ಚಿತ್ರದುರ್ಗ:
ಹಿಂದಿನ ಕಾಲದಲ್ಲಿ ಕಾಡುಪ್ರಾಣಿಗಳನ್ನು ಬೆದರಿಸಿ ರಕ್ಷಣೆ ಪಡೆದುಕೊಳ್ಳಲು ಶಬ್ಬ ಮಾಡಲಾಗುತ್ತಿತ್ತು. ಈಗ ಅದು ದೀಪಾವಳಿಯ ಪಟಾಕಿವರೆಗೆ ಬಂದು ನಿಂತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಸಿ.ಡಿ.ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಲಾ ಚೈತನ್ಯ ಸೇವಾ ಸಂಸ್ಥೆ, ಪ್ರಗತಿ ವಿದ್ಯಾಮಂದಿರ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಗತಿ ವಿದ್ಯಾಮಂದಿರದಲ್ಲಿ ಶನಿವಾರ ನಡೆದ ಪರಿಸರ ಸ್ನೇಹಿ ದೀಪಾವಳಿ ಕಾರ್ಯಕ್ರಮವನ್ನು ಮಕ್ಕಳಿಗೆ ಬಿತ್ತಿ ಪತ್ರವನ್ನು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಮೂಹ ಸಂಪರ್ಕವಿಲ್ಲದ ಕಾಲದಲ್ಲಿ ಒಬ್ಬರಿಂದ ಒಬ್ಬರಿಗೆ ವಿಚಾರಗಳನ್ನು ಶಬ್ದದ ಮೂಲಕ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಈಗ ದೀಪಾವಳಿಯಲ್ಲಿ ಲಕ್ಷಾಂತರ ರೂ.ಗಳ ಪಟಾಕಿಗಳನ್ನು ಸುಡುವ ಮೂಲಕ ಪರಿಸರವನ್ನು ನಾಶಪಡಿಸಲಾಗುತ್ತಿದೆ.
ಪ್ರತಿ ವರ್ಷವೂ ಅನೇಕ ಮಂದಿ ದೀಪಾವಳಿಯಲ್ಲಿ ಪಟಾಕಿಗಳನ್ನು ಸಿಡಿಸಿ ಕಣ್ಣುಗಳನ್ನು ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಅದಕ್ಕಾಗಿ ಹಾನಿಕಾರಕ ಪಟಾಕಿಗಳಿಂದ ಪ್ರತಿಯೊಬ್ಬರು ದೂರವಿದ್ದು, ಪರಿಸರವನ್ನು ಸಂರಕ್ಷಿಸುವಂತೆ ಮನವಿ ಮಾಡಿದರು.
ಸುಪ್ರೀಂಕೋರ್ಟ್‍ನ ಆದೇಶದಂತೆ ನಿಗಧಿತ ಸಮಯದಲ್ಲಿ ಎಲ್ಲರೂ ಪಟಾಕಿಗಳನ್ನು ಸಿಡಿಸುವುದರಿಂದ ಪರಿಸರಕ್ಕೆ ಆಗುವ ಧಕ್ಕೆಯನ್ನು ತಪ್ಪಿಸಬಹುದು ಎಂದರು.
ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ್ ಮಾತನಾಡಿ ಸುಪ್ರೀಂಕೋರ್ಟ್ ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಬೇಕೆಂದು ಸೂಚಿಸಿರುವುದು ಅತ್ಯಂತ ಸ್ವಾಗತಾರ್ಹವಾದುದು. ದೀಪಾವಳಿ ಹಬ್ಬ ಬಂತೆಂದರೆ ದಿನವಿಡಿ ಹೊಡೆಯುವ ಪಟಾಕಿಗಳ ಸದ್ದಿನಿಂದ ಅನೇಕರು ತೊಂದರೆ ಅನುಭವಿಸುವಂತಾಗಿದೆ. ಹೆಚ್ಚು ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಸಿಡಿಸದೆ ಪರಿಸರವನ್ನು ಉಳಿಸಬೇಕೆಂದು ವಿನಂತಿಸಿದರು.
ಪರಿಸರವಾದಿ ಹೆಚ್.ಎಸ್.ಕೆ.ಸ್ವಾಮಿ ಪ್ರಾತ್ಯಕ್ಷಿಕೆಯ ಮೂಲಕ ಪಟಾಕಿಗಳಿಂದ ಆಗುವ ಹಾನಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಕರ್ಕಷವಾಗಿ ಶಬ್ದ ಮಾಡುವ ಪಟಾಕಿಗಳನ್ನು ಹೊಡೆಯುವುದರಿಂದ ಪರಿಸರ ಸ್ನೇಹಿಗಳಾದ ಪ್ರಾಣಿ ಪಕ್ಷಿಗಳ ಸಂತತಿ ಕಡಿಮೆಯಾಗಲಿದೆಯಲ್ಲದೆ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿನಾಮ ಬೀರಲಿದೆ. ಹಾಗಾಗಿ ನಿಗಧಿತ ಸಮಯದಲ್ಲಿ ಮಿತಿ ಮೀರದೆ ಪಟಾಕಿಗಳನ್ನು ಸಿಡಿಸಿ ಪರಿಸರವನ್ನು ಉಳಿಸಿಕೊಳ್ಳಿ ಎಂದು ತಿಳಿಸಿದರು.
ಪಟಾಕಿಗಳನ್ನು ಸಿಡಿಸುವುದರಿಂದ ಮಣ್ಣು, ನೀರು, ಗಾಳಿ, ಆಹಾರ ಎಲ್ಲವೂ ಕಲುಷಿತಗೊಳ್ಳುತ್ತದೆ. ಪೆಟ್ರೋಲ್ ಬಂಕ್ ಹಾಗೂ ವಾಹನಗಳು ನಿಂತಿರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಪಟಾಕಿಗಳನ್ನು ಹೊಡೆಯುವಾಗಿ ಸಾಧ್ಯವಾದಷ್ಟು ಕಾಟನ್ ಬಟ್ಟೆಗಳನ್ನು ಧರಿಸಿರಬೇಕು. ಇದರಿಂದ ಬಟ್ಟೆಗಳಿಗೆ ಬೇಗನೆ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಪ್ರತಿ ವರ್ಷವೂ ಒಂದಲ್ಲ ಒಂದು ಕಡೆ ಪಟಾಕಿಯಿಂದ ಕಣ್ಣು ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಲೆ ಇದೆ. ಇದರಿಂದ ಇಡೀ ಜೀವನವೇ ಕತ್ತಲೆಯಾಗುತ್ತದೆ. ಅದಕ್ಕಾಗಿ ಯಾರು ಪಟಾಕಿಗಳನ್ನು ಸುಡುವುದಿಲ್ಲವೋ ಅಂತಹ ಮಕ್ಕಳನ್ನು ಗುರುತಿಸಿ ಮುಂದಿನ ವರ್ಷದಿಂದ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಪ್ರಗತಿ ವಿದ್ಯಾಮಂದಿರದ ಕಾರ್ಯದರ್ಶಿ ಮಧುಸೂದನ್ ಮಾತನಾಡಿ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ. ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಕುರಿತು ಮಕ್ಕಳು ಹಾಗೂ ಪೋಷಕರುಗಳಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
