ಹಾಲು ಒಕ್ಕೂಟಗಳಿಗೆ ದೊಡ್ಡ ಶಾಕ್ ನೀಡಲು ಮುಂದಾದ ಕೇಂದ್ರ ಸರ್ಕಾರ..!

ಬೆಂಗಳೂರು

   ಅತಿವೃಷ್ಟಿಯಿಂದ ಕಂಗಾಲಾಗಿರುವ ರಾಜ್ಯ ಮತ್ತೊಂದು ಅತಿವೃಷ್ಟಿಗೆ ಸಜ್ಜಾಗುವ ಆತಂಕ ಎದುರಾಗಿದ್ದು ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತೆರಿಗೆಯಿಲ್ಲದೆ ದೇಶದೊಳಗೆ ಬಿಟ್ಟುಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ರೈತರ ಪಾಲಿಗೆ ಗಂಡಾಂತರಕಾರಿಯಾಗುವುದು ನಿಶ್ಚಿತವಾಗಿದೆ.

     ಹನ್ನೆರಡು ದೇಶಗಳಿಂದ ತೆರಿಗೆ ರಹಿತವಾಗಿ ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತರಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದು ಮುಂದಿನ ತಿಂಗಳ ವೇಳೆಗೆ ಅಂತಿಮ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ.

    ಕೇಂದ್ರ ಸರ್ಕಾರದ ಈ ನಿಲುವಿನ ಬೆನ್ನಲ್ಲೇ ರಾಜ್ಯದ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಪಶುಸಂಗೋಪನೆ ನಡೆಸುತ್ತಿರುವ ಎರಡು ಲಕ್ಷ ಮಹಿಳೆಯರು ಇದನ್ನು ವಿರೋಧಿಸಿ ಪ್ರಧಾನಿಗೆ ಪತ್ರ ಬರೆಯುವಂತೆ ಈಗಾಗಲೇ ರಹಸ್ಯ ಸೂಚನೆ ನೀಡಲಾಗಿದೆ.ಗುಜರಾತ್,ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳು ಹೆಚ್ಚಿನ ಹಾಲನ್ನು ಉತ್ಪಾದಿಸುತ್ತಿದ್ದು ತಮ್ಮಲ್ಲಿ ಲಭ್ಯವಿರುವ ಹಾಲಿಗೇ ಸೂಕ್ತ ಮಾರುಕಟ್ಟೆ ಲಭ್ಯವಾಗದ ಸ್ಥಿತಿಯಲ್ಲಿವೆ.

    ಕರ್ನಾಟಕದಲ್ಲೇ ಎಪ್ಪತ್ತೈದು ಲಕ್ಷ ಲೀಟರ್‍ನಷ್ಟು ಹಾಲು ಉತ್ಪಾದನೆಯಾಗುತ್ತಿದ್ದು ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಕುಡಿಯಲು ದೊಡ್ಡ ಪ್ರಮಾಣದಲ್ಲಿ ಹಾಲು ನೀಡಿದರೂ ಇನ್ನೂ ಹಾಲು ಉಳಿಕೆಯಾಗುತ್ತಿದೆ.

    ರಾಜ್ಯದ ಪರಿಸ್ಥಿತಿಯೇ ಹೀಗಿರುವಾಗ ಹಾಲು ಮತ್ತಿತರ ಹಾಲಿನ ಉತ್ಪನ್ನಗಳ ವಿಷಯದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಗುಜರಾತ್ ಪರಿಸ್ಥಿತಿ ಏನಾಗಬೇಕು?ತಮಿಳ್ನಾಡು,ಆಂಧ್ರಪ್ರದೇಶ,ಮಹಾರಾಷ್ಟ್ರ ಸೇರಿದಂತೆ ಹೆಚ್ಚು ಹಾಲು ಉತ್ಪಾದಿಸುತ್ತಿರುವ ರಾಜ್ಯಗಳ ಪರಿಸ್ಥಿತಿ ಹೇಗಿರಬೇಕು?

     ಪರಿಸ್ಥಿತಿ ಹೀಗಿರುವಾಗ ಹನ್ನೆರಡು ದೇಶಗಳಿಂದ ತೆರಿಗೆ ವಿಧಿಸದೆ ಹಾಲು ಮತ್ತಿತರ ಉತ್ಪನ್ನಗಳನ್ನು ದೇಶಕ್ಕೆ ಆಮದು ಮಾಡಿಕೊಂಡರೆ ದೇಶದಲ್ಲಿ ಹಾಲು ಉತ್ಪಾದನೆ ಮಾಡುತ್ತಿರುವ ರಾಜ್ಯಗಳ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.

    ಕರ್ನಾಟಕವನ್ನೇ ತೆಗೆದುಕೊಂಡರೆ ಹಾಲು ಉತ್ಪನ್ನಗಳ ಪ್ರಮಾಣ ಹೆಚ್ಚಿರುವಾಗ ಹೊರದೇಶಗಳಿಂದ ಕಡಿಮೆ ದರದ ಹಾಲು ಮಾರುಕಟ್ಟೆಗೆ ಬಂದರೆ ರಾಜ್ಯದ ಹಾಲು ಉತ್ಪನ್ನ ಘಟಕಗಳಲ್ಲಿ ಲಭ್ಯವಾಗುತ್ತಿರುವ ಹಾಲಿನ ಗತಿ ಏನಾಗಬೇಕು?

     ಇದನ್ನು ಉತ್ಪಾದಿಸುತ್ತಿರುವ ಹಾಲು ಮತ್ತು ಹಾಲಿನ ಪದಾರ್ಥಗಳ ಗತಿ ಏನಾಗಬೇಕು?ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಬೆಲೆಗೆ ಹೋಲಿಸಿದರೆ ತೆರಿಗೆ ರಹಿತ ಹಾಲಿನ ಬೆಲೆ ಒಂದು ಲೀಟರ್‍ಗೆ ಐದೋ,ಹತ್ತೋ ರೂಪಾಯಿ ಕಡಿಮೆಯಾಗುತ್ತದೆ.

     ಆಗ ಕೆಎಂಎಫ್ ಸೇರಿದಂತೆ ರಾಜ್ಯದ ಎಲ್ಲ ಹಾಲು ಉತ್ಪನ್ನ ಘಟಕಗಳು ಪಾಪರ್ ಆಗುವ ಪರಿಸ್ಥಿತಿ ಬರುತ್ತದಲ್ಲದೆ ಜೀವನೋಪಾಯಕ್ಕಾಗಿ ಪಶುಸಂಗೋಪನೆಯನ್ನು ನೆಚ್ಚಿಕೊಂಡ ಲಕ್ಷಾಂತರ ಕುಟುಂಬಗಳ ಬದುಕು ಮೂರಾಬಟ್ಟೆಯಾಗುತ್ತದೆ.ಹೀಗಾಗಿ ವಿದೇಶಗಳಿಂದ ತೆರಿಗೆ ರಹಿತವಾಗಿ ಹಾಲನ್ನು ಆಮದು ಮಾಡಿಕೊಳ್ಳುವ ಪ್ರಸ್ತಾವವನ್ನು ತಕ್ಷಣವೇ ಕೈ ಬಿಡಬೇಕು.ರೈತರ ಬದುಕು ಹಾಳಾಗದಂತೆ ತಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಎರಡು ಲಕ್ಷ ಮಹಿಳೆಯರು ಪತ್ರ ಬರೆಯಲಿದ್ದಾರೆ.

     ಉನ್ನತ ಮೂಲಗಳ ಪ್ರಕಾರ ವಿದೇಶಗಳಿಂದ ತೆರಿಗೆ ರಹಿತ ಹಾಲು ತರಿಸಲು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಅತೀವ ಉತ್ಸುಕರಾಗಿದ್ದು ಇದರಿಂದ ಕನಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ,ಸದರಿ ಪ್ರಸ್ತಾವನೆಯನ್ನು ಕೈ ಬಿಡಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

      ಇದರ ಮುಂದುವರಿದ ಭಾಗವಾಗಿ ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರ ನಡೆಸಲಿರುವ ಮತ್ತೊಂದು ಸುತ್ತಿನ ಸಭೆಗೂ ಮುನ್ನ ತಮ್ಮ ವಿರೋಧವನ್ನು ಸ್ಪಷ್ಟವಾಗಿ ಪುನ: ಹೇಳಲು ನಿರ್ಧರಿಸಿದ್ದಾರೆ.ಇದರೊಂದಿಗೇ ವಿದೇಶದಿಂದ ತೆರಿಗೆ ರಹಿತ ಹಾಲನ್ನು ತರಿಸುವ ಪ್ರಸ್ತಾವನೆಯ ಬಗ್ಗೆ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿರುವ ಎರಡು ಲಕ್ಷ ಮಹಿಳೆಯರಿಂದ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ರವಾನೆಯಾಗಲಿದೆ ಎಂದು ಉನ್ನತ ಮೂಲಗಳು ವಿವರ ನೀಡಿವೆ.

 

Recent Articles

spot_img

Related Stories

Share via
Copy link
Powered by Social Snap