ಬೆಂಗಳೂರು
ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಅಂದಾಜು 10 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕೇರಳ ಮೂಲದ ಶಾಕೀರ್ (32), ನಜೀಲ್ (30), ಎಂ. ಮುಹಮ್ಮದ್ ಜಿಯಾದ್ ಬಂಧಿತ ಆರೋಪಿಗಳು.ನಗರದ ಬೇಗೂರಿನ ಮನೆಯೊಂದರಲ್ಲಿ ಮಾದಕ ವಸ್ತುಗಳಾದ ಹ್ಯಾಶಿಶ್, ಗಾಂಜಾ, ಎಂಡಿಎಂಎ ಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 1ಕೆಜಿ 125 ಗ್ರಾಂ ಸೆಮಿ ಸ್ಯಾಲಿಡ್ ಹ್ಯಾಶಿಶ್ ಆಯಿಲ್, 2 ಕೆ ಜಿ 200 ಗ್ರಾಂ ತೂಕದ ಗಾಂಜಾ ಹಾಗೂ 12 ಗ್ರಾಂ ಎಂಡಿಎಂಎ, 3 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಆಂದ್ರಪ್ರದೇಶದ ವೈಜಾಕ್ ಹೋಗಿ ಡ್ರಗ್ಸ್ ಪೆಡ್ಲರ್ ಗಳನ್ನು ಸಂಪರ್ಕಿಸಿ, ಕಡಿಮೆ ಬೆಲೆಯಲ್ಲಿ ಮಾದಕ ವಸ್ತುಗಳನ್ನು ಖರೀದಿಸಿ, ಬೆಂಗಳೂರಿಗೆ ತಂದು ತಮ್ಮ ಪರಿಚಿತ ಕಾಲೇಜು ವಿದ್ಯಾರ್ಥಿ ಹಾಗೂ ಇತರ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತ ಡಾ.ಎಚ್ ಎನ್ ವೆಂಕಟೇಶ್ ಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








