ತಪ್ಪದೇ ಮತವೆಂಬ ಪರಮಾಧಿಕಾರ ಚಲಾಯಿಸಿ

ದಾವಣಗೆರೆ:

      ಮತದಾನವೇ ಪರಮಾಧಿಕಾರವಾಗಿದ್ದು, ಪ್ರತಿಯೊಬ್ಬರು ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗುವ ಮೂಲಕ ತಮ್ಮ ಪರಮಾಧಿಕಾರ ಚಲಾಯಿಸಬೇಕೆಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

      ಇಲ್ಲಿನ ಜಯದೇವ ವೃತ್ತದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಸವಕೇಂದ್ರ, ಶ್ರೀಮುರುಘಾಮಠ ಚಿತ್ರದುರ್ಗ ಮತ್ತು ಶ್ರೀಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮತದಾನ ಜಾಗೃತಿ ಪಾದಯಾತ್ರೆ ಅಭಿಯಾನ’ದ ನೇತೃತ್ವ ವಹಿಸಿ ಅವರು ಮಾತನಾಡಿದರು.

       ರಾಷ್ಟ್ರದ ಹಿತಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡುವುದು ಅತ್ಯವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಬಿಸಿಲು ಇದೆ ಎಂಬುದಾಗಿ ಭಾವಿಸಿ ಮನೆಯಲ್ಲಿ ಕುಳಿತುಕೊಳ್ಳದೇ ಪ್ರತಿಯೊಬ್ಬರೂ ಮತಗಟ್ಟೆಗೆ ತೆರಳಿ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಗೌರವ ತರಬೇಕೆಂದು ಕಿವಿಮಾತು ಹೇಳಿದರು.

       ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಮ್ಮನ್ನು ಆಳುವವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ನಮ್ಮ ಕೈಯಲ್ಲಿದೆ. ಮನೆಯಲ್ಲಿ ಇದ್ದುಕೊಂಡು ನಮ್ಮ ದೇಶ, ನಮ್ಮ ಪ್ರತಿನಿಧಿಗಳು ಹೀಗಿರಬೇಕು. ಹಾಗಿರಬೇಕೆಂಬುದಾಗಿ ಕನಸು ಕಾಣುವುದನ್ನು ಬಿಟ್ಟು, ಸಂವಿಧಾನದತ್ತವಾಗಿ ನಮಗೆ ದೊರೆತಿರುವ ತಮದಾನ ಎಂಬ ಹಕ್ಕು ಚಾಲಯಿಸಬೇಕು. ಮತ ಚಲಾಯಿಸದವರಿಗೆ ನಮ್ಮ ದೇಶ ಹಾಗೂ ಜನಪ್ರತಿನಿಧಿಗಳ ಬಗ್ಗೆ ಮಾತನಾಡುವ ನೈತಿಕತೆಯೇ ಇರುವುದಿಲ್ಲ ಎಂದರು.

         ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಸರ್ವೇಸಾಮಾನ್ಯ. ಇದರಿಂದ ವಂಚಿತರಾಗದೇ ಕೊಟ್ಟಿರುವ ಹಕ್ಕನ್ನು ಉಪಯೋಗಿಸಿಕೊಂಡು ಬಲಿಷ್ಠ ಭಾರತಕ್ಕೆ ಸಹಕರಿಸಬೇಕಾಗಿದೆ. ನಮ್ಮ ಓಟು ನೋಟಿಗೆ ಮಾರಾಟವಾಗಬಾರದು. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಶರಣರು `ನಾನು ಮತದಾನ ಮಾಡುತ್ತೇನೆ, ನೀವು ಮತದಾನ ಮಾಡಿ’ ಎಂದು ಸಾರ್ವಜನಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

         ಜಯದೇವ ವೃತ್ತದಿಂದ ಆರಂಭವಾದ ಮತದಾನ ಜಾಗೃತಿ ಪಾದಯಾತ್ರೆಯು ಪ್ರವಾಸಿ ಮಂದಿರ ರಸ್ತೆ, ಪಿ.ಬಿ. ರಸ್ತೆ, ಹಳೇ ಬಸ್ ನಿಲ್ದಾಣ, ಗಾಂಧಿ ವೃತ್ತ, ಅಶೋಕ ರಸ್ತೆ ಮೂಲಕ ಜಯದೇವ ವೃತ್ತಕ್ಕೆ ಮರಳಿ ಮುಕ್ತಾಯವಾಯಿತು.

       ಪಾದಯಾತ್ರೆಯಲ್ಲಿ ತೆರಳಿದ ಶರಣರು ಎಗ್ ರೈಸ್ ಗಾಡಿಗಳು, ಚಪ್ಪಲಿ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳಿಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡುವಂತೆ, ಮತದಾನದ ಮಹತ್ವವಿರುವ ಕರ ಪತ್ರ ನೀಡುವ ಮೂಲಕ ಜಾಗೃತಿ ಮೂಡಿಸಿದರು.

            ಈ ಸಂದರ್ಭದಲ್ಲಿ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಜಿಲ್ಲಾ ಪಂಚಾಯತ್ ಸಿಇಒ ಬಸವರಾಜೇಂದ್ರ, ಮಾಜಿ ಶಾಸಕ ಜಯಮಾನ್ ಮೋತಿ ವೀರಣ್ಣ, ಸಿಪಿಐ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ, ಹೆಚ್.ಜಿ.ಉಮೇಶ್, ರಾಘವೇಂದ್ರ ನಾಯರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಕಾಂಗ್ರೆಸ್ ಮುಖಂಡರಾದ ನಸೀರ್ ಅಹ್ಮದ್, ಮಠದ ಭಕ್ತರಾದ ಹಾಸಬಾವಿ ಕರಬಸಪ್ಪ, ಕಣಕುಪ್ಪಿ ಮುರುಗೇಶಪ್ಪ ಎಂ.ಜಯಕುಮಾರ್, ಶರಣಬಸವ, ರವಿ, ಲಂಬಿ ಮುರುಗೇಶ, ಬಾಡದ ಆನಂದರಾಜು, ಸೋಗಿ ಶಾಂತಕುಮಾರ್, ಗಿರೀಶ್ ದೇವರಮನೆ, ಎಂ.ಜಿ. ಶ್ರೀಕಾಂತ್, ಸುಮತಿ ಜಯಪ್ಪ, ಮಹಾದೇವಮ್ಮ, ಶರಣಬಸವ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap