ಕಸಮುಕ್ತ ಕರ್ನಾಟಕ ಮಾಡಲು 1200 ಕೋಟಿ ನೀಡಿದ ಕೇಂದ್ರ ಸರ್ಕಾರ..!

ಬೆಂಗಳೂರು

    ಕರ್ನಾಟಕವನ್ನು ಕಸಮುಕ್ತ ರಾಜ್ಯವನ್ನಾಗಿ ಮಾಡಲು 1200 ಕೋಟಿ ರೂ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ,ಯೋಜನೆಯಡಿ ರಾಜ್ಯದ ಎಲ್ಲ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆಗೆ ತಲಾ ಇಪ್ಪತ್ತು ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದರು.

    ರಾಜ್ಯದಲ್ಲಿ 6021 ಗ್ರಾಮಪಂಚಾಯ್ತಿಗಳಿದ್ದು ಎಲ್ಲ ಗ್ರಾಮಪಂಚಾಯ್ತಿಗಳಲ್ಲಿ ಘನತ್ಯಾಜ್ಯ ಘಟಕವನ್ನು ಸ್ಥಾಪಿಸುವುದರಿಂದ ರಾಜ್ಯವನ್ನು ಕಸಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕೊಪ್ಪಳ ಜಿಲ್ಲೆಯ ಹುಲಗಿಯಲ್ಲಿ ಆರಂಭಿಕವಾಗಿ ಘನತ್ಯಾಜ್ಯ ಘಟಕ ನಿರ್ಮಾಣ ಕಾರ್ಯವಾಗಿದ್ದು ಎರಡು ವರ್ಷಗಳಲ್ಲಿ ಈ ಯೋಜನೆ ರಾಜ್ಯದ ಎಲ್ಲ ಗ್ರಾಮಪಂಚಾಯ್ತಿಗಳಲ್ಲಿ ಜಾರಿಯಾಗಲಿದೆ ಎಂದು ಹೇಳಿದರು.

     ಕೆಲವು ಕಡೆ ಒಂದಕ್ಕಿಂತ ಹೆಚ್ಚು ಗ್ರಾಮಪಂಚಾಯ್ತಿಗಳು ಒಂದೇ ಕಡೆ ಇರುತ್ತವೆ.ಹೀಗಾಗಿ ಅಲ್ಲಿರುವ ಗ್ರಾಮಪಂಚಾಯ್ತಿಗಳ ಸಂಖ್ಯೆಯ ಆಧಾರದ ಮೇಲೆ ತಲಾ ಇಪ್ಪತ್ತು ಲಕ್ಷದಂತೆ ಹಣ ಮಂಜೂರಾಗಲಿದೆ ಎಂದು ಹೇಳಿದರು.ಘನತ್ಯಾಜ್ಯ ಘಟಕ ಸ್ಥಾಪನೆಗೆ ಬಹುತೇಕ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಸಿಕ್ಕಿದೆ.ಎಲ್ಲಿ ಸರ್ಕಾರಿ ಭೂಮಿ ಸಿಕ್ಕಿಲ್ಲವೋ?ಅಂತಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಿ ಘನತ್ಯಾಜ್ಯ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.

     ಇದು ಪ್ರಧಾನಿ ನರೇಂದ್ರಮೋದಿ ಅವರ ಕನಸಿನ ಯೋಜನೆಯಾಗಿದ್ದು ಅದರಡಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ಘಟಕಗಳು ಬಹುಬೇಗನೆ ಕಾರ್ಯಾರಂಭ ಮಾಡಲಿವೆ.ರಾಜ್ಯದಲ್ಲಿ ಕಸಮುಕ್ತ ವಾತಾವರಣ ನಿರ್ಮಿಸಲು ಸಹಕಾರ ನೀಡಲಿವೆ ಎಂದು ವಿವರಿಸಿದರು.ಇದೇ ರೀತಿ ರಾಜ್ಯದ ಎಲ್ಲ ಗ್ರಾಮಪಂಚಾಯ್ತಿ ಕಟ್ಟಡಗಳೂ ಸೋಲಾರ್ ವಿದ್ಯುತ್ ಸೌಲಭ್ಯ ಹೊಂದಲಿದ್ದು ಇದು ಕೂಡಾ ಪ್ರಧಾನಿ ನರೇಂದ್ರಮೋದಿ ಅವರ ಕನಸಿನ ಯೋಜನೆ ಎಂದು ನುಡಿದರು.

     ಕೆಲವು ಗ್ರಾಮಪಂಚಾಯ್ತಿಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.ಇದು ಸಹಜವಾಗಿಯೇ ಅವುಗಳ ಮೇಲೆ ಹೊರೆಯಾಗಲಿದೆ.ಹೀಗಾಗಿ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಕೆಯಾದರೆ ಆ ಗ್ರಾಮಪಂಚಾಯ್ತಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಆರಂಭಿಕ ಹಂತದಲ್ಲಿ ಗ್ರಾಮಪಂಚಾಯ್ತಿ ಕಟ್ಟಡಗಳಲ್ಲಿ ಸೋಲಾರ್ ವಿದ್ಯುತ್ ಅಳವಡಿಕೆಯಾಗಲಿದೆ.ತದ ನಂತರದ ದಿನಗಳಲ್ಲಿ ಬೀದಿ ದೀಪಗಳು ಕೂಡಾ ಸೋಲಾರ್ ವ್ಯವಸ್ಥೆಯಡಿ ಅಳವಡಿಕೆಯಾಗಲಿವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap