ದಾವಣಗೆರೆ:
ಪಟಾಕಿ ಹಚ್ಚದೇ, ದೀಪ ಬೆಳಗಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಬೇಕೆಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.
ನಗರದ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಶನಿವಾರ ಪರಿಸರ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸೆಟ್‍ಡೆಮ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸುರಕ್ಷಾ ದೀಪಾವಳಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೀಪಾವಳಿಯು ಜ್ಞಾನ ಹಾಗೂ ಬೆಳಕಿನ ಸಂಕೇತವಾಗಿದ್ದು, ಅಜ್ಞಾನದಿಂದ ಜ್ಞಾನದ ಕಡೆಗೆ ಹಾಗೂ ಕತ್ತಲಿನಿಂದ ಬೆಳಕಿನ ಎಡೆಗೆ ಕರೆದೊಯ್ಯುವ ಹಬ್ಬವಾಗಿದೆ ಎಂದರು.
ದೀಪಾವಳಿ ಹಬ್ಬದಲ್ಲಿ ದೀಪದ ಬೆಳಕು ಎಣ್ಣೆ ಇರುವವರೆಗೂ ಮಾತ್ರ ಇರುತ್ತದೆ. ಆದರೆ, ನಮ್ಮ ಒಳಗೆ ಇರುವ ಅರಿವಿನ ದೀಪ ನಿರಂತರವಾಗಿ ಹೊತ್ತಿ ಹುರಿಯುತ್ತಿರಬೇಕು. ಯಾರು ಸೌಜನ್ಯ, ಸಂಸ್ಕಾರದಿಂದ ನಡೆದುಕೊಳ್ಳುತ್ತಾರೋ ಅವರು ಜ್ಞಾನಿಗಳು. ತಪ್ಪುಗಳನ್ನು ಬಿಟ್ಟು ಸನ್ಮಾರ್ಗದ ಕಡೆ ಹೋಗಬೇಕು. ಸದಾ ಕಾಲ ಜಾಗೃತರಾಗಿರಬೇಕು. ಸನ್ನಿವೇಶಕ್ಕೆ ಬದುಕನ್ನು ಬದಲಾಯಿಸಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದರು.
ಈಗಾಗಲೇ ದೀಪಾವಳಿ ಹಬ್ಬದ ಪಟಾಕಿ ಹೊಡೆಯುವುದರಿಂದ ಲಕ್ಷಾಂತರ ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಇದರಿಂದ ಜೀವನ ಪೂರ್ತಿ ಕತ್ತಲಲ್ಲಿಯೇ ಕಳೆಯಬೇಕಾಗುತ್ತದೆ. ಆದ್ದರಿಂದ ಹಬ್ಬದಲ್ಲಿ ಸಣ್ಣಪುಟ್ಟ ಪಟಾಕಿ ಹಚ್ಚಿ ಸುರಕ್ಷತೆಯಿಂದ ದೀಪಾವಳಿ ಆಚರಿಸಬೇಕೆಂದು ಸಲಹೆ ನೀಡಿದರು.
ದೀಪಾವಳಿಯನ್ನು ಆದಷ್ಟು ದೀಪ ಹಚ್ಚುವ ಮೂಲಕ ಕುಟುಂಬ ಸಮೇತ ಖುಷಿಯಿಂದ ಆಚರಣೆ ಮಾಡಬೇಕು. ಈಗಾಗಲೇ ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್ ಹಬ್ಬದ ದಿನದಂದು ಎರಡು ತಾಸು ಪಟಾಕಿ ಹಚ್ಚುವಂತೆ ಆದೇಶ ನೀಡಿದೆ. ದೆಹಲಿಯಲ್ಲಿ ಪಟಾಕಿ ಹೊಡೆಯುವುದಕ್ಕೆ ಅವಕಾಶವೇ ನೀಡಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಹಬ್ಬ ಹರಿದಿನಗಳು ಯಾರಿಗೆ ತೊಂದರೆಯಾಗದಂತೆ ಆಚರಿಸಬೇಕು. ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದರಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದ್ದು, ಆದರ ಹೊರತಾಗಿ ದೀಪ ಹಚ್ಚಿ ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಿಸಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್ ಮಾತನಾಡಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶೇ.50ರಷ್ಟು ಜನರು ಪಟಾಕಿ ಸಿಡಿಸಿಯೇ ಹಬ್ಬ ಆಚರಿಸುತ್ತಾರೆ. ಆದರೆ, ಪಟಾಕಿ ಸಿಡಿಸುವುದಕ್ಕಿಂತ ಮುಂಚೆಯೇ ಪರಿಸರದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು. ವಾತಾವರಣದ ವಾಯುಮಾಲಿನ್ಯಕ್ಕೆ ನಾವುಗಳೇ ಕಾರಣೀಕರ್ತರಾಗುತ್ತಿದ್ದೇವೆ. ಆದ್ದರಿಂದ ಅದಷ್ಟು ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು. ಪಟಾಕಿಯಲ್ಲಿ ರಾಸಾಯನಿಕ ವಸ್ತು ಬಳಸಲಾಗಿದ್ದು, ಇದರಿಂದ ಮನುಷ್ಯ, ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಪಟಾಕಿ ಹಚ್ಚುವುದರಿಂದ ಕಣ್ಣು ಹುರಿ, ಚರ್ಮದ ಕಾಯಿಲೆ, ಕೆಮ್ಮು, ಜ್ವರ, ತೆಲೆನೋವು ಬರಲಿದೆ. ಆದ್ದರಿಂದ ಸ್ವಚ್ಛ, ಸ್ನೇಹ ಪರಿಸರಕ್ಕೆ ಪೂರಕವಾಗಿ ಹಬ್ಬ ಆಚರಿಸೋಣ ಎಂದರು.
ಮರು ಬಳಕೆಯಾದ ತ್ಯಾಜ್ಯ:
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಸ್ಟೀನ್ ಡಿಸೋಜಾ, ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗೋಪಾಲಗೌಡ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್.ದೇವರಮನೆ, ಸೆಟ್‍ಡಮ್ಸ್ ಅಧ್ಯಕ್ಷ ಆರ್.ಬಿ.ಹನುಮಂತಪ್ಪ, ಜನಸಾಮಾನ್ಯರ ಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನ ಬೆಳಕೆರೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ