ತುಮಕೂರು
ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸಾರ್ವಜನಿಕರೊಬ್ಬರನ್ನು ದಿಕ್ಕು ತಪ್ಪಿಸಿ ಸುಳ್ಳು ಅರ್ಜಿ ಬರೆದುಕೊಟ್ಟ ಮಧ್ಯವರ್ತಿ ವಿರುದ್ಧ ನಗರದ ತಿಲಕ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಇತ್ತೀಚೆಗೆ ಪಾಲಿಕೆ ಕಚೇರಿಗೆ ಜಗದೀಶ್ ಎಂಬುವವರು ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದರು. ಆಗ ಸಿದ್ಧಲಿಂಗಯ್ಯ ಎಂಬ ವ್ಯಕ್ತಿ ಇವರ ಬಳಿ ಬಂದಿದ್ದಾರೆ. ಸದರಿ ಮಗುವಿನ ಜನನ ದಿನಾಂಕ ಪಾಲಿಕೆ ಕಚೇರಿಯಲ್ಲಿ ಈಗಾಗಲೇ ನೋಂದಣಿ ಯಾಗಿದ್ದರೂ, ಸದರಿ ದಿನಾಂಕವನ್ನು ಇವರ ಇಚ್ಚೆಯಂತೆ ಬೇರೆಯಾಗಿ ಬದಲಿಸಿಕೊಡುವುದಾಗಿ ನಂಬಿಸಿ ಸುಳ್ಳು ಅರ್ಜಿಯನ್ನು ಬರೆಸಿದ್ದಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಪಾಲಿಕೆಯ ಜನನ ಮತ್ತು ಮರಣ ವಿಭಾಗದ ರಿಜಿಸ್ಟ್ರಾರ್ ಲೋಕೇಶ್ ಕುಮಾರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 1 ರಂದು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.