ಚಳ್ಳಕೆರೆ
ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಎಂದಿನಂತೆ ಸಂಭ್ರಮ ಸಡಗರಗಳಿಂದ ಆಚರಿಸುವಂತೆ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ತಿಳಿಸಿದರು.
ಅವರು, ಸೋಮವಾರ ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿಯೇ ಹಿಂದು ಮುಸ್ಲಿಂ ಬಂಧುಗಳ ಸುಮದುರ ಭಾವನೆ ಚನ್ನಾಗಿದ್ದು, ಚಳ್ಳಕೆರೆ ನಗರದಲ್ಲೂ ಸಹ ಈ ಪರಂಪರೆ ಮುಂದುವರೆದಿದೆ. ಯಾವುದೇ ಸಂದರ್ಭದಲ್ಲೂ ಇಲ್ಲಿನ ಹಿಂದೂ ಬಾಂಧವರು ಮುಸ್ಲಿಂ ಬಾಂಧವರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟವರಲ್ಲ ಬದಲಾಗಿ ಮುಸ್ಲಿಂ ಸಮುದಾಯದ ಯಾವುದೇ ಕಾರ್ಯಕ್ರಮವಿರಲಿ ಜೊತೆಯಾಗಿಯೇ ಆಚರಣೆ ಮಾಡುತ್ತಾ ಬಂದಿದ್ದಾರೆ. ಎರಡೂ ಸಮುದಾಯಗಳಲ್ಲಿ ವಿಶೇಷ ಹೊಂದಾಣಿಕೆ ಇದೆ.
ಇದು ಎಲ್ಲರಿಗೂ ಮಾದರಿಯಾಗುವಂತೆ ಇದೆ ಎಂದರು.ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಚಳ್ಳಕೆರೆ ನಗರವೆಂದರೆ ಶಾಂತಿ ಸೌಹಾರ್ಥತೆಯಿಂದ ಕೂಡಿದ ನಗರವೆಂದು ಈಗಾಗಲೇ ಪ್ರತೀತಿಯಾಗಿದೆ. ಇಲ್ಲಿನ ಮುಸ್ಲಿಂ ಬಂಧುಗಳಿಗೆ ಯಾವುದೇ ರೀತಿಯ ಆತಂಕ ಉಂಟಾಗದಂತೆ ಇಲ್ಲಿನ ಹಿಂದೂ ಬಂಧುಗಳು ಸಹಕಾರ ನೀಡುತ್ತಾ ಬಂದಿದ್ಧಾರೆ. ಈದ್ ಮಿಲಾದ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪೊಲೀಸ್ ಇಲಾಖೆಯ ಕೆಲವೊಂದು ಸೂಚನೆಗಳನ್ನು ಪಾಲಿಸಬೇಕಿದೆ. ಕೆಲವು ವ್ಯಕ್ತಿಗಳು ಡಿಜೆಗೆ ಅವಕಾಶ ಕೊಡುವಂತೆ ಕೇಳಿದ್ಧಾರೆ ಆದರೆ, ಇದಕ್ಕೆ ಜಿಲ್ಲಾರಕ್ಷಣಾಧಿಕಾರಿಗಳೇ ಅನುಮತಿ ನೀಡಬೇಕಿದೆ. ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಸ್ಲಿಂ ಸಮುದಾಯದ ಹಬ್ಬ ಆಚರಣೆಗೆ ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಇಲಾಖೆ ಕೈಗೊಳ್ಳುತ್ತದೆ ಎಂದರು.
ಸಮಾಜ ಸೇವಕ ಎಸ್.ಎಚ್.ಸೈಯದ್ ಮಾತನಾಡಿ, ಪ್ರತಿವರ್ಷದ ವಾಡಿಕಯಂತೆ ಪೊಲೀಸ್ ಇಲಾಖೆ ಶಾಂತಿ ಸಭೆಯನ್ನು ಆಯೋಜಿಸಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಮನ್ವಯವಿರುವ ಪ್ರದೇಶ ಇದಾಗಿದೆ. ಇಲ್ಲಿನ ಮುಸ್ಲಿಂ ಬಂಧುಗಳನ್ನು ಕಂಡೆ ಎಲ್ಲಾ ಸಮುದಾಯದವರಿಗೂ ವಿಶ್ವಾಸ ಹೆಚ್ಚು. ಯಾವುದೇ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕಗಳು ಇದುವರೆಗೂ ಎದುರಾಗಿಲ್ಲ. ಮುಂದೆಯು ಸಹ ಎದುರಾಗುವುದಿಲ್ಲವೆಂಬ ವಿಶ್ವಾಸ ನಮ್ಮದು ಎಂದರು.
ಟಿಪ್ಪು ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಯೊಂದು ಸಂದರ್ಭದಲ್ಲೂ ಈ ಸಮುದಾಯಕ್ಕೆ ಬೇರೆ ಎಲ್ಲಾ ಸಮುದಾಯಗಳು ಹಬ್ಬದ ಆಚರಣೆಗೆ ಹೆಚ್ಚು ಸಹಕಾರ ನೀಡಿವೆ. ರಾಜ್ಯದಲ್ಲಿ ಅತಿ ಹೆಚ್ಚು ವಿಶ್ವಾಸವನ್ನು ಉಳಿಸಿಕೊಂಡಿರುವ ಪ್ರದೇಶ ಇದಾಗಿದೆ. ಇಲ್ಲಿನ ಮುಸ್ಲಿಂ ಬಾಂಧವರು ಸಹ ಎಂದಿಗೂ ಯಾವ ವಿಚಾರಕ್ಕೂ ಯಾವುದೇ ಸಮುದಾಯಕ್ಕೆ ತೊಂದರೆ ಉಂಟು ಮಾಡದೆ ಸೋದರ ಭಾವನೆ ಹೊಂದಿದ್ಧಾರೆ ಎಂದರು.
ಈ ಸಂದರ್ಭದಲ್ಲಿ ಮೊಳಕಾಲ್ಮೂರು ವೃತ್ತ ನಿರೀಕ್ಷಕ ಯಶವಂತ, ನಾಯಕನಹಟ್ಟಿ ಪಿಎಸ್‍ಐ ರಘುನಾಥ, ರಾಂಪುರ ಪಿಎಸ್‍ಐ ಕಿರಣ್‍ಕುಮಾರ್, ಮುಸ್ಲಿಂ ಸಮುದಾಯದ ಮುಖಂಡರಾದ ಎಂ.ದಾದಾಪೀರ್, ಮಾಜಿ ಪುರಸಭಾ ಸದಸ್ಯರಾದ ಜುಬೇರ್, ನಭಿ, ಮಹಮ್ಮದ್ ಅನ್ವರ್ ಮಾಸ್ಟರ್, ಸೈಯದ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ