ಸಂವಿಧಾನ ಬದಲಿಸಿ ಶ್ರೇಣಿಕೃತ ಜಾತಿ ವ್ಯವಸ್ಥೆಗೆ ಸಂಚು : ಉಗ್ರಪ್ಪ

ಚಿತ್ರದುರ್ಗ:

     ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನವನ್ನು ಕಿತ್ತಾಕಿ ಶ್ರೇಣಿಕೃತ ಜಾತಿ ವ್ಯವಸ್ಥೆ ತರಲು ಹುನ್ನಾರ ನಡೆಸುತ್ತಿರುವ ಮನುವಾದಿ ಬಿಜೆಪಿ.ವಿರುದ್ದ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸುವ ಕಾಲ ಸಮೀಪಿಸಿದೆ ಎಂದು ಮಾಜಿ ಸಂಸದ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪ ಕಟುವಾಗಿ ಎಚ್ಚರಿಕೆ ನೀಡಿದರು.

    ಎರಡು ದಿನಗಳ ಕಾಲ ಬಳ್ಳಾರಿ ಪ್ರವಾಸ ಮುಗಿಸಿ ದಾವಣಗೆರೆಗೆ ಹೊರಟಿದ್ದ ಅವರು ಬುಧವಾರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಡವಳಿಕೆ ವಿರುದ್ದ ವಾಗ್ದಾಳಿ ನಡೆಸಿದರು
ಸಂವಿಧಾನ, ಸಾಮಾಜಿಕ ನ್ಯಾಯ, ದೇಶದ ಜನರ ಪರವಾಗಿರುವ ಕಾಂಗ್ರೆಸ್ ಕೋಮುವಾದಿ ಬಿಜೆಪಿ.ಯವರ ದಬ್ಬಾಳಿಕೆಯನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ.

    ದೇಶದ ರಾಜಕಾರಣ ಹೀನಾಯ ಕವಲುದಾರಿಯಲ್ಲಿದೆ. 2014 ರಲ್ಲಿ ಪಾರ್ಲಿಮೆಂಟ್ ಚುನಾವಣಾ ಪೂರ್ವದಲ್ಲಿಯೇ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿರುವುದನ್ನು ಮರೆಮಾಚಲು ಪ್ರಧಾನಿ ಮೋದಿ ಪ್ರಚೋಧನಕಾರಿ ವಿವಾದಗಳನ್ನು ಮುಂದಿಟ್ಟು ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತರುವ ಮೂಲಕ ಸಾಮರಸ್ಯ, ಸಹಭಾಳ್ವೆ, ಐಕ್ಯತೆ, ಏಕತೆಯನ್ನು ಹಾಳು ಮಾಡುತ್ತಿದ್ದಾರೆಂದು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದರು.

    ನೂರು ದಿನ ನನಗೆ ಅಧಿಕಾರ ಕೊಡಿ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ. ಭಯೋತ್ಪಾದಕರ ಹುಟ್ಟಡಗಿಸಿ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವುದಾಗಿ ಹೇಳಿದ್ದ ಮೋದಿಯಿಂದ ಇದುವರೆವಿಗೂ ಯಾವ ಆಶ್ವಾಸನೆಯೂ ಈಡೇರಿಲ್ಲ.

     ದೇಶದ ಆರ್ಥಿಕ ಪರಿಸ್ಥಿತಿ ಅಯೋಮಯವಾಗಿದೆ. ಶೇ.9 ರಷ್ಟಿದ್ದ ಜಿಡಿಪಿ. ಶೇ.3.5 ಕ್ಕೆ ಕುಸಿದಿದೆ. 91.01 ಲಕ್ಷ ಕೋಟಿ ಸಾಲವಿದೆ. ದೇಶದ ಪ್ರತಿ ಪ್ರಜೆಯ ಮೇಲೆ 27 ಸಾವಿರದ 200 ರೂ.ಸಾಲವಿದೆ. ಬಡತನ, ನಿರುದ್ಯೋಗವನ್ನು ಪರಿಹರಿಸಲು ಆಗದ ಕೇಂದ್ರ ಬಿಜೆಪಿ.ಸರ್ಕಾರ ಅನವಶ್ಯಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನತೆಯಲ್ಲಿ ಭಯದ ವಾತಾವರಣ ಮೂಡಿಸಿದೆ. ಮೀಸಲಾತಿ ಮೂಲಭೂತ ಹಕ್ಕಲ್ಲ ಎನ್ನುವುದನ್ನು ಸುಪ್ರೀಂಕೋರ್ಟ್ ಮೂಲಕ ಕೇಂದ್ರ ಸರ್ಕಾರ ಹೇಳಿಸುತ್ತಿದೆ. ಪ್ರಧಾನಿ ಮೋದಿ ದೇಶದ ಜನರ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಫೆ.15 ರಿಂದ ರಾಜ್ಯದಲ್ಲಿ ಹೋರಾಟ ಆರಂಭಿಸುತ್ತೇವೆಂದು ವಿ.ಎಸ್.ಉಗ್ರಪ್ಪ ಹೇಳಿದರು.

   ಮನುವಾದಿ ವ್ಯವಸ್ಥೆ ಜಾರಿಗೆ ತರಲು ಬಯಸುತ್ತಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‍ಷಾ ಇವರುಗಳು ಸಂವಿಧಾನವಾದ, ಮನುವಾದ, ಗಾಂಧಿವಾದ, ಗೋಡ್ಸೆವಾದವನ್ನು ಹುಟ್ಟುಹಾಕಿದ್ದಾರೆ. ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದಿರುವುದು ಎಂದು ಸಂಸದ ಅನಂತಕುಮಾರ ಹೆಗಡೆ ಉದ್ದಟತನದ ಮಾತುಗಳನ್ನಾಡುತ್ತಿದ್ದಾರೆ. ರಾಮಾಯಣ, ಮಹಾಭಾರತ ಬರೆದವರು ಆರ್ಯರಲ್ಲ.

   ದಲಿತರು, ಬಡವರು, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡಿ ಮನುವಾದಿ ಸಂವಿಧಾನ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ ದೇಶದ ಜನರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ಮೊದಲು ನಿಲ್ಲಿಸಬೇಕು. ಮೂಲ ನಿವಾಸಿಗಳು, ಈ ದೇಶದ ಮಾಲೀಕರುಗಳ ಮೇಲೆ ಉಪಟಳ ನಡೆಸಲು ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಜನರ ಪರವಾಗಿದೆ. ಗಾಂಧಿ, ಅಂಬೇಡ್ಕರ್‍ರವರ ಸಮಾನತೆ, ಸಹಭಾಳ್ವೆಯ ಕನಸನ್ನು ಕೋಮುವಾದಿ ಬಿಜೆಪಿ. ಮಣ್ಣುಪಾಲು ಮಾಡಲು ಹೊರಟಿರುವುದರ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಭಕ್ಷಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಓ.ಶಂಕರ್, ಡಿ.ಎನ್.ಮೈಲಾರಪ್ಪ, ಮೆಹಬೂಬ್ ಖಾತೂನ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link