ದಾವಣಗೆರೆ
ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರು ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ಸೇನೆಯನ್ನು ಸೆದೆ ಬಡಿದ ದಿನವಾಗಿರುವ ಅಕ್ಟೋಬರ್ 23ನ್ನು ಸರಕಾರ ವಿಜಯೋತ್ಸವ ದಿನವನ್ನಾಗಿ ಆಚರಿಸಬೇಕೆಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಆಗ್ರಹಿಸಿದರು.
ನಗರದ ಕುವೆಂಪು ಕನ್ನಡಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅ.23ರಂದು ರಾಣಿ ಚೆನ್ನಮ್ಮ ಮತ್ತು ಕಿತ್ತೂರು ಸೇನೆ ಬ್ರಿಟಿಷರೊಂದಿಗೆ ನಡೆಸಿದ ಮೊದಲ
ಯುದ್ಧದಲ್ಲಿ ಇಡೀ ಬ್ರಿಟಿಷ್ ಸೈನ್ಯವನ್ನು ಸದೆ ಬಡಿದ ಈ ದಿನವನ್ನು ವಿಜಯೋತ್ಸವ ದಿನವೆಂದು ಆಚರಿಸಬೇಕು ಎಂದರು.
ರಾಣಿ ಚೆನ್ನಮ್ಮ ಸ್ವಾತಂತ್ರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದು, 1778 ನವೆಂಬರ್ 14 ರಂದು ಜನಿಸಿದ್ದಾರೆ. ಆದ್ದರಿಂದ ನವೆಂಬರ್ 14ರಂದು ಸರಕಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಚೆನ್ನಮ್ಮಳ ತತ್ವ, ಸಿದ್ಧಾಂತ, ಹೋರಾಟ, ಧೈರ್ಯ, ಸಾಹಸದ ಆಧಾರದ ಮೇಲೆ ಪಂಚಮಸಾಲಿ ಸಮಾಜ ಹುಟ್ಟಿಕೊಂಡಿತು. ಇಡೀ ರಾಜ್ಯಾದ್ಯಂತ ಪಂಚಮಸಾಲಿ ಸಮಾಜದಿಂದ ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಗುತ್ತಿದೆ. ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಪಂಚಮಸಾಲಿ ಸಮಾಜ ಲೋಕಸಭೆಯಲ್ಲಿ ಚೆನ್ನಮ್ಮ ಪುತ್ಥಳಿಯನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ ಪರಿಣಾಮ ಅಲ್ಲಿ ಪುತ್ಥಳಿ ನಿರ್ಮಾಣಗೊಂಡಿತು ಎಂದು ಸ್ಮರಿಸಿದರು.
ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಸರಕಾರ ಇದ್ದಾಗ ಸಮಾಜದ ಒತ್ತಾಯದ ಮೇರೆಗೆ ಕಿತ್ತೂರಿನಲ್ಲಿ ಐದು ದಿನಗಳ ಕಾಲ ಕಿತ್ತೂರು ಉತ್ಸವಕ್ಕೆ ಚಾಲನೆ ದೊರೆಯಿತು. ಇದು ಪ್ರತಿ ವರ್ಷವೂ ಮುಂದುವರಿದಿದೆ. ಇನ್ನು ಎಲ್ಲ ಜಯಂತಿ ದಿನದಂದು ಸರಕಾರಿ ರಜೆ ಘೋಷಿಸಲಾಗಿದೆ. ಆದರೆ, ಚೆನ್ನಮ್ಮ ಜಯಂತಿ ದಿನ ರಜೆ ಘೋಷಿಸದೆ, ಹೆಚ್ಚು ಕೆಲಸ ಮಾಡಬೇಕೆಂದು ಸಮಾಜದ ಒತ್ತಾಸೆಯಾಗಿದೆ ಎಂದರು.
ನೆರೆಹಾನಿ ಹಿನ್ನೆಲೆಯಲ್ಲಿ ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ. ಆದರೂ ಚೆನ್ನಮ್ಮರಿಗೆ ಸಿಗಬೇಕಾದ ಗೌರವಗಳನ್ನು ಸಮಾಜದಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹರಿಹರ ಮಠದಲ್ಲಿ ಅದ್ದೂರಿಯಾಗಿ ಬೆಳ್ಳಿಬೆಡಗು ಕಾರ್ಯಕ್ರಮ ನಡೆಯಲಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕಿ ಪ್ರೊ.ಎಸ್.ಎಂ ಗೌರಮ್ಮ ಮಾತನಾಡಿ, ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದ ದೆಸಾಯಿ ಮನೆತನದ ದೂಳಪ್ಪಗೌಡ ಪದ್ಮವತಿ ದಂಪತಿಗಳಿಗೆ ಜನಿಸಿದ ಮಗಳು ಚೆನ್ನಮ್ಮ. ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ವರಸೆ, ಮತ್ತು ರಾಜ ಕಲೆಗಳನ್ನು ಮೈಗೂಡಿಸಿಕೊಂಡು ಬೆಳೆದಳು. ನಂತರ ಕಿತ್ತೂರಿನ ದೊರೆ ಮಲ್ಲಸರ್ಜ ಅವರನ್ನು ವಿವಾಹವಾಗುತ್ತಾರೆ. ಮಲ್ಲಸರ್ಜರವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ, ಅವರ ನಂತರದಲ್ಲಿ ಅವರ ಮಗ ಶಿವಲಿಂಗ ಸರ್ಜ ಅಧಿಕಾರ ವಹಿಸಿಕೊಳ್ಳುತ್ತಾರೆ. ಇವರ ಆರೋಗ್ಯ ಸರಿಯಿಲ್ಲದೇ ಇರುವುದರಿಂದ ಅವರು ಎದುರಿಗಳಿಂದ ರಾಜ್ಯವನ್ನು ರಕ್ಷಿಸಿಕೊಳ್ಳಲು ಬ್ರಿಟಿಷರ ಸಹಾಯ ಪಡೆಯುತ್ತಾರೆ. ತದನಂತರದಲ್ಲಿ ಅವರು ಕೂಡ ಅನಾರೋಗ್ಯದಿಂದ ಮರಣ ಹೊಂದುತ್ತಾರೆ.
ಆಗ ಬ್ರಿಟಿಷರು ಬೆಳಗಾವಿ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಮುಂದಾದಾಗ ರಾಣಿ ಚೆನ್ನಮ್ಮ ಅವರಿಗೆ ಶರಣಾಗದೇ, ಅವರ ವಿರುದ್ದ ಹೋರಾಟಕ್ಕೆ ಮುಂದಾದಾಗುತ್ತಾರೆ. ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ಎಂಬ ಲಾರ್ಡ್ ಡಾಲ್‍ಹೌಸಿಯ ನೀತಿಯಂತೆ ಬ್ರಿಟಿಷ್ ಸರ್ಕಾರ ಚೆನ್ನಮ್ಮನ ಆಸ್ಥಾನವನ್ನು ವಶಪಡಿಸಿಕೊಂಡು ಖಜಾನೆ ಬೀಗವನ್ನು ನೀಡುವಂತೆ ಕೇಳಿದಾಗ ಚೆನ್ನಮ್ಮ ತನ್ನ ಸೇನಾ ಬಲದೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡುತ್ತಾಳೆ.
1824 ರಲ್ಲಿ ಸೂರ್ಯ ಮುಳಗದ ನಾಡು ಎಂದು ಹೆಸರಾಗಿದ್ದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೋಲುಣಿಸಿದ ಏಕೈಕ ಮಹಿಳೆ ಎಂಬ ಕೀರ್ತಿಗೆ ಪಾತ್ರಳಾಗುತ್ತಾಳೆ ಎಂದು ಸ್ಮರಿಸಿದರು.ಆಧುನಿಕ ಕಾಲದಲ್ಲಿ ಮಹಿಳೆಯರಿಗೆ ತಮ್ಮ ಆತ್ಮರಕ್ಷಣೆ ಕಷ್ಟವಾಗುತ್ತಿದೆ, ಎಂದಾದರೆ ಬಹು ಹಿಂದಿನ ಕಾಲದಲ್ಲಿಯೇ ತನ್ನ ವೈಯಕ್ತಿಕ ಹಿತಾಶಕ್ತಿಯನ್ನು ಲೆಕ್ಕಿಸದೇ ಸಾಮ್ರಾಜ್ಯ ಮತ್ತು ಸಮುದಾಯಕ್ಕಾಗಿ ಹೋರಾಡಿದ ಅವರ ಧೈರ್ಯ, ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಎಂದ ಅವರು ನಾವು ಪ್ರಸ್ತುತ ದಿನಗಳಲ್ಲಿ ವೀರ ಮಹನೀಯರ ಆತ್ಮಸ್ಥೈರ್ಯ, ಅವರ ನೀತಿ ನಿಲುವುಗಳು, ವಿಚಾರವಂತಿಕೆ, ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಇಂದಿಗೂ ಕೂಡ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಮಹಿಳೆಯರನ್ನು ಇಂದಿಗೂ ಒಂದು ವಸ್ತುವಾಗಿ ಪರಿಗಣಿತವಾಗುತ್ತಿದೆ. ನಮ್ಮ ಮಾಧ್ಯಮಗಳು ಇದಕ್ಕೆ ಹೊರತಾಗಿಲ್ಲ. ಮಾಧ್ಯಮಗಳಲ್ಲಿ, ಸಿನಿಮಾ, ಜಾಹಿರಾತುಗಳಲ್ಲಿ ಮಹಿಳೆಯರನ್ನು ಕೆವಲ ಪ್ರದರ್ಶನದ ಗೊಂಬೆಗಳಂತೆ ತೋರಿಸುವ ಪರಿ ನೋಡಿದರೆ ತುಂಬಾ ವಿಚಿತ್ರವೆನಿಸುತ್ತದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹಗರಿಬೊಮ್ಮನಹಳ್ಳಿ ಶಾಖಾ ಮಠದ ಶ್ರೀ ಮಹಾಂತ ಶಿವಾಚಾರ್ಯಸ್ವಾಮಿ ಸಾನ್ನಿಧ್ಯವಹಿಸಿ ಮಾತನಾಡಿ, ರಾಣಿ ಚೆನ್ನಮ್ಮ. ರಾಜ ಉಳಿವಿಗಾಗಿ ಯದ್ಧ ಮಾಡಿ, ದೇಹವನ್ನೇ ತ್ಯಾಗ ಮಾಡಿದಳು. ಕಿತ್ತೂರು ರಾಣಿ ಚೆನ್ನಮ್ಮಳ ಶಕ್ತಿ ನಮ್ಮನ್ನು ಒಂದುಗೂಡುವಂತೆ ಮಾಡಿದೆ. ಹರಿಹರದ ಪಂಚಮಸಾಲಿ ಪೀಠದಲ್ಲಿ ದಾಸೋಹ ಆರಂಭಿಸಿದ್ದು, ಅಲ್ಲಿಗೆ ಕಿತ್ತೂರು ರಾಣಿ ಚೆನ್ನಮ್ಮ `ದಾಸೋಹ ಭವನ’ ಎಂದು ನಾಮಕರಣ ಮಾಡಬೇಕು, ಕಿತ್ತೂರು ಚೆನ್ನಮ್ಮ ಅನಾಥಶ್ರಮ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್, ಕಾರ್ಯದರ್ಶಿ ಕಾಶಿನಾಥ್, ಯುವ ಘಟಕದ ಅಧ್ಯಕ್ಷ ಮಂಜುನಾಥ್ ಪುರಂತರ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಾಲಾಕ್ಷ ಮತ್ತಿತರರು ಹಾಜರಿದ್ದರು.