ಲೋಕಸಭಾ ಚುನಾವಣೆ: ಸಿದ್ದೇಶ್ವರ್ 19 ಕೋಟಿ ದಣಿ : ಮಂಜಪ್ಪ 3 ಕೋಟಿ ಒಡೆಯ

ದಾವಣಗೆರೆ :

     ಮರು ಆಯ್ಕೆ ಬಯಸಿ ಬಿಜೆಪಿಯಿಂದ ಅಖಾಡಕ್ಕೆ ಇಳಿದಿರುವ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ 19.39 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದರೆ, ಮೊದಲ ಬಾರಿಗೆ ಕಾಂಗ್ರೆಸ್‍ನಿಂದ ಕಣಕ್ಕೆ ಇಳಿದಿರುವ ಹೆಚ್.ಬಿ.ಮಂಜಪ್ಪ 3 ಕೋಟಿ ಆಸ್ತಿ ಒಡೆಯರಾಗಿದ್ದಾರೆ.

ಸಿದ್ದೇಶ್ವರ್ ಆಸ್ತಿ ವಿವರ:

        ಈಗಾಗಲೇ ಮೂರು ಬಾರಿ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ್ 2014ರ ಚುನಾವಣೆಗೆ ಸ್ಪರ್ಧಿಸಿದ್ದಾಗ 12.29 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡು ಪ್ರಮಾಣಪತ್ರ ಸಲ್ಲಿಸಿದ್ದರು. ಇವರ ಆಸ್ತಿಯು ಕಳೆದ ಐದು ವರ್ಷದಲ್ಲಿ 7.1 ಕೋಟಿ ಆಸ್ತಿ ಹೆಚ್ಚಾಗಿದ್ದು, ಈಗ ಅವರು 19.39 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಈ ಬಾರಿ ನಾಮಪತ್ರದ ಜೊತೆಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

       ಚರಾಸ್ತಿ 7.05 ಕೋಟಿ, ಸ್ಥಿರಾಸ್ತಿ 12.34 ಕೋಟಿ, 24.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದು, ಒಟ್ಟು 1.16 ಕೋಟಿ ಸಾಲ ತೋರಿಸಿದ್ದಾರೆ. ಆ ಪೈಕಿ 1 ಕೋಟಿ ಸಾಲ ಹಾವೇರಿಯ ಸಂಸದ ಶಿವಕುಮಾರ ಸಿ. ಉದಾಸಿ ಅವರಿಂದ ಪಡೆದಿದ್ದಾಗಿದೆ. ಬಿಎಂಡಬ್ಯೂ ಕಾರು ಖರೀದಿಸಲು 16 ಲಕ್ಷ ಸಾಲ ಮಾಡಿದ್ದಾರೆ.

       ಪತ್ನಿ ಗಾಯತ್ರಿ ಅವರ ಹೆಸರಿನಲ್ಲಿ 30.14 ಲಕ್ಷ ಸಾಲ ಇದೆ. ಸಿದ್ದೇಶ್ವರ ಅವರ ಪತ್ನಿ ಹೆಸರಿನಲ್ಲಿ ಸದ್ಯ 4.76 ಕೋಟಿ ಚರಾಸ್ತಿ ಹಾಗೂ 7.91 ಕೋಟಿ ಸ್ಥಿರಾಸ್ತಿ ಇದೆ. ಅವರ ಬಳಿ 73.88 ಲಕ್ಷ ಬೆಲೆ ಬಾಳುವ ಒಡವೆಗಳಿವೆ, ಸಿದ್ದೇಶ್ವರ ಅವರ ಬಳಿ 24.70 ಲಕ್ಷ ಮೌಲ್ಯದ ಒಡವೆಗಳಿವೆ . ಪತ್ನಿ ಅವರ ಹೆಸರಿನಲ್ಲಿ ಗದಗ ಜಿಲ್ಲೆಯಲ್ಲಿ 40 ಲಕ್ಷ ಮೌಲ್ಯದ ವಿಂಡ್‍ಮಿಲ್ ಇದೆ.

ಮಂಜಪ್ಪರ ಆಸ್ತಿ ವಿವರ:

        ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕಣಕ್ಕೆ ಇಳಿದಿರುವ ಎಚ್.ಬಿ. ಮಂಜಪ್ಪ ಕೃಷಿಕರಾಗಿದ್ದು, 3 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

        2 ಕೋಟಿ ಮೌಲ್ಯ ಹೊಂದಿರುವ 15 ಎಕರೆ 9 ಗುಂಟೆ ಕೃಷಿಭೂಮಿ, 50 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಹಾಗೂ 30 ಲಕ್ಷ ಮೌಲ್ಯದ ಕಟ್ಟಡಗಳನ್ನು ಹೊಂದಿದ್ದಾರೆ. 10 ಲಕ್ಷ ಮೌಲ್ಯದ ಮಹೀಂದ್ರ ಸ್ಕಾರ್ಪಿಯೊ ಹಾಗೂ 8.75 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಅವರಲ್ಲಿದೆ. 1.1 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಮಂಜಪ್ಪ ಹೊಂದಿದ್ದರೆ, ಅವರ ಪತ್ನಿ ಲಕ್ಷ್ಮೀ 4.5 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ.3.35 ಲಕ್ಷ ಬೆಳೆಸಾಲ, ಎರಡು ವಾಹನಗಳಿಗೆ 10.77 ಲಕ್ಷ ಸಾಲ ಇದೆ. ಬ್ಯಾಂಕ್‍ಗಳಲ್ಲಿ ಯಾವುದೇ ಉಳಿತಾಯ ಹಣವಿಲ್ಲ. 50 ಸಾವಿರ ನಗದು ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap