ಬೆಂಗಳೂರು
ವಿಚಾರವಾದಿ ಎಂ.ಎಂ ಕಲಬುರಗಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ಆರೋಪಪಟ್ಟಿ ಸಲ್ಲಿಸಲು ಸಿಐಡಿ ಅಧಿಕಾರಿಗಳು ಅಂತಿಮ ಸಿದ್ದತೆ ನಡೆಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹತ್ತು ಆರೋಪಿಗಳಾದ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ರಾಮಚಂದ್ರ ಬದ್ದಿ, ಅಮಿತ್ ದೆಗ್ವೇಕರ್, ಭರತ್ ಕುರ್ಣೆ, ಸುದನ್ವ, ರಾಜೇಶ್ ಬಂಗೇರ, ಸುಜಿತ್, ಶರದ್ ಕಲಸ್ಕರ್ ಸೇರಿ ಹತ್ತು ಜನರು ಕಲಬುರಗಿ ಪ್ರಕರಣದಲ್ಲಿ ಭಾಗಿಯಾಗಿರುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಗೌರಿ ಹತ್ಯೆಯ ಶರದ್ ಕಲಸ್ಕರ್, ಕಲಬುರಗಿ ಹತ್ಯೆಗೆ ಬಳಕೆಯಾಗಿದ್ದ ಬೈಕ್ ತಂದು ಕೊಟ್ಟಿದ್ದನು. ನಂತರ ಗಣೇಶ್ ಮಿಸ್ಕಿನ್ ಮತ್ತು ರಾಮಚಂದ್ರ ಬದ್ದ, ಗೌರಿ ಹತ್ಯೆ ಮತ್ತು ಕಲಬುರಗಿ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆ ಮಾಡಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ.
ಸದ್ಯ ಆರೋಪಿಗಳು ಪಿಸ್ತೂಲ್ ನಾಶ ಪಡಿಸಿದ್ದು, ಪಿಸ್ತೂಲ್ ಪತ್ತೆಗಾಗಿ ಎಸ್‍ಐಟಿ ಮತ್ತು ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.