ತುಮಕೂರು
ತುಮಕೂರು ನಗರದಲ್ಲಿ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದರೂ ಕೆಲವು ಪಟ್ಟಭದ್ರಹಿತಾಸಕ್ತಿಗಳ ಕೈವಶವಾಗಿದ್ದ “ಶುದ್ಧ ಕುಡಿಯುವ ನೀರಿನ ಘಟಕ” (ಆರ್.ಓ. ಪ್ಲಾಂಟ್ಸ್) ಗಳನ್ನು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಪಾಲನ್ ಅವರು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಪಾಲಿಕೆಯ ಸುಪರ್ದಿಗೆ ತೆಗೆದುಕೊಂಡ ಮಹತ್ವದ ಬೆಳವಣಿಗೆ ಇತ್ತೀಚೆಗೆ ನಡೆದಿತ್ತು.
ಇದೀಗ ಸದರಿ ಘಟಕಗಳ ಸುರಕ್ಷತೆ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮಹತ್ವದ ಕ್ರಮಕ್ಕೆ ಆಯುಕ್ತರು ಮುಂದಾಗಿದ್ದಾರೆ.
ಇದರ ಮೊದಲನೇ ಹಂತವಾಗಿ ಇದೀಗ ನಗರದ 18 ನೇ ವಾರ್ಡ್ ವ್ಯಾಪ್ತಿಯ ಶಾಂತಿನಗರದ ಜಗಜ್ಯೋತಿ ರಸ್ತೆಯಲ್ಲಿರುವ ನೀರಿನ ಘಟಕ ಮತ್ತು 29 ನೇ ವಾರ್ಡ್ ವ್ಯಾಪ್ತಿಯ ಮರಳೂರು ದಿಣ್ಣೆಯಲ್ಲಿರುವ ನೀರಿನ ಘಟಕಕ್ಕೆ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದಾಗಿ ಘಟಕದ ಒಳಗೆ ಮತ್ತು ಹೊರಗಿನ ಎಲ್ಲ ಚಟುವಟಿಕೆಗಳೂ ಇದರಲ್ಲಿ ದಾಖಲಾಗುವಂತಾಗಿದೆ.
ಇದಲ್ಲದೆ ಪಾಲಿಕೆ ಸುಪರ್ದಿನಲ್ಲಿರುವ ಎಲ್ಲ ನೀರಿನ ಘಟಕಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿಯವರಿಗೆ ಷರತ್ತುಗಳನ್ವಯ ನೀಡಲು ಹಾಗೂ ಆ ಘಟಕಗಳಿಂದ ಪಾಲಿಕೆಗೆ ನಿಗದಿತ ಸಂಪನ್ಮೂಲ ಸಂಗ್ರಹ ಆಗುವಂತೆ ಮಾಡಲು ಆಯುಕ್ತ ಭೂಪಾಲನ್ ಯೋಜನೆ ಹಾಕಿಕೊಂಡಿದ್ದಾರೆಂದು ಮೂಲಗಳು ಹೇಳಿವೆ.
ಆಯುಕ್ತ ಭೂಪಾಲನ್ ಅವರು ಮೇ 8 ರಂದು ಸ್ವತಃ ಕಾರ್ಯಾಚರಣೆ ನಡೆಸಿ ನೀರಿನ ಘಟಕಗಳನ್ನು ಪಾಲಿಕೆಯ ವಶಕ್ಕೆ ತೆಗೆದುಕೊಂಡಿದ್ದರು. ಅಂದಿನಿಂದ ಅದನ್ನು ಪಾಲಿಕೆಯೇ ನಿರ್ವಹಿಸುವಂತೆ ಮಾಡಿದ್ದರು. ಅದರ ಫಲವಾಗಿ ಸದರಿ ನೀರಿನ ಘಟಕಗಳಿಂದ ಮೇ 8 ರಿಂದ ಮೇ 24 ರವರೆಗೆ ಕೇವಲ 17 ದಿನಗಳ ಅವಧಿಯಲ್ಲಿ ಪಾಲಿಕೆಗೆ 3,66,678 ರೂ.ಗಳು ಸಂಗ್ರಹವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.