ದಾವಣಗೆರೆ
ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಶ್ರೀಮಠದ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿಯವರ ಜನ್ಮದಿನವಾಗಿರುವ ಏ.1ರಂದು ನಾಲೆಡ್ಜ್ ಡೇಯನ್ನಾಗಿ (ಜ್ಞಾನ ದಿನಾಚರಣೆ) ಸರ್ಕಾರ ಆಚರಿಸಬೇಕೆಂದು ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದ ಕಾಯಿಪೇಟೆಯ ಬಸವೇಶ್ವರ ಪುತ್ಥಳಿ ಎದುರು ಸ್ವಾಗತ್ ಯುವಕರ ಸಂಘದಿಂದ ಶುಕ್ರವಾರ ಶ್ರೀಶಿವಕುಮಾರ ಸ್ವಾಮೀಜಿಯವರ ನುಡಿನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏ.1 ರಂದು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ, ಏಪ್ರೀಲ್ 1ರಂದೇ ಶ್ರೀಸಿದ್ಧಗಂಗಾ ಸ್ವಾಮೀಜಿ ಅವರು ಜನ್ಮ ತಳೆದಿರುವುದರಿಂದ ಆ ದಿನಕ್ಕೆ ವಿಶೇಷ ಮಹತ್ವ ನೀಡಬೇಕು. ಆದ್ದರಿಂದ ಸರ್ಕಾರವು ಆ ದಿನವನ್ನು ನಾಲೆಡ್ಜ್ ಡೇಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.
ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಎಲ್ಲೆಡೆ ಕೇಳಿಬರುತ್ತದೆ. ಆದರೆ, ಸಿದ್ಧಗಂಗಾ ಶ್ರೀಗಳು ಎಂದೂ ಪ್ರಶಸ್ತಿ ಬಯಸಿದವರಲ್ಲ. ಅವರಿಗೆ ಭಾರತರತ್ನ ನೀಡಬೇಕೆಂಬುದು ಕೋಟ್ಯಾಂತರ ಭಕ್ತರ ಆಗ್ರಹವಾಗಿದೆ. ಈ ಪ್ರಶಸ್ತಿ ನೀಡುವುದರಿಂದ ಭಾರತ ರತ್ನ ಪ್ರಶಸ್ತಿಗೆ ಗೌರವವೂ ಹೆಚ್ಚಾಗಲಿದೆ ಎಂದರು.
ಅನ್ನ, ಅಕ್ಷರ, ವಸತಿ ನೀಡಿ, ಪ್ರತಿನಿತ್ಯ 10 ಸಾವಿರ ಮಕ್ಕಳಿಗೆ ಅನ್ನ ದಾಸೋಹ ಮಾಡುತ್ತಿದ್ದ ಶ್ರೀಗಳ ಹೆಸರಿನಲ್ಲಿ ರಾಜ್ಯ ಸರಕಾರ ಪ್ರಶಸ್ತಿ ಸ್ಥಾಪಿಸಿ, ಶ್ರೀಗಳು ಹಾಕಿ ಕೊಟ್ಟಿರುವ ದಾರಿಯನ್ನು ಅನುಸರಿಸುವ ವ್ಯಕ್ತಿಗೆ ಪ್ರತಿ ವರ್ಷ ನೀಡಿ ಗೌರವಿಸಬೇಕೆಂದು ಸಲಹೆ ನೀಡಿದರು.
ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಶ್ರೀಶಿವಕುಮಾರ ಸ್ವಾಮೀಜಿಯವರು ಮಠಗಳು ಇರುವುದು ನೋಂದವರಿಗೆ, ಅನಾಥರಿಗೆ, ಬಡವರಿಗೆ, ಶೋಷಿತರಿಗೆ ಎಂಬುದನ್ನು ಸಿದ್ಧಗಂಗಾ ಮಠದ ಮೂಲಕ ಮಾಡಿ ತೋರಿಸುವ ಮೂಲಕ ಮಠದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ. ಶಿವಕುಮಾರ ಸ್ವಾಮಿಗಳು ಚಿತ್ರದುರ್ಗದ ಮುರುಘಾ ಮಠದ ಮೇಲೆ ಅಪಾರ ಭಕ್ತಿ, ಶ್ರದ್ಧೆಯನ್ನು ಹೊಂದಿದ್ದರು ಎಂದು ಹೇಳಿದರು.
ಜಯದೇವ ಜಗದ್ಗುರುಗಳ ಅನುಗ್ರಹ ಅವರ ಮೇಲಿತ್ತು. ಜಯದೇವ ಶ್ರೀ ಪ್ರಾರಂಭಿಸಿದ ಉಚಿತ ಪ್ರಸಾದ ನಿಲಯದ ಕಲ್ಪನೆಯನ್ನು ಶಿವಕುಮಾರ ಸ್ವಾಮಿಗಳು ಉನ್ನತ ಮಟ್ಟಕ್ಕೆ ಕೊಂಡ್ಡೊಯ್ದಿದ್ದಾರೆ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂಬದು ಎಲ್ಲರ ಆಗ್ರಹವಾಗಿದೆ. ಆದರೆ ಅವರು ಕೋಟ್ಯಾಂತರ ಜನರ ಮನಸ್ಸಿನಲ್ಲಿ ದೊಡ್ಡರತ್ನವಾಗಿ ಉಳಿದಿದ್ದಾರೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಜಸ್ಟಿನ್ ಡಿಸೋಜಾ, ವೀರಪ್ಪ ಎಂ ಭಾವಿ, ಹದಡಿ ನಟರಾಜ್, ಶಂಕರ್, ಶಾಂತಕುಮಾರ್ ಸೋಗಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
