ಜಾತಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ:

      ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಚಳ್ಳಕೆರೆ ತಾಲೂಕು ಗೌರಿಪುರದ ಮಕ್ಕಳು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

      ಸುಡುಗಾಡು ಸಿದ್ದ ಜಾತಿಗೆ ಸೇರಿದ ನಮ್ಮ ಪೂರ್ವಿಕರಿಂದ ಹಿಡಿದು ನಾವುಗಳು ನೂರಾರು ವರ್ಷಗಳಿಂದ ಗೌರಿಪುರ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ನಮ್ಮ ಜನಾಂಗವಿದೆ. ಸರ್ಕಾರದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರೂ ನಾವುಗಳು ಆ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೋರಿ ಹಲವಾರು ಬಾರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ನಮ್ಮ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ, ವಿದ್ಯಾರ್ಥಿ ವೇತನ, ವಸತಿ ನಿಲಯಗಳಿಗೆ ಪ್ರವೇಶ ಸಿಗುತ್ತಿಲ್ಲ. ಪ್ರೌಢಶಾಲೆ ಮಕ್ಕಳಾದ ನಮಗೆ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಪಠ್ಯಪುಸ್ತಕ, ಸಮವಸ್ತ್ರಗಳು ದೊರಕುತ್ತಿಲ್ಲ. ಬ್ಯಾಗ್, ಪುಸ್ತಕ, ಗುರುತಿನ ಚೀಟಿ ಹೀಗೆ ನಾನಾ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ರಜೆದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ಶಿಕ್ಷಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಂಡುಕೊಳ್ಳುವಂತಾಗಿದೆ ಎಂದು ತಮ್ಮ ಸಂಕಷ್ಟವನ್ನು ಜಿಲ್ಲಾಡಳಿತದ ಎದುರು ತೋಡಿಕೊಂಡರು.

     ಪರಿಶಿಷ್ಟ ಜಾತಿ ಪ್ರಮಾಣ ಪತ್ರವಿಲ್ಲದ ಕಾರಣಕ್ಕೆ ಪಡಿತರ ಚೀಟಿ ಪಡೆಯಲು ಆಗದೆ ಆಹಾರ ಧಾನ್ಯಗಳು ಕೈಗೆಸಿಗುತ್ತಿಲ್ಲ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲ. ವಸತಿ ಯೋಜನೆಯಂತೂ ಕನಸಿನ ಮಾತಾಗಿರುವುದರಿಂದ ಟೆಂಟ್‍ಗಳನ್ನು ಕಟ್ಟಿಕೊಂಡು ಪ್ರಾಣಭಯದಲ್ಲಿ ಜೀವಿಸುವಂತಾಗಿದೆ. ಸರ್ಕಾರದಿಂದ ಮನೆಗಳನ್ನು ನಿರ್ಮಿಸಿಕೊಡಬೇಕು. ಗ್ರಾಮದಲ್ಲಿ ಬೀದಿ ದೀಪವಿಲ್ಲದಿರುವುದರಿಂದ ರಾತ್ರಿ ವೇಳೆ ಕತ್ತಲೆಯಿಂದ ಕೂಡಿರುತ್ತದೆ. ಅರವತ್ತು ಕುಟುಂಬಗಳಲ್ಲಿ 30 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಇಡೀ ಗ್ರಾಮಕ್ಕೆ ಒಂದೆ ನೀರಿನ ಟ್ಯಾಂಕ್ ಇರುವುದರಿಂದ ಕುಡಿಯುವ ನೀರಿಗೂ ಪರದಾಡುವಂತಾಗಿದೆ ಎಂದು ಗೌರಿಪುರ ಗ್ರಾಮಸ್ಥರು ಹಾಗೂ ಮಕ್ಕಳು ಸಮಸ್ಯೆಗಳನ್ನು ಹೇಳಿಕೊಂಡರು.

      ವಿಮುಕ್ತಿ ವಿದ್ಯಾಸಂಸ್ಥೆಯ ಅನ್ನಪೂರ್ಣಮ್ಮ, ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್, ಕೆ.ಭೂಮಿಕ, ಎನ್.ಚಂದನ್, ಕೆ.ಗಾಯತ್ರಿ, ಎನ್.ನಂದಿತ, ಎಂ.ಕಾವ್ಯ, ಎಂ.ತ್ರಿಶ, ಜೆ.ಅಮೂಲ್ಯ, ಶಾಲಿನಿ, ಸಂಜಯ್, ಶಿವಪ್ರಸಾದ್, ನಾಗೇಂದ್ರ, ರೂಪ, ಸಾನಿಯಮಿರ್ಜಾ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link