ಡಿಕೆಶಿ ಮೇಲೆ ಇಡಿ ಮತ್ತು ಐಟಿ ದಾಳಿ ನಂತರ ಈಗ ಸಿಬಿಐ ದಾಳಿ..!

ಬೆಂಗಳೂರು

     ಐಟಿ,ಇಡಿ ಧಾಳಿಯಿಂದ ತತ್ತರಿಸಿ ಬಂಧನದಲ್ಲಿರುವ ಕಾಂಗ್ರೆಸ್ ನಾಯಕ,ಮಾಜಿ ಸಚಿವ ಡಿಕೆಶಿ ವಿರುದ್ಧ ಇದೀಗ ಸಿಬಿಐ ಮುಗಿಬಿದ್ದಿದೆ.ಸೋಲಾರ್ ಘಟಕ ಹಾಗೂ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಸಿಬಿಐ ಇಂದು ದೆಹಲಿಯ ಸಫ್ದರ್ ಜಂಗ್ ನಿವಾಸ ಸೇರಿದಂತೆ ಹಲವು ಕಡೆ ಧಾಳಿ ನಡೆಸಿದ್ದು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

    ಇದೇ ಕಾಲಕ್ಕೆ ಹರ್ಷ ಶುಗರ್ಸ್ ನಲ್ಲಿ ಡಿಕೆಶಿ ಪಾಲು ಇದೆಯಾ?ಎಂಬ ಕುರಿತೂ ಸಿಬಿಐ ವ್ಯಾಪಕ ತನಿಖೆ ಶುರು ಮಾಡಿದ್ದು ಆ ಮೂಲಕ ಕಳೆದ ಐವತ್ತು ದಿನಗಳಿಂದ ಬಂಧನದಲ್ಲಿರುವ ಡಿಕೆಶಿಗೆ ಮತ್ತೊಂದು ತಲೆನೋವು ಶುರುವಾಗಿದೆ.ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಸಹಕಾರಿ ಸಂಘಗಳಿಂದ ಅಮಾನ್ಯ ನೋಟುಗಳನ್ನು ಬದಲಿಸಿದ ಆರೋಪ ಮತ್ತು ಹಣವನ್ನು ಹವಾಲಾ ಮೂಲಕ ಬೇರೆಡೆ ಸಾಗಿಸಿದ ಆರೋಪದ ಮೇಲೆ ಡಿಕೆಶಿ ವಿರುದ್ಧ ಹೆಚ್ಚಿನ ತನಿಖೆ ನಡೆಸುವಂತೆ ಆರ್ಥಿಕ ಜಾರಿ ನಿರ್ದೇಶನಾಲಯ ಸಿಬಿಐಗೆ ಪತ್ರ ಬರೆದಿತ್ತು.

    ಇದುವರೆಗೆ ಐಟಿ ಹಾಗೂ ಇಡಿ ನಡೆಸಿರುವ ತನಿಖೆ ಮತ್ತು ಆ ಸಂಬಂಧಿತ ದಾಖಲೆಗಳನ್ನು ಸಿಬಿಐಗೆ ಒದಗಿಸಿದ್ದ ಸಂಬಂಧಪಟ್ಟ ತನಿಖಾ ಸಂಸ್ಥೆಗಳು:ಈ ಕುರಿತು ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ಹೇಳಿತ್ತು.ಡಿಕೆಶಿ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಖರೀದಿ ಹಾಗೂ ಸೋಲಾರ್ ಪ್ಲಾಂಟ್ ಅಳವಡಿಕೆ ವಿಷಯದಲ್ಲಿ ಭಾರೀ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಹೆಗಲಿಗೇರಿತ್ತು.

     ಅದನ್ನೂ ತನಿಖೆಯ ವ್ಯಾಪ್ತಿಗೆ ಸೇರಿಸಿಕೊಂಡಿರುವ ಆರ್ಥಿಕ ಜಾರಿ ನಿರ್ದೇಶನಾಲಯ,ಇದೇ ಕಾಲಕ್ಕೆ ಸಹಕಾರ ಸಂಘಗಳ ಮೂಲಕ ಶುಗರ್ ಫ್ಯಾಕ್ಟರಿ ಸ್ಥಾಪನೆಗೆ ಸಾಲ ಕೊಡಿಸಿದ್ದಲ್ಲದೆ ಎಪ್ಪತ್ತು ಕೋಟಿ ರೂಪಾಯಿಗಳಷ್ಟು ಮೂಲ ಬಂಡವಾಳ ಡಿಕೆಶಿಯಿಂದ ಹೂಡಿಕೆಯಾಗಿದೆ ಎಂಬುದು ಸಧ್ಯದ ಆರೋಪಗಳಲ್ಲಿ ಸೇರಿದೆ.

    ಹೀಗೆ ಐಟಿ,ಇಡಿ ನಂತರ ಸಿಬಿಐ ಕೂಡಾ ಡಿಕೆಶಿ ಮೇಲೆ ಮುಗಿ ಬಿದ್ದಿರುವ ಘಟನೆ ಸಹಜವಾಗಿಯೇ ಕಾಂಗ್ರೆಸ್ ಪಾಳೆಯವನ್ನು ತಲ್ಲಣಗೊಳಿಸಿದ್ದು ಮುಂದೇನು?ಎಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ