ನ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿಯಿಂದ ಶಾಸಕ ಶ್ರೀರಾಮುಲು ತಂಗಿ ಮಾಜಿ ಸಂಸದೆ ಜೆ ಶಾಂತ ಎದುರು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಸ್ಪರ್ಧಿಸಿದ್ದು, ನಮ್ಮ ಅಭ್ಯರ್ಥಿಯೇ ಗೆಲ್ಲಲ್ಲಿದ್ದಾರೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಕಾಂಗ್ರೆಸಿಗರು ಚುನಾವಣಾ ಪ್ರಚಾರ ನಡೆಸಿದ್ದು, ಸಿದ್ದರಾಮಯ್ಯ ಹಾಗೂ ಎಚ್‍ಡಿ ದೇವೇಗೌಡ ಶಕ್ತಿ ಮೀರಿ ತಮ್ಮ ಅಭ್ಯರ್ಥಿಪರ ಪ್ರಚಾರ ಮಾಡಿದ್ದರು.
ಸೂಕ್ತ ಅಭ್ಯರ್ಥಿಗಳ ಅಲಭ್ಯತೆ ಹಿನ್ನಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮಗ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಗ ಮಾಜಿ ಸಂಸದ ಬಿ.ವೈ ರಾಘವೇಂದ್ರ ಕಣಕ್ಕೆ ಇಳಿದಿದ್ದು, ಈ ಕ್ಷೇತ್ರ ಸರ್ಕಾರ ಹಾಗೂ ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ನಿರ್ಮಾಣವಾಗಿದೆ. ಬಿಜೆಪಿಯನ್ನು ಮೈತ್ರಿ ಪಕ್ಷಗಳು ಇಲ್ಲಿ ಮಣಿಸಲು ಸಾಧ್ಯವೇ ಎನ್ನುವುದನ್ನು ಸಹ ಈ ಫಲಿತಾಂಶ ನಿರೂಪಿಸಲಿದೆ.
ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಧು ಬಂಗಾರಪ್ಪ ತಮ್ಮ ತಂದೆ, ನಾಲ್ಕು ಬಾರಿ ಸಂಸದ ಹಾಗೂ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರ ಹೆಸರಿನಲ್ಲಿ ಜನರ ಬಳಿ ಮತಯಾಚಿಸಿದ್ದಾರೆ. ಮಗನ ಗೆಲುವು ಯಡಿಯೂರಪ್ಪನವರಿಗೆ ಇನ್ನಷ್ಟು ಶಕ್ತಿಯನ್ನು ಒದಗಿಸಲಿದೆ ಎನ್ನಲಾಗಿದೆ.
ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಸದರು, ಶಾಸಕರು ರಾಜಿನಾಮೆಯಿಂದ ಉಪಚುನಾವಣೆ ಎದುರಾದರೆ, ಜಮಖಂಡಿಯಲ್ಲಿ ಶಾಸಕರಾಗಿದ್ದ ಸಿದ್ದುನ್ಯಾಮಗೌಡ ಅವರ ಅಕಾಲಿಕ ಮರಣದಿಂದ ಉಪಚುನಾವಣೆ ನಡೆಯಿತು.
ರಾಜ್ಯದಲ್ಲಿ ಮೈತ್ರಿ ಪಕ್ಷ ಸುಭದ್ರವಾಗಿದೆಯೇ, ಮೈತ್ರಿಗೆ ಮತದಾರರ ಒಲವಿದೆಯೇ ಎನ್ನುವುದಕ್ಕೆ ಈ ಚುನಾವಣೆಯ ಫಲಿತಾಂಶ ಸ್ಪಷ್ಟ ಉತ್ತರ ನೀಡಲಿದೆ. ಕಾಂಗ್ರೆಸ್-ಜೆಡಿಎಸ್ ಜೊತೆಗೂಡಿ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಇನ್ನು ಗೌಡರ ಪ್ರಾಬಲ್ಯ ಹೊಂದಿರುವ ಮಂಡ್ಯ, ರಾಮನಗರದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಆರಂಭಿಕ ಬಂಡಾಯ ಕೂಡ ಉಂಟಾಯಿತು.
ಗೌಡರ ಪ್ರಾಬಲ್ಯದ ಕ್ಷೇತ್ರವಾದ ಮಂಡ್ಯ, ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದು ಸಣ್ಣ ವಿಷಯ ಎಂದು ಆಡಳಿತ ಮೈತ್ರಿ ಪಕ್ಷ ತಳ್ಳಿ ಹಾಕಿತ್ತು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಎಲ್. ಚಂದ್ರಶೇಖರ್ ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರು. ಬಿಜೆಪಿ ನಾಯಕರ ಅಸಹಕಾರ ಮತ್ತು ನಿರಾಸಕ್ತಿಯಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಆರೋಪಿಸಿದರು. ಈ ಬೆಳವಣಿಗೆ ಬೆನ್ನಲ್ಲೆ ಜೆಡಿಎಸ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಸ್ಥಗಿತಗೊಳಿಸಿತು.
ಬಾಗಲಕೋಟೆಯ ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಸಾವಿನಿಂದ ತೆರವಾದ ಕ್ಷೇತ್ರಕ್ಕೆ ಅವರ ಮಗನನ್ನೇ ಕಾಂಗ್ರೆಸ್ ಕಣಕ್ಕೆ ಇಳಿಸಿದ್ದು, ಆನಂದ್‍ನ್ಯಾಮಗೌಡ ಪರ ಅನುಕಂಪದ ಅಲೆ ಮೂಡಿದೆ. ಇನ್ನು ಇವರ ವಿರುದ್ಧ ಬಿಜೆಪಿಯಿಂದ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಕಣದಲ್ಲಿದ್ದಾರೆ.
ರಾಜಕೀಯ ಪಂಡಿತರ ಪ್ರಕಾರ ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಬಿಜೆಪಿಗೆ ತಾತ್ಕ್ಕಾಲಿಕ ಹಿನ್ನಡೆಯಾಗಿದ್ದು, ಇಲ್ಲಿ ಜೆಡಿಎಸ್ ಗೆಲ್ಲಲಿದೆ ಎನ್ನುತ್ತಿದ್ದಾರೆ. ಈ ಗೆಲುವು ಭವಿಷ್ಯದಲ್ಲಿ ಕಾಂಗ್ರೆಸ್‍ಗೆ ಕಂಟಕವಾಗಲಿದ್ದು, ಕೇಸರಿ ಪಡೆಯ ಅನೇಕರು ಜೆಡಿಎಸ್‍ಗೆ ಜಿಗಿಯುವ ಸಾಧ್ಯತೆಯನ್ನೂ ಸಹ ತಳ್ಳಿ ಹಾಕಲಾಗದು.
ಈ ಐದು ಉಪಚುನಾವಣೆಯಲ್ಲಿ ಆಡಳಿತ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆಯೇ, ದಕ್ಷಿಣ ಕರ್ನಾಟಕದ ಹೆಬ್ಬಾಗಿಲು ಎಂದು ಭಾವಿಸಿರುವ ಬಿಜೆಪಿಗೆ ಹಿನೆಡೆಯಾಗಲಿದೆಯೇ ಎನ್ನುವ ಲೆಕ್ಕಾಚಾರ ಸಹ ನಡೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ