ತುಮಕೂರು
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಅವರು ಶಿರಾ ತಾಲ್ಲೂಕು ಮೇಲ್ಕುಂಟೆ ಗ್ರಾಮ ಪಂಚಾಯಿತಿಗಿಂದು ಭೇಟಿ ನೀಡಿ ಜಾಬ್‌ಕಾರ್ಡ್(ಉದ್ಯೋಗ ಚೀಟಿ) ವಿತರಣೆ ಮಾಡಿದರು.
ಜಿಲ್ಲಾದ್ಯಂತ ನವೆಂಬರ್ ೧ ರಿಂದ ೧೫ರವರೆಗೆ ಹಮ್ಮಿಕೊಂಡಿರುವ ಜಾಬ್‌ಕಾರ್ಡ್ ಆಂದೋಲನ ಕಾರ್ಯಕ್ರಮದಡಿ ಹೊಸದಾಗಿ ನೋಂದಣಿ ಮಾಡಿಸಿರುವ ಕೂಲಿಕಾರರಿಗೆ ಅವರು ಜಾಬ್‌ಕಾರ್ಡ್ ವಿತರಿಸಿದರು.ನಂತರ ಅವರು ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಪಿ.ಎಂ.ಎ.ವೈ. ವಸತಿ ಯೋಜನೆ, ೧೪ನೇ ಹಣಕಾಸು ಯೋಜನೆ ಮತ್ತು ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮಳೆ ನೀರು ಕೊಯ್ಲು ಘಟಕವನ್ನು ವೀಕ್ಷಿಸಿದರು.
ಮೇಲ್ಕುಂಟೆ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರೊಡನೆ ಚರ್ಚಿಸಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್, ಮೇಲ್ಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಡಿ. ನರಸಿಂಹಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ