ಕ.ಸಾ.ಪ ದಿಂದ ಚೈತ್ರ ಕವಿಗೋಷ್ಠಿ

ತುರುವೇಕೆರೆ:

      ಆಧುನಿಕತೆಯನ್ನು ಮೀರಿಸುತ್ತಿರುವ ಜೀವನಕ್ರಮದ ಪಲ್ಲಟ, ನೆಲಮೂಲ ಸಂಸ್ಕೃತಿಗಳಿಂದ ದೂರವಾಗುತ್ತಿರುವ ಆತಂಕ, ಪ್ರಭುತ್ವಗಳ ತಲ್ಲಣಗಳ ಮಧ್ಯೆ ಸಮಕಾಲೀನ ಕವಿತ್ವ ಒಂದು ಸವಾಲಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು
ಪಟ್ಟಣದ ಕನ್ನಡಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಚೈತ್ರ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಆಧುನಿಕ ಜೀವನ ಕ್ರಮವೇ ವಿಚ್ಚಿದ್ರತೆ ಮತ್ತು ಧಾವಂತದ ಹಾದಿಯಲ್ಲಿದೆ.

       ವಿಚ್ಚಿದ್ರತೆಯ ಫಲವಾದ ಗುಂಪುಗಾರಿಕೆ ಮತ್ತು ರಾಜಕಾರಣಗಳ ಮಧ್ಯೆ ಹೊಸ ತಲೆಮಾರು ತನ್ನ ಅಸ್ತಿತ್ವನ್ನು ಕಂಡುಕೊಳ್ಳಬೇಕಿದೆ. ಕಾವ್ಯ ಈ ಮಾರ್ಗಶೋಧನೆಯ ಅಭಿವ್ಯಕ್ತಿಯಾಗಬೇಕಿದೆ.ಪರಂಪರೆಯನ್ನು ಆವಾಹಿಸಿಕೊಳ್ಳದೆ, ಚಳುವಳಿಗಳ ಹಿನ್ನಲೆಯಿಲ್ಲದೆ, ಸಿದ್ಧ ಚೌಕಟ್ಟುಗಳನ್ನು ಮೀರಿ ಮನುಷ್ಯತ್ವ ಮತ್ತು ಸಮಾಜಕ್ಕೋಸ್ಕರ ಕಾವ್ಯ ರಚನೆ ಮಾಡಬೇಕಿದೆ.ಆಧುನಿಕೋತ್ತರ ಲಕ್ಷಣವಾದ ಬಹುತ್ವವೇ ಈ ಕಾವ್ಯಕ್ಕೆ ಮಾದರಿಯಾಗಬೇಕಿದೆ ಎಂದರು.

       ಆಶಯ ಭಾಷಣ ಮಾಡಿದ ಕವಿ, ನಾಟಕಕಾರ ಚಂದ್ರಶೇಖರ.ಚಿ.ತೋಟದ ಅಂತರಂಗವನ್ನು ಗಟ್ಟಿಗೊಳಿಸುವುದು ಪ್ರಾಮಾಣಿಕ ಬರಹಗಳು ಮಾತ್ರ. ಇಂತಹ ಪ್ರಾಮಾಣಿಕ ಅಭಿವ್ಯಕ್ತಿಯ ಅವಕಾಶ ಬೇರೆಲ್ಲ ಪ್ರಕಾರದ ಬರಹಗಾರರಿಗಿಂತ ಕವಿಗಳಿಗೆ ಹೆಚ್ಚಾಗಿರುತ್ತದೆ. ಕಲ್ಪನೆಗಳ ಜೊತೆಗೆ ವಾಸ್ತವ ಚಿತ್ರಗಳನ್ನೂ ಕವಿಗಳು ಕಟ್ಟಿಕೊಡಬೇಕು ಎಂದು ಸಲಹೆ ನೀಡಿದರು.

        ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಎಲ್.ವಿರೂಪಾಕ್ಷ ಮಾತನಾಡಿ’ ತಾಲ್ಲೂಕಿನ ಕವಿಗಳ ಸಾಧನೆ ತೃಪ್ತಿಕರವಾಗಿದೆ. ಈ ಕವಿತೆಗಳಲ್ಲಿ ಪುಟಿಯುವ ಜೀವನೋತ್ಸಾಹ, ದಟ್ಟವಾದ ಸಮಾಜಮುಖಿ ಅಭಿವ್ಯಕ್ತಿ ಕಾಣುತ್ತದೆ. ಕವಿಗಳು ತಮ್ಮ ಕವಿತೆಗಳನ್ನು ಪ್ರಕಟಿಸಿಕೊಳ್ಳಲು ನವಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದ ಅವರು ಮತದಾರರ ಜಾಗೃತಿ ಕುರಿತು ಕವನ ವಾಚಿಸಿದರು.

        ಗೋಷ್ಠಿಯಲ್ಲಿ ತಂ.ಪಾ.ಚಂದ್ರಕೀರ್ತಿ, ಅನಿಲ್ ಕುಮಾರ್ ಮಾಳೋದೇ, ಬಾಣಸಂದ್ರ ರವಿಕುಮಾರ್, ಕೃಷ್ಣಚೈತನ್ಯ, ರೂಪಶ್ರೀ, ಜ್ಯೋತಿ ಸುಂಕಲಾಪುರ,ರೇಣುಕಮ್ಮ ಕವಿತಾವಾಚನ ಮಾಡಿದರು. ರವಿಕುಮಾರ್, ರುಕ್ಮಿಣಮ್ಮ, ರೇಣುಕಮ್ಮ, ಸುಜಾತ, ಭಾರತಿ, ಮಮತಾ, ಪ್ರವೀಣ್ ಕುಮಾರಿಯವರನ್ನು ಸನ್ಮಾನಿಸಲಾಯಿತು. ಕಸಾಪ ಗೌ. ಅಧ್ಯಕ್ಷ ಪ್ರೊ. ಪುಟ್ಟರಂಗಪ್ಪ, ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜ್, ಪಂಚಾಯತ್ ಕಾವಲು ಸಮಿತಿ ಅಧ್ಯಕ್ಷ ವೆಂಕಟೇಶ್, ದಿನೇಶ್ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ನಂ.ರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಟೇಶ್ ಸ್ವಾಗತಿಸಿದರು, ವೆಂಕಟೇಶ್ ವಂದಿಸಿದರು. ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap