ಶಾಂತಿ-ಸೌಹಾರ್ದದಿಂದ ದಸರಾ ಆಚರಿಸಿ

ದಾವಣಗೆರೆ:

      ಯಾವುದೇ ವದಂತಿಗಳಿಗೆ ಕಿವಿಗೊಡದೇ, ಎಲ್ಲಾ ಧರ್ಮಿಯರು ಸೇರಿ ನಾಡ ಹಬ್ಬ ವಿಜಯ ದಶಮಿಯನ್ನು ಶಾಂತಿ-ಸೌಹಾರ್ದದಿಂದ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಕರೆ ನೀಡಿದರು.

      ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಂಜೆ ವಿಜಯ ದಶಮಿ ಹಬ್ಬ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ನಾಗರೀಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಕಿಡಿಗೇಡಿಗಳು ವದಂತಿ ಹರಡುವುದು ಹೆಚ್ಚು. ಹೀಗಾಗಿ ವದಂತಿಗಳಿಗೆ ನಾಗರೀಕರು ಕಿವಿಕೊಡಬಾರದು. ಅಕಸ್ಮಾತ್ ವದಂತಿ ನಿಮ್ಮ ಕಿವಿಗೆ ಬಿದ್ದರೆ, ಇಲಖೆಯ ಗಮನಕ್ಕೆ ತನ್ನಿ, ಅದನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ ಎಂದರು.

      ಹಿರಿಯರ ಮಾರ್ಗದರ್ಶನದಿಂದ ನಗರದಲ್ಲಿ ಶಾಂತಿ ನೆಲೆಸಿದೆ. ಹೀಗಾಗಿ ಹಿಂದೆ ಹಬ್ಬದ ಸಂದರ್ಭದಲ್ಲಿ ನಡೆಸುತ್ತಿದ್ದ ಶಾಂತಿ ಸಭೆ, ಈಗ ನಾಗರೀಕ ಸೌಹಾರ್ದ ಸಭೆಯಾಗಿ ಮಾರ್ಪಟ್ಟಿದೆ. ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅತೀ ಮುಖ್ಯವಾಗಿದೆ ಎಂದು ಹೇಳಿದರು.

     ಹಿರಿಯರು ಮಾರ್ಗದರ್ಶಕರಾಗಿ ಮುಂದೆ ನಿಂತು, ಕಿರಿಯರಿಗೆ ಮಾರ್ಗದರ್ಶನ ಮಾಡಿದರೆ, ಮುಂದಿನ ಪೀಳಿಗೆಗೆ ಈ ಶಾಂತಿ-ಸೌಹಾರ್ದತೆಯನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿದೆ ಎಂದರು.

     ಹಿಂದೂ ಸಮಾಜದ ಹಿರಿಯ ಮುಖಂಡ ಕೆ.ಬಿ.ಶಂಕರನಾರಾಯಣ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಈಗಾಗಲೇ ನಗರದಲ್ಲಿ ಶರನ್ನವರಾತ್ರಿ ಆರಂಭವಾಗಿದೆ. ವಿಜಯದಶಮಿಯ ಪ್ರಯುಕ್ತ ಅ.19ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಏರ್ಪಡಿಸಲಾಗಿದ್ದು, ಅನೇಕ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಯಾರೂ ಸಹ ಮದ್ಯಪಾನ ಮಾಡಿ ಮೆರವಣಿಯಲ್ಲಿ ಭಭಾಗವಹಿಸಬಾರದು. ಮುಸ್ಲಿಂ ಸಮುದಾಯದ ಹಬ್ಬ ಹರಿದಿನಗಳಲ್ಲಿ ಯಾವ ಮುಸ್ಲಿಂ ಬಾಂಧವರು ಸಹ ಮದ್ಯ ಸೇವನೆ ಮಾಡುವುದಿಲ್ಲ. ಆದರೆ, ಹಿಂದೂ ಸಮಾಜದ ಹಬ್ಬಗಳಲ್ಲಿ ಕೆಲ ಯುವಕರು ಮದ್ಯಪಾನ ಮಾಡಿ ಭಾಗವಹಿಸುತ್ತಿರುವುದು ಅತ್ಯಂತ ವಿಷಾಧನೀಯವಾಗಿದೆ. ಇದು ಮರುಕಳಿಸದಂತೆ ಸಹಕರಿಸಬೇಕೆಂದು ಸಲಹೆ ನೀಡಿದರು.

     ತಂಜಿಮಿಲ್ ಸಮಿತಿಯ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿ, ಪೊಲೀಸರು ಇಂಥಹ ಸಭೆಗೆ ನಮ್ಮನ್ನು ಕರೆಯುವ ಬದಲು, ಎಲ್ಲ ಸಮಾಜದ ನಾಯಕರು ಒಗ್ಗೂಡಿ ಸೌಹಾರ್ದ ಸಭೆಯನ್ನು ಆಯೋಜಿಸಿ ಪೊಲೀಸರನ್ನು ಸಭೆಗೆ ಆಹ್ವಾನಿಸುವ ವಾತಾವರಣ ಸೃಷ್ಠಿಯಾಗಬೇಕು. 1990ರ ಹಿಂದೆ ದಸರಾ ಮಹೋತ್ಸವ ಸಾಮರಸ್ಯದಿಂದ ನಡೆಯುತಿತ್ತು. ಆದರೆ, ಪ್ರಸ್ತುತ ಕಾಲ ಮತ್ತು ಮನುಷ್ಯನ ಮನಸ್ಥಿತಿ ಬದಲಾಗಿದೆ. ಹೀಗಾಗಿ ಇತ್ತೀಚೆಗೆ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮದ್ಯಪಾನ ನಿಷೇಧಿಸಬೇಕು. ಅಕ್ರಮವಾಗಿ ಮದ್ಯ ಮಾರಾಟಮಾಡುವವರಿಗೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಿಸಿ ಮುಟ್ಟಿಸಬೇಕೆಂದು ಮನವಿ ಮಾಡಿದರು.

     ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ ಮಾತನಾಡಿ, ಎಲ್ಲ ಧರ್ಮಿಯರು ಸೇರಿ ವಿಜಯದಶಮಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಣೆ ಮಾಡೋಣ. ಹಬ್ಬದ ಪ್ರಯುಕ್ತ ಏರ್ಪಡಿಸಿರುವ ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಇರುವ ಅಡೆತಡೆಗಳನ್ನು ಪಾಲಿಕೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

      ಮಹಾನಗರ ಪಾಲಿಕೆ ಉಪಮೇಯರ್ ಚಮನ್‍ಸಾಬ್ ಮಾತನಾಡಿ, ನಮ್ಮ ಹಿರಿಯರು ಕಾಯಕದಲ್ಲಿಯೇ ಧರ್ಮವನ್ನು ಕಾಣುತ್ತಿದ್ದರು. ಆದರೆ, ಇಂದು ಧರ್ಮವನ್ನು ನೋಡುವ ದಾರಿ ಬದಲಾಗಿದೆ. ಹೀಗಾಗಿ ಹಬ್ಬದ ಸಂದರ್ಭಗಳಲ್ಲಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಇದಕ್ಕೆ ಯಾರೂ ಆಸ್ಪದ ನೀಡದೇ, ವಿಜಯದಶಮಿ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡೋಣ ಎಂದರು.

     ಸಿಎಸ್‍ಐ ಚರ್ಚಿನ ಧರ್ಮಗುರು ಫಾ.ಡ್ಯಾನಿಯಲ್ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಧರ್ಮ ಸಮ್ಮೇಳನಗಳ ಬದಲು ಧರ್ಮ ಸಮ್ಮಿಲನವಾಗಬೇಕಾದ ಅವಶ್ಯಕತೆ ಇದೆ. ಅಂಥಹ ಉತ್ತಮ ದಿನಗಳು ಬರಲಿವೆ. ಆದರೆ, ಅಲ್ಲಿಯವರೆಗೂ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಎಂದರು.

     ಶ್ರೀದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟಿ ಗೌಡ್ರು ಚನ್ನಬಸಪ್ಪ ಮಾತನಾಡಿ, ಪೊಲೀಸ್ ಇಲಾಖೆಯ ಸಹಕಾರದಿಂದ ಕಳೆದ ಹಲವರು ವರ್ಷಗಳಿಂದ ಎಲ್ಲ ಹಬ್ಬಗಳು ಸುಗಮವಾಗಿ ಆಚರಣೆ ಆಗುತ್ತಿವೆ. ಇದೆಲ್ಲದರ ನಡುವೆ ಪೋಷಕರು ವಯಸ್ಸಿಗೆ ಬಂದ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡಬೇಕೆಂದು ಕಿವಿಮಾತು ಹೇಳಿದರು.

     ನಾಗರೀಕ ಸೌಹಾರ್ದ ಸಭೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಡಿವೈಎಸ್‍ಪಿ ಗೋಪಾಲಗೌಡ, ನಾಗರಾಜ್, ವೃತ್ತ ನಿರೀಕ್ಷಕ ಉಮೇಶ್, ಮುಖಂಡರಾದ ವೈ.ಮಲ್ಲೇಶ್, ಎ.ನಾಗರಾಜ್, ಬರ್ಕತ್ ಪೈಲ್ವಾನ್, ದೇವರಮನಿ ಶಿವಕುಮಾರ್, ಬಸವರಾಜ್ ಗುಬ್ಬಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link