ಕೇಂದ್ರದಿಂದ ರಾಜ್ಯದ ಮೇಲೆ ಮಲತಾಯಿ ಧೋರಣೆ : ಸಿ ಎಂ ಇಬ್ರಾಹಿಂ

ಬೆಂಗಳೂರು

     ಬಿಜೆಪಿಯ ನಾಯಕರು ದೆಹಲಿಗೆ ತೆರಳಬೇಕಾದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ವೀಸಾ ಕೊಡಬೇಕು. ನೇರವಾಗಿ ಹೋಗುವಂತಿಲ್ಲ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿ ಪ್ರಯಾಣಕ್ಕೆ ಮಾತ್ರ ಆತಿಥ್ಯ ರಾಷ್ಟ್ರಗಳು ವೀಸಾ ಕೊಡಬೇಕು. ಆದರೆ, ಬಿಜೆಪಿಯಲ್ಲಿ ನಮ್ಮ ದೇಶದ ಒಳಗೇ ಇರುವ ದೆಹಲಿಗೂ ಕೂಡ ನೇರವಾಗಿ ಹೋಗುವಂತಿಲ್ಲ. ಅಮಿತ್ ಶಾ ಒಪ್ಪಿ ವೀಸಾ ಕೊಟ್ಟರೆ ಮಾತ್ರ ದೆಹಲಿಗೆ ಭೇಟಿ ನೀಡಬೇಕಿದೆ ಎಂದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಬಾರಿ ಅವಮಾನಿಸಿದ್ದಾರೆ. ಇತ್ತೀಚೆಗೆ ಚಂದ್ರಯಾನ-2 ನೋಡಲು ಬಂದ ಮೋದಿ ಅವರಿಗೆ ಯಡಿಯೂರಪ್ಪ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಆದರೆ, ಮೋದಿ ಅವರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ನೆರೆ ಪರಿಹಾರಕ್ಕಾಗಿ ಹಲವಾರು ಬಾರಿ ಭೇಟಿ ಮಾಡಲು ಪ್ರಯತ್ನಿಸಿದರೂ ಸಮಯ ಕೊಟ್ಟಿಲ್ಲ. ಇವೆಲ್ಲವನ್ನು ನೋಡಿದರೆ ರಾಜ್ಯದ ಪ್ರಜೆಯಾಗಿ ನಮ್ಮ ಮುಖ್ಯಮಂತ್ರಿಗೆ ನೋವಾಗುತ್ತಿರುವುದು ನನ್ನಿಂದ ಸಹಿಸಲು ಆಗುತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

    ನೆರೆ ಪರಿಸ್ಥಿತಿಯಿಂದ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 38 ಸಾವಿರ ಕೋಟಿ, ಎರಡನೇ ಹಂತದಲ್ಲಿ 35ಸಾವಿರ ಕೋಟಿ ಎಂದು ಅಂದಾಜು ವೆಚ್ಚ ತಯಾರಿಸಿ ಕಳುಹಿಸಿದೆ. ಕೇಂದ್ರದಿಂದ ಅಧ್ಯಯನಕ್ಕಾಗಿ ಬಂದಿದ್ದ ತಂಡದ ಸದಸ್ಯರಿಗೆ ಡೇಂಘಿ ಜ್ವರ ಬಂದು ಮಲಗಿದ್ದಾರಂತೆ. ಅವರಿನ್ನೂ ವರದಿ ಕೊಟ್ಟಿಲ್ಲ. ನಿನ್ನೆ ಕೇಂದ್ರ ಸರ್ಕಾರ 1200 ಕೋಟಿ ಪರಿಹಾರ ಘೋಷಣೆ ಮಾಡಿದೆ. ಅದು ಯಾವುದಕ್ಕೆ ಸಾಲುತ್ತದೆ. ಕನಿಷ್ಠ 10 ಸಾವಿರ ಕೋಟಿ ಪರಿಹಾರ ಕೊಡಬೇಕು. ನಮ್ಮದು ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ಮೂರನೇ ರಾಜ್ಯ. ನಮಗೆ ಪರಿಹಾರ ನೀಡಲು ತಾರತಮ್ಯ ಮಾಡಬಾರದು ಎಂದು ತಿಳಿಸಿದರು.

    ಪ್ರಧಾನಿ ಮೋದಿ ಅವರು ಆಡಳಿತ, ವಿರೋಧ ಪಕ್ಷಕ್ಕೆ ಸಮಯ ಕೊಡುವುದಿಲ್ಲ. ರಾಜಕಾರಣಿಗಳನ್ನು ಅಸಡ್ಡೆ ಮಾಡುತ್ತಾರೆ. ಪತ್ರಕರ್ತರು, ಮಠಾಧೀಶರ ನಿಯೋಗ ತೆರಳಿ ಪ್ರಧಾನಿ ಭೇಟಿಯಾಗಿ 10 ಸಾವಿರ ಕೋಟಿ ರೂ.ಗೆ ಒತ್ತಾಯಿಸಬೇಕು. ಪತ್ರಕರ್ತರು, ಮಠಾಧೀಶರ ನಿಯೋಗ ತೆರಳಲು ನಾವು ಪ್ರಯಾಣದ ವೆಚ್ಚ ಭರಿಸಲು ಸಿದ್ದರಿದ್ದೇವೆ ಎಂದರು.

    ಕೇಂದ್ರ ಸರ್ಕಾರದ ತಾರಮ್ಯದ ವಿರುದ್ಧ ಅಕ್ಟೋಬರ್ 10ರ ಬಳಿಕ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಲಿದೆ. ನಾವಷ್ಟೇ ಅಲ್ಲ ಬಿಜೆಪಿಯ ಸಂಸದರಾದ ಶ್ರೀನಿವಾಸ್ ಪ್ರಸಾದ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ನೆರೆ ಪರಿಹಾರ ಬಗ್ಗೆ ಮಾತನಾಡಿದ್ದಾರೆ. ಸಂತ್ರಸ್ತರಿಗೆ ನೆರವು ಕೊಡಿಸುವುದು ಎಲ್ಲರ ಪ್ರಮುಖ ಆದ್ಯತೆಯಾಗಿದೆ. ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯಬಾರದು. ಅವುಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಹೇಳಿದರು.

    ಬಿಜೆಪಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದು ಬೈಟೆಕ್ ಸರ್ಕಾರ. ಮೇಲಕ್ಕೇದ್ದೇ ಇಲ್ಲ. ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದರಿಂದ ರಾಜ್ಯದಲ್ಲಿ ಜನ ಸತ್ತರೂ ಬಾಯಿ ಬಿಡಬಾರದು ಎಂಬ ಷರತ್ತು ವಿಧಿಸಿದಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಮಂತ್ರಿಗಳು ತಮ್ಮ ಪ್ರಯಾಣಕ್ಕಾಗಿ ತೆಗೆದುಕೊಳ್ಳುವ ಟಿಎ, ಡಿಎಗಳನ್ನು ಬಿಟ್ಟುಕೊಟ್ಟರೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬಹುದು. ಖಾಲಿ ಕೈಯಲ್ಲಿ ಹೋಗಿ ಅಯ್ಯೋ ಪಾಪ ಎಂದು ಬರುವುದಕ್ಕಿಂತ ಅವರ ಪ್ರಯಾಣದ ವೆಚ್ಚವನ್ನಾದರೂ ಸಂತ್ರಸ್ತರಿಗೆ ಕೊಡಲಿ ಎಂದು ಸಲಹೆ ನೀಡಿದರು.

    ಕಾಂಗ್ರೆಸ್‍ನಲ್ಲಿ ವಿಪಕ್ಷ ನಾಯಕನ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಅನುಭವ ಮತ್ತು ಹಿರಿತನ ಇರುವವರನ್ನು ಕಾಂಗ್ರೆಸ್ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡುತ್ತದೆ. ಬಿಜೆಪಿಯ ಹೆಣ ಹೊರಲು ಹಿಂದೆ ಆದರೇನು, ಮುಂದೆ ಆದರೇನು ? ಯಾರಿಗೆ ಅವಕಾಶ ಕೊಟ್ಟರು ಕಾಂಗ್ರೆಸ್ ಕೆಲಸ ಮಾಡುತ್ತದೆ. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

    ಸಿದ್ದರಾಮಯ್ಯ ಅವರು ದೆಹಲಿಗೆ ಹೋದಾಗ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಮರುದಿನ ಪ್ರತ್ಯೇಕವಾಗಿ ಭೇಟಿ ಮಾಡಲು ಸಮಯ ಸಿಕ್ಕಿಲ್ಲ. ಅಪರೂಪಕ್ಕೆ ಮಾತನಾಡಿಸುವವರಾದರೆ ಸಮಯ ಬೇಕು. ಆದರೆ, ಸೋನಿಯಗಾಂಧಿ ಅವರ ಜತೆ ಸಿದ್ದರಾಮಯ್ಯ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಇಬ್ರಾಹಿಂ ಹೇಳಿದರು.

    ರಾಜ್ಯದಲ್ಲಿ ಎನ್‍ಆರ್‍ಸಿ ಜಾರಿಗೆ ತರಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಈ ಬಗ್ಗೆ ಮುಸ್ಲಿಂ ಸಮುದಾಯ ಯಾವುದೇ ಆತಂಕ ವಿಟ್ಟುಕೊಳ್ಳಬಾರದು. ಬಿಜೆಪಿ ಸರ್ಕಾರ ಆರ್‍ಎಸ್‍ಎಸ್‍ನ ಅಜೆಂಡಾವನ್ನು ಜಾರಿಗೆ ತರುತ್ತಿದೆ. ಜನರಿಗೆ ಬೇಕಿರುವ ಅನ್ನ, ಮನೆ, ಬಟ್ಟೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap