ದಾವಣಗೆರೆ:
ಹಬ್ಬದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಧರ್ಮ-ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುವ ಸಂದೇಶಗಳನ್ನು ಹಾಗೂ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾರೆ. ಇದಕ್ಕೆ ಕಿವಿಗೊಡದೇ, ಶಾಂತಿಯುತವಾಗಿ ರಂಜಾನ್ ಹಬ್ಬ ಆಚರಿಸಲು ಸರ್ವ ಧರ್ಮಿಯರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ, ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಆಚರಿಸುವ ಹಬ್ಬಗಳು ಸಂತಸ-ಸೌಹಾರ್ದದಿಂದ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಪರಸ್ಪರ ನೆರೆಹೊರೆಯವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಬ್ಬಗಳು ಪೂರಕವಾಗಿರಬೇಕಾಗಿದ್ದು, ಆಯಾ ಸಮಾಜದ ಮುಖಂಡರು ಮತ್ತು ಹಿರಿಯರು ಯುವಜನತೆಗೆ ತಿದ್ದಿ ಬುದ್ದಿಹೇಳುವ ಮೂಲಕ ಧಾರ್ಮಿಕ ಹಬ್ಬಗಳಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.
ಮುಂದಿನ ವಾರ ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್ ಆಚರಿಸಲಾಗುತ್ತದೆ. ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿವಿಧ ಸಮಾಜದ ಬಾಂಧವರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ಪ್ರತಿ ಬಾರಿಯಂತೆ ಈ ಬಾರಿಯು ಜಿಲ್ಲೆಯಲ್ಲಿ ರಂಜಾನ್ ಹಬ್ಬವು ಶಾಂತಿಯುತವಾಗಿ ಜರುಗುವಂತೆ ಕ್ರಮವಹಿಸಲಾಗುತ್ತಿದ್ದುಮ ಅವಶ್ಯವಿರುವ ಬಂದೋಬಸ್ತ್ ನೀಡಲಾಗುವುದು ಎಂದರು.
ಸೌಹಾರ್ದ ಸಭೆಗಳು ಶಾಂತಿ ಕದಡುವಂತಹವರನ್ನು ಎಚ್ಚರಿಸಲಿವೆ. ಮಹಾನಗರ ಪಾಲಿಕೆಯ ವತಿಯಿಂದ ರಂಜಾನ್ ಪ್ರಾರ್ಥನೆಗೆ ತೆರಳುವ ಈದ್ಗಾ ಮೈದಾನ, ಮಸೀದಿ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಬೇಕಾದ ನೀರು, ವಿದ್ಯುತ್ ದೀಪ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಮುಂಬರುವ 5 ತಿಂಗಳಿನವರೆಗೆ ವಿವಿಧ ಧರ್ಮಗಳ ಹಬ್ಬ ಆಚರಣೆಗಳಿದ್ದು, ಇದಕ್ಕೆ ಸರ್ವ ಧರ್ಮಿಯರು ಪರಸ್ಪರ ಶಾಂತಿ ಕಾಪಾಡಲು ಸಹಕರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಹಿಂದು ಸಮಾಜದ ಮುಖಂಡ ಕೆ.ಬಿ.ಶಂಕರ್‍ನಾರಾಯಣ್ ಮಾತನಾಡಿ, ಹಬ್ಬ ಆಚರಣೆಯ ಸಂದರ್ಭದಲ್ಲಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಅಹಿತರಕರ ಘಟನೆಗಳು ಸಂಭವಿಸಿಲ್ಲ. ಮುಂದೆಯೂ ಸಂಭವಿಸದಂತೆ ಎಲ್ಲಾ ಧರ್ಮದ ಮುಖಂಡರು ಸಹಕಾರ ನೀಡಬೇಕು. ಇಂತಹ ಸೌಹಾರ್ದ ಸಭೆಗಳಿಂದಾಗಿ ವಿವಿಧ ಸಮಾಜದವರ ಮಧ್ಯೆ ಭಾಂಧವ್ಯ ಹೆಚ್ಚಾಗಿ ಅಹಿತಕರ ಘಟನೆಗಳು ಸಂಭವಿಸುವ ಸಂದರ್ಭ ಬರುವುದಿಲ್ಲ. ಹಾಗಾಗಿ ಬೇರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಆಯಾ ಧರ್ಮದ ಧಾರ್ಮಿಕ ಆಚರಣೆಗಳಿಗೆ ಎಲ್ಲಾ ಧರ್ಮದವರು ಜೊತೆಗೂಡಿ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸೋಣ ಎಂದರು.
ಮುಸ್ಲಿಂ ಸಮುದಾಯದ ಮುಖಂಡ ಜೆ.ಅಮಾನುಲ್ಲಾ ಖಾನ್ ಮಾತನಾಡಿ, ವಿಶ್ವದಾದ್ಯಂತ ಒಂದೇ ಬಾರಿಗೆ ರಂಜಾನ್ ಆಚರಿಲಾಗುವುದು. 30 ದಿನಗಳ ಕಾಲ ನಿಗದಿತ ಸಮಯದಲ್ಲಿ ಉಪವಾಸವಿದ್ದು ಹಬ್ಬ ಆಚರಿಸುವುದು ರಂಜಾನ್‍ನ ವಿಶೇಷವಾಗಿದೆ ಎಂದರು.
ಇಸ್ಲಾಂ ಧರ್ಮಿಯರು ಇದೇ ತಿಂಗಳ 6 ಅಥವಾ 7 ರಂದು ಆಚರಿಸುವ ರಂಜಾನ್ ಹಬ್ಬವು ಜಿಲ್ಲೆಯಲ್ಲಿ ಶಾಂತಿಯಿಂದ ನಡೆಯುವುಂತೆ ಎಲ್ಲಾ ಧರ್ಮ ಮತ್ತು ಸಮಾಜದ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಿಪಿಐ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಇಸ್ಲಾಂ ಧರ್ಮದವರು ಆಚರಿಸುವ ರಂಜಾನ್ ಹಬ್ಬ ಆತ್ಮೀಯತೆಯನ್ನು ಬೆಸೆಯುವ ಹಬ್ಬವಾಗಿದೆ. ಜಿಲ್ಲೆಯಲ್ಲಿ ಈ ಬಾರಿಯು ರಂಜಾನ್ ಹಬ್ಬವನ್ನು ಎಲ್ಲಾ ಧರ್ಮದವರು ಸಂತೋಷವಾಗಿ ಆಚರಿಸಲು ಸಹಕರಿಸಿ ವೈವಿಧ್ಯೆತೆಯಲ್ಲಿ ಏಕತೆಯನ್ನುಂಟು ಮಾಡೋಣ ಎಂದರು. ಧರ್ಮಗಳ ಮಧ್ಯೆ ಶಾಂತಿ, ಸೌಹಾರ್ದ ಬೆಳಸಲು ಇಂತಹ ಸಭೆಗಳು ಸಹಕಾರಿ. ಈ ಸಭೆಯನ್ನು ಆಯೋಜಿಸಿದ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿ, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಧಾರ್ಮಿಕ ಆಚರಣೆಗಳು ಶಾಂತಿಯುತವಾಗಿ ನಡೆಯುವಂತೆ ಮಾಡೋಣ, ಇದು ಎಲ್ಲಾ ಧರ್ಮದ ಮುಖಂಡರ ಕರ್ತವ್ಯ ಎಂದರು.ಸಭೆಯಲ್ಲಿ ಹೆಚ್ಚುವರಿ ಎಸ್ಪಿ ಟಿ.ಜೆ.ಉದೇಶ್, ಪೊಲೀಸ್ ಉಪಾಧೀಕ್ಷಕ ನಾಗರಾಜ್, ತಹಶೀಲ್ದಾರ್ ವಿಜಯ್‍ಕುಮಾರ್, ಸಿಪಿಐ ಇ.ಆನಂದ್ ಮತ್ತಿತರರು ಭಾಗವಹಿಸಿದ್ದರು.