ಬೆಂಗಳೂರು:
ಮೇಕೆದಾಟು ಅಣೆಕಟ್ಟೆ ಯೋಜನೆಗೆ ತಗಾದೆ ಎತ್ತಿರುವ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮಾತುಕತೆಗೆ ಕೇಂದ್ರ ಮಧ್ಯಸ್ಥಿಕೆ ವಹಿಸಲಿ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ನಿರ್ಮಾಣ ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಯೋಜನೆ ಪ್ರದೇಶಕ್ಕೆ ಮಾಧ್ಯಮ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಮಿಳುನಾಡಿಗೆ ವಾಸ್ತವಾಂಶ ಏನೆಂಬುದು ಚೆನ್ನಾಗಿ ಗೊತ್ತಿದೆ. ಯೋಜನೆಯಿಂದ ತಮಗೇ ಹೆಚ್ಚು ಅನುಕೂಲ ಆಗುತ್ತದೆ ಎಂಬುದೂ ಮನದಟ್ಟಾಗಿದೆ. ಆದರೂ ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದೆ. ನಾನೂ ಈಗಲೂ ವಿನಮ್ರವಾಗಿ ಹೇಳುತ್ತೇನೆ. ಅಲ್ಲಿನ ಮುಖ್ಯ ಮಂತ್ರಿಯಿಂದ ಹಿಡಿದು ಪಕ್ಷಭೇದ ಮರೆತು ಎಲ್ಲರೊಂದಿಗೂ ಮಾತುಕತೆಗೆ ಸಿದ್ಧನಿದ್ದೇನೆ. ಅವರಾದರೂ ಅದಕ್ಕೆ ಅವಕಾಶ ಕೊಡಲಿ. ಇಲ್ಲ ಅವರೇ ಸರ್ವಪಕ್ಷ ಮುಖಂಡರು ಮತ್ತು ಅಧಿಕಾರಿಗಳ ತಂಡದೊಂದಿಗೆ ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಲಿ ಎಂದು ಹೇಳಿದರು.
ತಮಿಳುನಾಡು ಮೇಕೆದಾಟು ವಿಚಾರವಾಗಿ ವಿಶೇಷ ಅಧಿವೇಶನ ನಡೆಸಿದ್ದು ಆಶ್ಚರ್ಯ ತಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅದಕ್ಕೆ ಆ ಹಕ್ಕು ಇದೆ. ತಮಿಳುನಾಡು ಜತೆ ನಮಗೆ ಮನಸ್ತಾಪ, ತಗಾದೆ ಬೇಕಿಲ್ಲ. ಎರಡೂ ರಾಜ್ಯಗಳ ಹಿತ ಕಾಯುವ ಈ ಯೋಜನೆ ವಸ್ತುಸ್ಥಿತಿಯನ್ನು ಮನದಟ್ಟು ಮಾಡಿಕೊಂಡರೆ ಸಾಕು.
ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಸೂಕ್ಷ್ಮಮತಿಗಳು, ಜ್ಙಾನವಂತರು. ಅವರು ವಾಸ್ತವ ಅರ್ಥ ಮಾಡಿಕೊಳ್ಳುತ್ತಾರೆ. ಸುಪ್ರೀಂಕೋರ್ಟ್ ನಲ್ಲಿ ಹಾಕಿರುವ ತಗಾದೆ ಅರ್ಜಿ ವಾಪಸ್ಸು ಪಡೆಯುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಪ್ರಸಕ್ತ ಯೋಜನೆಯಿಂದ ಕರ್ನಾಟಕವು 440 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಿದೆ. ಒಂದೇ ಒಂದು ಎಕರೆ ನೀರಾವರಿ ಮಾಡುವುದಿಲ್ಲ. ಅದಕ್ಜೆ ಅವಕಾಶವೂ ಇಲ್ಲ. ಕಾವೇರಿ ಐತೀರ್ಪಿನಲ್ಲಿ ಕುಡಿಯುವ ಉದ್ದೇಶಕ್ಕೆ 18 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಇದೆ. ಬೆಂಗಳೂರಿಗೆ 4.5 ಟಿಎಂಸಿ ಪೂರೈಸಬಹುದು. ಆದರೆ ಅದನ್ನು ಇಲ್ಲಿಂದಲೇ ಪಂಪ್ ಮಾಡಬೇಕೆಂದೇನೂ ಇಲ್ಲ. ಈಗ ನೀರು ಸರಬರಾಜು ಮಾಡುತ್ತಿರುವ ಜಾಗದಿಂದಲೇ ಮಾಡಬಹುದು. ಹೀಗಾಗಿ ತಮಿಳುನಾಡು ವಿನಾಕಾರಣ ಅನುಮಾನ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಯೋಜನೆಗೆ 5500 ಕೋಟಿ ರುಪಾಯಿ ಖರ್ಚು ಅಂದಾಜು ಮಾಡಲಾಗಿದೆ. ಇಂಧನ ಇಲಾಖೆ 2000 ಕೋಟಿ ಹಾಗೂ ಉಳಿದಿದ್ದನ್ನು ನೀರಾವರಿ ಇಲಾಖೆ ಭರಿಸಲಿದೆ. ಕೇಂದ್ರ ಸರಕಾರ, ಪರಿಸರ ಮತ್ತು ಅರಣ್ಯ ಇಲಾಖೆ ಎಷ್ಟು ಬೇಗ ಅನುಮತಿ ನೀಡುತ್ತವೆಯೋ ಅಷ್ಟು ಬೇಗ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದರು.
ಕಾವೇರಿ ನದಿ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ ಬಿಡುಗಡೆ ಮಾಡಲು ನಿಗದಿ ಮಾಡಿರುವ ಪ್ರಮಾಣ ವಾರ್ಷಿಕ 177.25 ಟಿಎಂಸಿ. ಆ ನೀರು ಬಿಡುಗಡೆಗೆ ಈ ಯೋಜನೆಯಿಂದ ಯಾವುದೇ ಅಡ್ಡಿ ಇಲ್ಲ. ಇನ್ನೂ ನಾವೇ ಕೈಯಿಂದ ಹಣ ಹಾಕಿ ತಮಿಳುನಾಡು ಪರ 67 ಟಿಎಂಸಿ ನೀರು ಸಂಗ್ರಹ ಮಾಡಿಕೊಡುತ್ತಿದ್ದೇವೆ. ಮೇಲಾಗಿ ಈ ಯೋಜನೆಯಿಂದ ಕರ್ನಾಟಕವು ಒಂದೇ ಒಂದು ಎಕರೆ ಜಮೀನು ನೀರಾವರಿ ಮಾಡುವುದಿಲ್ಲ. ಎಂದು ಹೇಳಿದರು.
ಪ್ರಸಕ್ತ ವರ್ಷ ಕರ್ನಾಟಕದಿಂದ ತಮಿಳುನಾಡಿಗೆ 397 ಟಿಎಂಸಿ ನೀರು ಹರಿದು ಹೋಗಿದೆ. ಆದರೆ ತಮಿಳುನಾಡು ಬಳಕೆ ಮಾಡಿಕೊಂಡದ್ದು ಕೇವಲ 150 ಟಿಎಂಸಿ ಮಾತ್ರ. ಉಳಿದದ್ದು ಸಮುದ್ರ ಸೇರಿ ಪೋಲಾಯಿತು. ಈಗ ಮೇಕೆದಾಟುವಿನಲ್ಲಿ ನಾವು ಮಾಡುತ್ತಿರುವ ಯೋಜನೆಯಿಂದ ವಿದ್ಯುತ್ ಉತ್ಪಾದನೆ ಮಾಡುತ್ತೇವೆ. ನಂತರ ಆ ನೀರು ಕೂಡ ತಮಿಳುನಾಡಿಗೇ ಹರಿದು ಹೋಗುತ್ತದೆ. ಅವರಿಗೇ ಬಳಕೆ ಆಗುತ್ತದೆ.
ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಕುಡಿಯುವ ನೀರು ಉದ್ದೇಶಕ್ಕೆ ವಾಸ್ತವವಾಗಿ ಎರಡೂ ರಾಜ್ಯಗಳಿಗೂ ಅನುಕೂಲ ಆಗಲಿದೆ. ಅದರಲ್ಲೂ ತಮಿಳುನಾಡಿಗೆ ಶೇಕಡಾ 90 ರಷ್ಟು ಅನುಕೂಲ ಆಗಲಿದೆ. ಏಕೆಂದರೆ ಕರ್ನಾಟಕದ ಒಂದೇ ಒಂದು ಎಕರೆ ಭೂಮಿಯಲ್ಲೂ ನೀರಾವರಿ ಮಾಡಲು ಆಗುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಎಲ್ಲಕ್ಕಿಂಥ ಮಿಗಿಲಾಗಿ ನದಿ ನೀರು ನಿರ್ವಹಣೆ ಕಾವೇರಿ ಜಲ ಆಯೋಗದ ಪರಿಮಿತಿಯಲ್ಲಿ ಬರುವುದರಿಂದ ರಾಜ್ಯ ಸರಕಾರ ತನ್ನ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ.
ಮೇಕೆದಾಟು ಯೋಜನೆಯಿಂದ ರಾಜ್ಯದ 4996 ಹೆಕ್ಟೇರ್ ಭೂಮಿ ಮುಳುಗಡೆ ಆಗುತ್ತಿದೆ. ಇದರಲ್ಲಿ ಖಾಸಗಿ ಸೇರಿದಂತೆ 296 ಎಕರೆ ರೆವಿನ್ಯೂ, 500 ರಿಂದ 600 ಎಕರೆ ರೈತರ ಭೂಮಿ ಇದೆ. ಉಳಿದಿದ್ದೆಲ್ಲವೂ ಅರಣ್ಯ ಭೂಮಿ. ಮುತ್ತತ್ತಿ ಸೇರಿದಂತೆ ಕೆಲವು ರೈತರ ಭೂಮಿ ಯೋಜನೆಗೆ ಒಳಪಡಲಿದೆ. ಅವರೆಲ್ಲರೂ ಸಂತೋಷವಾಗಿ ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ರಾಜ್ಯದ ಹಿತಕ್ಕಾಗಿ ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಚಿವ ಡಿ.ಸಿ. ತಮ್ಮಣ್ಣ, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಮಂಜು, ಡಾ. ರಂಗನಾಥ್, ವಿಧಾನ ಪರಿಷತ್ ಸದಸ್ಯ ರವಿ, ಹಿರಿಯ ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ಸಂದೀಪ್ ಧವೆ, ಪೊನ್ನುರಾಜ್, ಕಾವೇರಿ ನೀರಾವರಿ ನಿಗಮದ ಎಂಡಿ ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ