ಸರಗಳ್ಳರ ಬಂಧನ..!!

ಬೆಂಗಳೂರು

       ಬೆಂಗಳೂರಿನ ಮಹಿಳೆಯರು ಅತಿಹೆಚ್ಚು ತೂಕದ ಚಿನ್ನದ ಸರಗಳನ್ನು ಧರಿಸುತ್ತಿದ್ದು ಅವನ್ನು ಕಸಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ವಿಮಾನದಲ್ಲಿ ಬಂದು ಕಳವು ಮಾಡಿದ ಡ್ಯೂಕ್ ಬೈಕ್‍ನಲ್ಲಿ ಸುತ್ತಾಡಿ ಸರಗಳವು ಮಾಡಿ ರೈಲು ಇಲ್ಲವೇ ಬಸ್‍ನಲ್ಲಿ ಮುಂಬೈಗೆ ಪರಾರಿಯಾಗುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್‍ನ ಇಬ್ಬರು ಸರಗಳ್ಳರು ವಿದ್ಯಾರಣ್ಯಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ..

        ಮುಂಬೈನ ಥಾಣ ಜಿಲ್ಲೆಯ ಇರಾನಿ ಗ್ಯಾಂಗ್‍ನ ಸರಗಳ್ಳರಾದ ಮೊಹ್ಮದ್ ಅಲಿಯಾಸ್ ಮೊಹ್ಮದ್ (23), ಸಯೈದ್ ಪರಾರ್ ಹುಸೇನ್ ಅಲಿಯಾಸ್ ಸೈಯದ್ (37) ಬಂಧಿಸಿ 20 ಕಡೆಗಳಲ್ಲಿ ಸರಗಳವು ಮಾಡಿದ್ದ 15 ಲಕ್ಷ ಮೌಲ್ಯದ ಚಿನ್ನದ ಸರಗಳು ಹಾಗೂ ಡ್ಯೂಕ್ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ.

        ವಿಮಾನದಲ್ಲಿ ಮುಂಬೈನಿಂದ ನಗರಕ್ಕೆ ಬಂದು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿನ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದ ಡ್ಯೂಕ್ ಬೈಕ್‍ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರ ಸರಗಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

ಸಿಕ್ಕಿ ಬೀಳುವ ಭಯ

        ಕಳ್ಳತನ ಮಾಡಿದ ಸರಗಳನ್ನು ವಿಮಾನದಲ್ಲಿ ವಾಪಸ್ಸು ಹೋದರೆ ಸಿಕ್ಕಿಬೀಳಬಹುದೆಂಬ ಭಯದಿಂದ ರೈಲು ಇಲ್ಲವೆ ಬಸ್‍ನಲ್ಲಿ ಮುಂಬೈಗೆ ಪರಾರಿಯಾಗುತ್ತಿದ್ದರು. ಮುಂಬೈನಲ್ಲಿ ವರ್ಷದ ಹಿಂದೆ ಡ್ಯೂಕ್ ಬೈಕ್‍ನ್ನು ಕಳವು ಮಾಡಿದ್ದ ಆರೋಪಿಗಳು, ಅದನ್ನು ನಗರಕ್ಕೆ ತಂದು ಕಂಟೋನ್ಮೆಂಟ್ ಇಲ್ಲವೆ ಕೆಂಪೇಗೌಡ ಬಸ್ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದರು.

         ಇಲ್ಲಿಯವರೆಗೆ ಕಳೆದ 6 ತಿಂಗಳಿಂದ 5 ಬಾರಿ ನಗರಕ್ಕೆ ಬಂದಿದ್ದ ಆರೋಪಿಗಳು, ನಿಲುಗಡೆ ಪ್ರದೇಶದಲ್ಲಿರುತ್ತಿದ್ದ ಬೈಕ್‍ನ್ನು ತೆಗೆದುಕೊಂಡು ವಿದ್ಯಾರಣ್ಯಪುರ, ಸದಾಶಿವನಗರ, ಆರ್‍ಟಿ ನಗರ, ಬಾಣಸವಾಡಿ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ 20ಕ್ಕೂ ಹೆಚ್ಚು ಕಡೆಗಳಲ್ಲಿ ಸರಗಳವು ಮಾಡಿದ್ದರು.

        ಕಳವು ಮಾಡಿದ ಚಿನ್ನದ ಸರಗಳನ್ನು ಮುಂಬಯಿಯಲ್ಲಿ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಆರೋಪಿಗಳು ಹಣ ಖರ್ಚಾದ ನಂತರ ಮತ್ತೆ ನಗರಕ್ಕೆ ಬರುತ್ತಿದ್ದರು ಅಲ್ಲಿಯವರೆಗೆ ವಾಹನ ನಿಲುಗಡೆ ಪ್ರದೇಶದಲ್ಲಿ ಬೈಕ್ ಇರುತ್ತಿತ್ತು.

ಡ್ಯೂಕ್ ಬೈಕ್‍ನಿಂದ ಪತ್ತೆ

        ಕಳೆದ ನವೆಂಬರ್‍ನಲ್ಲಿ ವಿದ್ಯಾರಣ್ಯಪುರದ ಸಿಂಗಾಪುರ ಎಕ್ಸ್‍ಪ್ರೆಸ್ ಲೇಔಟ್‍ನ ವಿಜಯಲಕ್ಷ್ಮಿ ಎಂಬುವರು ಮನೆಯ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅವರ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿದ ವಿದ್ಯಾರಣ್ಯಪುರ ಪೊಲೀಸ್ ಇನ್ಸ್‍ಪೆಕ್ಟರ್ ಬಿ. ರಾಮಮೂರ್ತಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿತ್ತು.

         ಕಂಟೋನ್ಮೆಂಟ್‍ನ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಹಲವು ದಿನಗಳವರೆಗೆ ನಿಲ್ಲಿಸಿದ್ದ ಡ್ಯೂಕ್ ಬೈಕ್‍ನ ಜಾಡು ಹಿಡಿದು ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾದು ಕುಳಿತು ಆರೋಪಿಗಳನ್ನು ಬಂಧಿಸಲಾಗಿದೆ.

         ಆರೋಪಿಗಳು ವಿಚಾರಣೆಯಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಸರಗಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸಂಜಯ್‍ನಗರ 5, ಆರ್‍ಟಿ ನಗರ 3, ಸದಾಶಿವ ನಗರ, ಅನ್ನಪೂರ್ಣೇಶ್ವರಿ ನಗರ, ರಾಮಮೂರ್ತಿ ನಗರ, ಬಾಣಸವಾಡಿ ತಲಾ 2, ಯಲಹಂಕ ಉಪನಗರ, ಜ್ಞಾನಭಾರತಿ ಠಾಣೆಗಳ ತಲಾ 1 ಸೇರಿದಂತೆ 20 ಸರಗಳವು ಕೃತ್ಯಗಳು ಆರೋಪಿಗಳ ಬಂಧನದಿಂದ ಪತ್ತೆಯಾಗಿವೆ.

50 ಸರಗಳವು ಕೃತ್ಯ

         ಲಕ್ನೋ, ಚೆನ್ನೈ, ಮುಂಬೈಗಳಲ್ಲೂ ಸರಗಳವು ಮಾಡುತ್ತಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಅತೀ ಹೆಚ್ಚು ಸರಗಳವು ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಣೆಯಲ್ಲಿ ಬೆಂಗಳೂರಿನ ಮಹಿಳೆಯರು ಅತೀ ಹೆಚ್ಚು ತೂಕದ ಚಿನ್ನದ ಸರಗಳನ್ನು ಧರಿಸುತ್ತಿದ್ದು, ಒಂದು ಸರಗಳವು ಮಾಡಿದರೆ 2 ಲಕ್ಷದವರೆಗೆ ಹಣ ಸಿಗುತ್ತಿದ್ದರಿಂದ ನಗರಕ್ಕೆ ಆಗಾಗ್ಗೆ ಬರುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.

ತೂಕದ ಸರ

       ಲಕ್ನೋ, ಬಾಂಬೆ, ಚೆನ್ನೈಗಳಲ್ಲಿ ಮಹಿಳೆಯರು ಅತಿ ಕಡಿಮೆ ತೂಕದ ಸರ ಧರಿಸುತ್ತಿದ್ದು, ಅದರಿಂದ ಹೆಚ್ಚಿನ ಹಣ ದೊರೆಯುತ್ತಿರಲಿಲ್ಲ. ಹಾಗಾಗಿ, ಬೆಂಗಳೂರಿಗೆ ಕಳವಿಗೆ ಬರುತ್ತಿದ್ದ ಆರೋಪಿಗಳಲ್ಲಿ ಕರಾರ್‍ಹುಸೇನ್ ಕಳೆದ ವರ್ಷ 20 ಸರ ಪ್ರಕರಣಗಳಲ್ಲಿ ಭಾಗಿಯಾಗಿ ಕೊಡಿಗೇಹಳ್ಳಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಇವರಿಬ್ಬರ ಬಂಧನದಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಸರ ಅಪಹರಣ ಕೃತ್ಯಗಳು ಪತ್ತೆಯಾಗಿವೆ.

         ಬಂಧಿತ ಆರೋಪಿಗಳ ಗ್ಯಾಂಗ್ ಇಬ್ಬರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವು ಕಳ್ಳರು ಇರಾನಿ ಗ್ಯಾಂಗ್‍ನಲ್ಲಿದ್ದು, ಅವರ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link