ದಾವಣಗೆರೆ:
ಅಪರಾಧ ಚಟುವಟಿಕೆ ತಡೆಯಲು ಜನನಿಬಿಡ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ನಗರದ ಬಾಪೂಜಿ ಬಿ-ಸ್ಕೂಲ್‍ನಲ್ಲಿ ಸೋಮವಾರ ಬಿಐಇಟಿ ಮತ್ತು ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‍ಮೆಂಟ್ ಅಂಡ್ ರಿಸರ್ಚ್ ಇವುಗಳು ಆಶ್ರಯದಲ್ಲಿ ಸೈಬರ್ ಕ್ರೈಮ್ ಮತ್ತು ಸಂಚಾರಿ ನಿಯಮ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಪ್ರಕಾರ 100ರಿಂದ 500 ಜನರು ಓಡಾಡುವ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ. ಇದರ ಪ್ರಕಾರ ಸಿಸಿ ಕ್ಯಾಮೇರಾ ಅಳವಡಿಸದ ಬೃಹತ್ ಕಟ್ಟಡಗಳು, ಅಪಾರ್ಟ್‍ಮೆಂಟ್, ಪೇಯಿಂಗ್ ಗೆಸ್ಟ್, ಹೋಟೆಲ್, ಲಾಡ್ಜ್‍ಗಳ ಮಾಲೀಕರ ವಿರುದ್ಧ ದಂಡವು ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದ್ದರಿಂದ ಎಲ್ಲರೂ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು ಜನರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ನಗರದಲ್ಲಿ ಕೆಲವರು ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಸಿಸಿ ಕ್ಯಾಮೆರಾ ಅಳವಡಿಸಲು ಯಾರೂ ಮುಂದಾಗುವುದಿಲ್ಲ. ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾದರೆ, ಸರಗಳ್ಳತನ ಸೇರಿದಂತೆ ಅಪರಾಧಗಳನ್ನು ಪತ್ತೆ ಹಚ್ಚಲು ಹಾಗೂ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಹಕಾರ ಆಗಲಿದೆ. ಬಡಾವಣೆಯಲ್ಲಿನ ನಾಗರಿಕರ ಹಿತರಕ್ಷಣಾ ಸಂಸ್ಥೆಗ¼ ಸಿಸಿಟಿವಿ ಅಳವಡಿಕೆಗೆ ಜನರಿಗೆ ಉತ್ತೇಜನ ಕೊಡಬೇಕು ಎಂದರು.
ರಸ್ತೆ ಸುರಕ್ಷತೆಯನ್ನು ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಪಾಲನೆ ಮಾಡದಿರುವುದು ದುರ್ದೈವದ ಸಂಗತಿ. ಅದರಲ್ಲೂ ಯುವಸಮೂಹ ರಸ್ತೆ ನಿಯಮಗಳನ್ನು ಪಾಲಿಸುವುದಿಲ್ಲ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ನಾಲ್ಕು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕುಡಿದು, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಮತ್ತು ಮೊಬೈಲ್‍ನಲ್ಲಿ ಮಾತನಾಡುತ್ತ ಚಾಲನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸುಮಾರು 300 ಜನರು ಅಪಘಾತದಲ್ಲಿ ಸಾವು ಕಾಣುತ್ತಿದ್ದಾರೆ. ಇದಕ್ಕೆ ಮುಖ್ಯಕಾರಣ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು. ದಾವಣಗೆರೆಯಲ್ಲಿ ಇಷ್ಟು ಜನರು ಸಾವು ಕಾಣುತ್ತಿದ್ದರೆ ಇನ್ನೂ ಕರ್ನಾಟಕ, ಭಾರತ ದೇಶದಲ್ಲಿ ಎಷ್ಟು ಜನರು ಮರಣ ಹೊಂದುತ್ತಿದ್ದಾರೆ ಎನ್ನುವುದನ್ನು ನಾವುಗಳು ಗಮನ ಹರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಮೂಲಕ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ನಾಗರೀಕನೂ ಪೊಲೀಸರ ಕೆಲಸ ನಿರ್ವಹಿಸಬಹುದು. ಜವಾಬ್ದಾರಿ ಮತ್ತು ಶಿಸ್ತಿನಿಂದ ವರ್ತಿಸುವ ಮೂಲಕ, ರಸ್ತೆ ಅಪಘಾತಕ್ಕೀಡಾದವರನ್ನು ರಕ್ಷಿಸುವ ಮೂಲಕ ಹೀಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ವ್ಯಕ್ತಿ ಪೊಲೀಸ್ ಅಗಬಹುದು. ರಸ್ತೆ ಅಪಘಾತಕ್ಕೀಡಾದವರನ್ನು ಜನರು ರಕ್ಷಿಸಲು ಹಿಂದೆ ಕಾನೂನು ಕಟ್ಟಲೆಗೆ ಒಳಗಾಗಬೇಕೆಂದು ಹಿಂಜರಿಯುತ್ತಿದ್ದರು. ಆದರೆ, ಈಗ ಕಾನೂನು ತಿದ್ದುಪಡಿಯಾಗಿದ್ದು ರಕ್ಷಕರಿಗೆ ಯಾವುದೇ ಕಾನೂನಿನ ಕಟ್ಟಲೆಗಳು ಇರುವುದಿಲ್ಲ. ಹೀಗಾಗಿ ಎಲ್ಲರೂ ರಕ್ಷಣೆಗೆ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ವೈಯಕ್ತಿಕ ರಕ್ಷಣೆ, ದೇಶದ ಕಾನೂನು, ಸುವ್ಯವಸ್ಥೆ, ರಸ್ತೆ ಸಂಚಾರಿ ನಿಯಮ ಸೇರಿದಂತೆ ಎಲ್ಲ ನಿಯಮಗಳು ಮತ್ತು ಶಿಸ್ತು ಪಾಲನೆಯಲ್ಲಿ ಸಮುದಾಯದ ಸಹಭಾಗಿತ್ವದ ಪಾತ್ರ ದೊಡ್ಡದಿರುತ್ತದೆ. ಸಮುದಾಯ ಎಂದರೆ ಈ ದೇಶದ ಜನತೆ. ಈ ಸಮುದಾಯ ಶಿಸ್ತಿನಿಂದ ಉತ್ತಮ ಕಾರ್ಯಗಳಲ್ಲಿ ಕೈಜೋಡಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊನ್ನಾಳಿ ಸಿಪಿಐ ದೇವರಾಜ್, ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ, ಪ್ರಾಂಶುಪಾಲ ತ್ರಿಭುವಾನಂದ ಇದ್ದರು. ಸೌಂದರ್ಯ, ವನಿಶಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
