ಶಾಸಕ ಪ್ರತಾಪ್‍ಗೌಡ ವಿರುದ್ಧದ ಪ್ರಕರಣ ವಾಪಾಸ್

ಬೆಂಗಳೂರು

       ಬಿಜೆಪಿ ನಾಯಕರ ಮನವೊಲಿಕೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ವಿರುದ್ಧ ಹೂಡಲಾಗಿದ್ದ ಭೋಗಸ್ ಮತದಾನದ ಪ್ರಕರಣವನ್ನು ಬಸನಗೌಡ ತುರ್ವಿಹಾಳ್ ವಾಪಸ್ ಪಡೆದಿದ್ದಾರೆ.ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಎದುರಾಗಿದ್ದ ಅಡೆತಡೆಗಳು ನಿವಾರಣೆಯಾದಂತಾಗಿದೆ.

     2018ರ ಚುನಾವಣೆ ವೇಳೆ ತುರ್ವಿಹಾಳ, ಮಸ್ಕಿ ಮತ ಕ್ಷೇತ್ರದಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಅನರ್ಹಗೊಂಡಿದ್ದ ಶಾಸಕ ಪ್ರತಾಪ್ಗೌಡ ಪ್ರತಿನಿಧಿಸುತ್ತಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಈಗ ಹಠಾತ್ತನೆ ತುರ್ವಿಹಾಳ ವಾಪಸ್ ಪಡೆದಿದ್ದಾರೆ.

     ಬಿಜೆಪಿ ಹೈಕಮಾಂಡ್ ಸಂಧಾನ ನಡೆಸಿ ಅರ್ಜಿಯನ್ನು ವಾಪಸ್ ಪಡೆಯುವಂತೆ ಸೂಚಿಸಿದ್ದರಿಂದ ವಾಪಸ್ ಪಡೆದಿದ್ದಾರೆಂದು ಹೇಳಲಾಗಿದೆ. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತುರ್ವಿಹಾಳ ಕೇವಲ 213 ಮತಗಳ ಅಂತರದಲ್ಲಿ 2ನೇ ಸ್ಥಾನ ಗಳಿಸಿದ್ದರು. ಈ ಪ್ರಕರಣವನ್ನು ವಾಪಸ್ ಪಡೆಯಲು ನಿರಾಕರಿಸಿದ್ದ ಅವರು,ಸರ್ಕಾರ ನೀಡಿದ್ದ ತುಂಗಭದ್ರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

       ತಾವೇ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೋ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ, ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಮನಸ್ಸು ಬದಲಾಯಿಸಿರುವ ತುರ್ವಿಹಾಳ, ವಾಪಸ್ ಪಡೆದಿರುವುದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎದುರಾಗಿದ್ದ ಅಡ್ಡಿ-ಆತಂಕಗಳು ನಿವಾರಣೆಯಾಗಿವೆ. ಈಗ ಮಸ್ಕಿ ಪ್ರಕರಣ ಇತ್ಯರ್ಥವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಚುನಾವಣಾ ಪ್ರಕರಣ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

      ತುರ್ವಿಹಾಳ ಬಿಜೆಪಿ ವರಿಷ್ಠರ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ತುಂಗಭದ್ರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕೃತವಾಗದ ಹಿನ್ನೆಲೆಯಲ್ಲಿ ಅವರು ಇದೇ ಹುದ್ದೆಯಲ್ಲಿ ಮುಂದುವರೆಯುವ ನಿರೀಕ್ಷೆಯಿದ್ದು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಹೇಳಲಾಗಿದೆ.

      ಭೋಗಸ್ ಮತದಾನದ ಪ್ರಕರಣದಿಂದಾಗಿ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿರಲಿಲ್ಲ. ಪ್ರತಾಪ್ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತಗಳಿಂದ ಬಸನಗೌಡ ತುರ್ವಿಹಾಳ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ಪ್ರತಾಪ್ಗೌಡ ಪುತ್ರಿ ವಿದೇಶದಲ್ಲಿದ್ದರೂ ಆಕೆಯ ಮತ ಚಲಾಯಿಸಲಾಗಿತ್ತು. ಈಹಿನ್ನೆಲೆಯಲ್ಲಿ ಪ್ರತಾಪ್ಗೌಡ ಅವರನ್ನು ಅಸಿಂಧುಗೊಳಿಸುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವುದರಿಂದ ಪ್ರತಾಪ್ಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೂ ಚುನಾವಣೆ ನಡೆದಿರಲಿಲ್ಲ. ಈಗ ಹಾದಿ ಸುಗಮವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap