ಸೌಹಾರ್ದದಿಂದ ಗಣೇಶ-ಮೊಹರಂ ಹಬ್ಬ ಆಚರಿಸಿ

ದಾವಣಗೆರೆ :

     ಹಬ್ಬಗಳ ಆಚರಣೆಯು ಆಡಂಬರಗಳಿಲ್ಲದೇ ಭಕ್ತಿ ಹಾಗೂ ನಂಬಿಕೆಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಮಹಂತೇಶ್ ಜಿ. ಬೀಳಗಿ ಕರೆ ನೀಡಿದರು.

    ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಗೌರಿ-ಗಣೇಶ ಮತ್ತು ಮೊಹರಂ ಹಬ್ಬಗಳ ನಾಗರಿಕರ ಸೌಹಾರ್ಧ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ಪರಿಸರಕ್ಕೆ ಮತ್ತು ಜನ ಜೀವನಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ (ಪಿಓಪಿ) ಬಳಕೆ, ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಡಿಜೆಗಳ ಸದ್ದಿನಿಂದ ದೂರವಿದ್ದು, ಶಾಂತಿ ಸೌಹಾರ್ಧ ಹಾಗೂ ಪರಿಸರ ಸ್ನೇಹಿ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.

     ಸ್ಥಳೀಯ ಜಾನಪದ ಕಲಾವಿದರು ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ಈ ನೆಲದ ಕಂಪನ್ನು ಪಸರಿಸುತ್ತಿದ್ದಾರೆ. ಆದರೆ, ನಾವುಗಳ ಅಂತಹ ಕಲಾವಿದರನ್ನು ಬಳಸಿಕೊಳ್ಳದೇ, ಪರಿಸರಕ್ಕೆ ಮಾರಕವಾಗುವ ಡಿಜೆ ಹಾಕುವ ಮೂಲಕ ಶಬ್ದಮಾಲಿನ್ಯಕ್ಕೆ ಕಾರಣ ವಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ನಮ್ಮ ಸ್ಥಳೀಯ ಕಲೆ, ಕಲಾವಿದರುಗಳನ್ನು ಪ್ರೋತ್ಸಾಹಿಸುವ ಮೂಲಕ ಹಬ್ಬಗಳ ಆಚರಿಸಬೇಕು ಎಂದರು.

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಾನೂನುಗಳು ಮನುಕುಲದ ಒಳಿತಿಗಾಗಿ ಇವೆ. ಅವುಗಳನ್ನು ನಾವುಗಳೇ ಪಾಲಿಸಬೇಕು. ನಮಗಿರುವ ಕಾನೂನಿನ ಪರಿಮಿತಿಯಲ್ಲಿ ನಮ್ಮ ಆಚರಣೆಗಳಿರಬೇಕು. ಹಬ್ಬಗಳು ಶಾಂತಿ ಸೌಹಾರ್ಧ ನೆಲೆಯಲ್ಲಿರಲಿ.ಬೇರೆಯವರ ಭಾವನೆಗಳಿಗೆ ಧÀಕ್ಕೆಯಾಗದಂತೆ ಹಬ್ಬ ಆಚರಿಸಬೇಕೆಂದು ಸಲಹೆ ನೀಡಿದರು.

     ಗಣಪತಿ ಮೆರವಣಿಗೆ ಹೊರಡುವ ಸಂಘಗಳವರು ಸಂಬಂಧಿsಸಿದ ಠಾಣಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯಬೇಕು. ಗಣೇಶ ಮೂರ್ತಿ ವಿಸರ್ಜನ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಅಲ್ಲಿಯೇ ವಿಸರ್ಜನೆ ಮಾಡಬೇಕು. ಸಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದರು.

     ಪ್ರಾಸ್ತವಿಕವಾಗಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ರಾಜು, ಹಿಂದುಗಳ ಗಣೇಶ ಹಬ್ಬ ಮತ್ತು ಮುಸ್ಲಿಂ ಧರ್ಮದವರ ಮೊಹರಂ ಹಬ್ಬಗಳು ಒಂದೇ ಬಾರಿಗೆ ಬಂದಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ಸಂಭವಿಸದಂತೆ ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿ ಮತ್ತು ನಾಗರಿಕರ ನಡುವೆ ಸಮನ್ವಯ ಅತಿ ಮುಖ್ಯವಾಗಿದೆ.

     ನಾಗರಿಕರು ಕಾನೂನುಗಳನ್ನು ಉಲ್ಲಂಘನೆ ಮಾಡದೇ ಹಾಗೂ ಹಬ್ಬ ಆಚರಣೆಗೆ ಬೇಕಾದ ಮುಂಜಾಗ್ರತ ಕ್ರಮಗಳನ್ನು ಪಡೆದುಕೊಂಡು ಜಿಲ್ಲೆಯಾದ್ಯಂಯ ಈ ಎರಡು ಹಬ್ಬಗಳನ್ನು ಅತ್ಯಂತ ಶಾಂತಿಯುತ ಮತ್ತು ಕಾನೂನಿಗೆ ಧÀಕ್ಕೆಯಾಗದಂತೆ ಸಹಕರಿಸಬೇಕೆಂದು ಮನವಿ ಮಾಡಿದರು.

    ದುರ್ಗಾಂಬಿಕ ದೇವಸ್ಥಾನ ಟ್ರಸ್ಟ್‍ನ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಎಲ್ಲರೂ ಒಗ್ಗೂಡಿ ಗಣೇಶ ಮತ್ತು ಮೊಹರಂ ಹಬ್ಬಗಳಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ತಡೆಯಲು ಎಲ್ಲಾ ಸಮಾಜ ಬಾಂಧವರು ಮತ್ತು ಮುಖಂಡರುಗಳು ಸಹಕಾರ ನೀಡಬೇಕು. ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಬುದ್ದಿವಾದ ಹೇಳಿ ಹಬ್ಬಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೋಳ್ಳಬೇಕು ಎಂದರು.

     ಮುಸ್ಲಿಂ ಸಮಾಜದ ಮುಖಂಡ ಯಾಸೀನ್ ರಜ್ವಿಖಾನ್ ಮಾತನಾಡಿ, ರಾಜ್ಯದಲ್ಲಿ ಸೇರಿದಂತೆ ವಿವಿಧೆಡೆ ಪ್ರವಾಹವಾಗಿ ಸಾಕಷ್ಟು ಜೀವಹಾನಿ ಮತ್ತು ಆಸ್ತಿ ನಾಶವಾಗಿದ್ದು, ಈ ಬಾರಿಯ ಹಬ್ಬದಲ್ಲಿ ಯಾವುದೇ ಆಡಂಭರ ಮತ್ತು ದುಂದು ವೆಚ್ಚ ಮಾಡದಂತೆ ಹಬ್ಬ ಆಚರಿಸೋಣ. ಹಾಗೂ ಹಬ್ಬಕ್ಕೆ ವೆಚ್ಚ ಮಾಡುತ್ತಿದ್ದ ಹಣದಲ್ಲಿಯೇ ಸ್ವಲ್ಪ ಕೂಡಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತಲುಪಿಸುವ ಮೂಲಕ ಸಹಕರಿಸೋಣ ಎಂದರು.

     ಪಾಲಿಕೆ ಮಾಜಿ ಸದಸ್ಯ ಆವರಗೆರೆ ಉಮೇಶ್ ಮಾತನಾಡಿ, ನೆರೆ ಪರಿಸ್ಥಿತಿಯ ಸಂಕಟದ ಸಂದರ್ಭದಲ್ಲೂ ಹಬ್ಬಗಳನ್ನು ಸಡಗರದಿಂದ ಮಾಡದೇ ಎಲ್ಲರೂ ಒಗ್ಗೂಡಿ ಚರ್ಚಿಸಿ ಒಂದೆಡೆ ಸಾಕೇಂತಿಕವಾಗಿ ಆಚರಿಸಿದರೆ ಒಳ್ಳೆಯದು. ಗಣಪತಿ ಹಬ್ಬ ಆಚರಣೆಯು ಎಲ್ಲರನ್ನೂ ಒಗ್ಗೂಡಿಸವುದರ ಪ್ರತೀಕವಾಗಿದೆ. ಆದರೆ, ಇಂದಿನ ಆಚರಣೆ ಜಾತಿಗೊಂದು ಗಣಪ ಹಾಗೂ ತಮ್ಮದೇ ಜಾತಿಯಲ್ಲಿ ಎರಡು ಮೂರು ಗಣಪಗಳನ್ನು ಪ್ರತಿಷ್ಠಾಪಿಸಿ ಆಚರಣೆ ಮಾಡುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

    ಹಿಂದೂ ಜಾಗರಣ ವೇದಿಕೆಯ ಎಸ್.ಟಿ.ವೀರೆಶ್ ಮಾತನಾಡಿ, ವಿವಿಧ ಇಲಾಖೆಗಳು ಕಳೆದ ಬಾರಿಯಂತೆ ಈ ಬಾರಿಯು ಹಬ್ಬವನ್ನು ಸರಳವಾಗಿ ಆಚರಿಸಲು ಸಹಕರಿಸಬೇಕು. ನಗರದಲ್ಲಿ ಗಣಪತಿ ಮಹಾಮಂಡಳಿಯನ್ನು ರಚಿಸಿ ಗಣಪತಿ ಹಬ್ಬದ ಆಚರಣೆಯ ಕುರಿತು ಯುವಕರಿಗೆ ಮತ್ತು ನೂತನವಾಗಿ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಿಸುವವರಿಗೆ ಹಬ್ಬ ಆಚರಣೆಯ ಕುರಿತು ಮಾಹಿತಿ ನೀಡಲಾಗುತ್ತಿದೆ. ಇದೊಂದು ಸಾಂಸ್ಕøತಿಕ ಮತ್ತು ಧಾರ್ಮಿಕ ಹಬ್ಬವಾಗಿದ್ದು, ಈ ಬಾರಿ ನಗರದ ಎರಡು ಭಾಗಗಳಲ್ಲಿ ಮಹಾಮಂಡಳಿಯ ಮೂಲಕ ಹಬ್ಬ ಆಚರಣೆ ಕುರಿತು ಮಾಹಿತಿ ನೀಡಲಾಗುವುದು. ಗಣಪತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಕ್ರೇನ್ ವ್ಯವಸ್ಥೆ ಮಾಡಿದರೆ ಗಣಪತಿ ವಿಸರ್ಜನೆ ತ್ವರಿತ ಹಾಗೂ ಸುರಕ್ಷಿತವಾಗಿರಲಿದೆ ಎಂದರು.

       ಬೆಸ್ಕಾಂ ಇಲಾಖೆಯ ಅಧಿಕಾರಿ ಮಾಲತೇಶ್ ಮಾತನಾಡಿ, ಸಾರ್ವಜನಿಕವಾಗಿ ಗಣಪತಿಗಳನ್ನು ಕೂರಿಸಲು ಪಾಲಿಕೆ ಅನುಮತಿ ಕಡ್ಡಾಯವಾಗಿದೆ. ನಂತರ ಬೆಸ್ಕಾಂ ಇಲಾಖೆಯು ಬೇಕಾದ ಸಹಕಾರ ಮಾಡಲಾಗುವುದು. ಹಬ್ಬದ ಮುಂಚಿತವಾಗಿ ಅನುಮತಿ ಪಡೆಯುವುದು ಒಳಿತು ಎಂದರು.

      ಸಭೆಯಲ್ಲಿ ವಿವಿಧ ಸಮಾಜದ ಮುಖಂಡರುಗಳಾದ ನ್ಯಾಮತಿಯ ಓಮೇಶ್ವರಪ್ಪ, ಚನ್ನಗಿರಿಯ ಜಬೀವುಲ್ಲ. ಇಮಾಮ್ ಹುಸೇನ್ ಬಿಳಿಚೋಡು, ಆವರಗೆರೆ ಚಂದ್ರು, ಸೋಮಲಪುರ ಹನುಮಂತಪ್ಪ, ಎ.ನಾಗರಾಜ್, ಸತೀಶ್ ಪೂಜಾರಿ, ಹೇಮಣ್ಣ, ಫಣಿಯಪುರದ ಲಿಂಗರಾಜು ಮತ್ತು ಅಧಿಕಾರಿಗಳಾದ ಅಗ್ನಿಶಾಮಕ ದಳದ ಸುರೇಶ್‍ಕುಮಾರ್, ಡಿವೈಎಸ್‍ಪಿ ಮಂಜುನಾಥ್ ಕೆ. ಗಂಗಲ್, ಸಿಪಿಐ ಉಮೇಶ್, ದೇವರಾಜ್ ಬಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap