ಬೆಂಗಳೂರು
ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಎನ್‌ಆರ್‌ಸಿ ಬದಲು ಎನ್‌ಪಿಆರ್ ಜಾರಿಗೆ ತಂದಿದ್ದು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‌ಆರ್ ಸಿ) ಕೋಳಿ ಯಾದರೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮೊಟ್ಟೆಯಾಗಿದ್ದು ಇವರೆಡಕ್ಕೂ ಸಾಮ್ಯತೆ ಇದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ನಗರದ ಕುಮಾರ ಕೃಪಾದ ಗಾಂಧಿ ಭವನ ಸಭಾಂಗಣದಲ್ಲಿ ದಲಿದ ಸಂಘರ್ಷ ಸಮಿತಿ ಬುಧವಾರ ಆಯೋಜಿಸಿದ್ದ ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ (ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್) ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಎನ್‌ಆರ್‌ಸಿ ಬದಲು ಎನ್‌ಪಿಆರ್ ಜಾರಿಗೆ ತಂದಿದೆ. ಇದನ್ನು ಗೃಹ ಇಲಾಖೆ ಮೇಲ್ವಿಚಾರಣೆಯಲ್ಲಿ ನಡೆಸುತ್ತಿದೆ. ಸಿಎಎಯಿಂದ ಯಾರ ಪೌರತ್ವವನ್ನು ಕಸಿಯುವ ಉದ್ದೇಶವಿಲ್ಲ ಎಂಬುದು ಹಸಿ ಸುಳ್ಳು. ಇದರಿಂದ ಮುಸ್ಲಿಮರಷ್ಟೇ ಅಲ್ಲ ಎಲ್ಲರೂ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ. ನಿರುದ್ಯೋಗ, ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳು ದೇಶವನ್ನು ಕಾಡುತ್ತಿರುವಾಗ ಈ ಪ್ರಕ್ರಿಯೆ ಅನಿವಾರ್ಯವಿದೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ತನ್ನ ಮೊಂಡುತನ ಬಿಟ್ಟು ಜನಗಳ, ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಜನಗಳೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಇದರಿಂದ ಹತಾಶವಾದ ಕೇಂದ್ರ ಸರ್ಕಾರ ಬುಲೆಟ್ ಮೂಲಕ ತಡೆಯಲು ಹೊರಟಿದೆ. ಇದು ಅಪಾಯಕಾರಿ. ಎಲ್ಲರೂ ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.ದೇಶದಲ್ಲಿ ಇಂದು ಸಂವಿಧಾನ ವಿರೋಧಿ ಬೆಳವಣಿಗೆಗಳು ನಡೆಯುತ್ತಿದ್ದು, ಎನ್‌ಪಿಆರ್ ಮಾಹಿತಿ ಕೇಳಲು ಬಂದರೆ ಅದನ್ನು ಜನ ತಿರಸ್ಕರಿಸಬೇಕು, ಕೇವಲ ಜನಗಣತಿಗಷ್ಟೇ ಸಹಕಾರ ನೀಡಬೇಕು ಎಂದು ಸೆಂಥಿಲ್ ಸಲಹೆ ನೀಡಿದರು.
ಮುಸ್ಲಿಮರ ವಿರುದ್ಧ ನಡೆದಿರುವ ಈ ಷಡ್ಯಂತ್ರ ದಲಿತರ ವಿರುದ್ಧವೂ ಹೌದು, ಶಾಂತಿಯುತ ಅಸಹಕಾರ ತೋರಿಸುವ ಮೂಲಕ ಈ ಷಡ್ಯಂತ್ರಗಳನ್ನು ಹಿಮ್ಮೆಟ್ಟಿಸಬೇಕು ಎಂದರು.ಸಿಎಎ, ಎನ್‌ಆರ್ ಸಿ ವಿರೋಧಿಸಿ ಬರೀ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.ಆದರೆ, ಇದು ಸುಳ್ಳಾಗಿದ್ದು, ಇದರಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.
ಈ, ಹಿಂದೆ ಮಾಜಿ ಸಚಿವನೊರ್ವ ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಅಂದಿದ್ದ.ಆದರೆ, ಇದು ನಿಜವಾಗುತ್ತಿದೆ ಎನ್ನುವ ಆತಂಕ ವ್ಯಕ್ತವಾಗಿದ್ದು, ನಿಧಾನವಾಗಿ ಈ ಬೆಳವಣಿಗೆ ಜರಗುತ್ತಿದೆ.ಈ ಬಗ್ಗೆ ನಾವು ಎಚ್ಚರವಹಿಸಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಅವರು ಭಾಷಣ ಮಾಡಿದರು. ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ದೇವನೂರು ಮಹಾದೇವ ಅವರ ಭಾಷಣವನ್ನು ಆಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ