ಏ.29,30ಕ್ಕೆ ಜಿಲ್ಲೆಯ 8 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಅಗತ್ಯ ಕ್ರಮ : ಜಿಲ್ಲಾಧಿಕಾರಿ

ಚಿತ್ರದುರ್ಗ :

      ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಏ. 29 ಮತ್ತು 30 ರಂದು ಜಿಲ್ಲೆಯ 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 3849 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.

      ಸಿಇಟಿ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಸಿ.ಇ.ಟಿ ಪರೀಕ್ಷೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದವರು, ಅರ್ಜಿ ಪ್ರಕ್ರಿಯೆ ಆನ್‍ಲೈನ್‍ನಲ್ಲಿ ಪೂರ್ಣಗೊಂಡಿದೆಯೇ ಇಲ್ಲವೆ ಎಂದು ಮೊದಲೇ ವಿದ್ಯಾರ್ಥಿಗಳು ಖಚಿತ ಪಡಿಸಿಕೊಳ್ಳಬೇಕು. ಈ ಕುರಿತು ಆಯಾ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮರ್ಪಕ ಆಸನದ ವ್ಯವಸ್ಥೆ, ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು. ಬೇಸಿಗೆಯ ಕಾಲವಾಗಿರುವುದರಿಂದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚಿಸಿದರು

       ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಯೊಳಗೆ ಪ್ರಶ್ನೆ ಪತ್ರಿಕೆ ತಲುಪಿಸಿ, ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಪುನಃ ಖಜಾನೆಗೆ ಠೇವಣಿ ಮಾಡುವ ಜವಾಬ್ದಾರಿ ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದ್ದು, ಈ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಜಿಲ್ಲಾಡಳಿತದ ವತಿಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ನೇಮಿಸಲಾಗಿದೆ.

        ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲು ಆಗದಂತೆ, ಇಲಾಖೆ ನಿಗದಿಪಡಿಸಿದ ಶ್ರೇಣಿ ಪ್ರಕಾರವೇ ವಿದ್ಯಾಥಿಗಳಿಗೆ ನೀಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಿಗೆ 10 ನಿಮಿಷ ಮುಂಚಿತವಾಗಿ ಆಗಮಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಲಾಗ್‍ಟೇಬಲ್ಸ್, ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ವ್ಶೆರ್‍ಲೆಸ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.

      ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ ಮಾತನಾಡಿ, ಸಿಇಟಿ ಪರೀಕ್ಷೆ ಏ. 29 ರಂದು ಬೆಳಿಗ್ಗೆ 10-30 ರಿಂದ 11-50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 02-30 ರಿಂದ 3-50 ರವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ. ಏ. 30 ರಂದು ಬೆಳಿಗ್ಗೆ 10-30 ರಿಂದ 11-50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 02-30 ರಿಂದ 3-50 ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು

       ಪ್ರತಿ ವಿಷಯಕ್ಕೂ 60 ಅಂಕಗಳಿರುತ್ತವೆ. ಜಿಲ್ಲಾ ಖಜಾನೆಯಲ್ಲಿ ಸಿ.ಇ.ಟಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಉತ್ತರ ಪತ್ರಿಕೆಗಳನ್ನು ಖಜಾನೆಯಲ್ಲಿಡಲು ‘ಎ’ ಗುಂಪಿನ ಅಧಿಕಾರಿ ಹಾಗೂ ಖಜಾನೆಯಿಂದ ಪ್ರಶ್ನೆಪತ್ರಿಕೆ ವಿತರಿಸಲು ಮತ್ತು ಉತ್ತರ ಪತ್ರಿಕೆಗಳನ್ನು ವಾಪಸ್ ತರಲು ಪ್ರತಿ ನಾಲ್ಕು ಕೇಂದ್ರಗಳಿಗೆ ಒಬ್ಬರಂತೆ ‘ಬಿ’ ಗುಂಪಿನ 02 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾರ್ಥಿಗಳ ಸಂಖ್ಯೆ :

      ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಒಟ್ಟು 600 ವಿದ್ಯಾರ್ಥಿಗಳು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು-609, ಎಸ್.ಜೆ.ಎಂ ಪದವಿ ಪೂರ್ವ ಕಾಲೇಜು-500, ಬೃಹನ್ಮಠ ಪದವಿ ಪೂರ್ವ ಕಾಲೇಜು-480, ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜು-400, ಮಹಾರಾಣಿ ಪದವಿ ಪೂರ್ವ ಕಾಲೇಜು-400, ಕೆ.ಎಂ.ಎಸ್ ಪದವಿ ಪೂರ್ವ ಕಾಲೇಜು-340 ಹಾಗೂ ಎಸ್.ಆರ್.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ 520 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

       ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಧಿಕಾರಿ ವಿಜಯಕುಮಾರ, ತಹಶೀಲ್ದಾರ ನಜೀದ ಜಮ್ ಜಮ್, ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ನಂದಿನಿ, ಡಿ.ಡಿಪಿ.ಐ ಅಂಥೋನಿ, ಡಯಟ್ ಹಿರಿಯ ಉಪನ್ಯಾಸಕ ರಮೇಶ್, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link