ಚಾಲನಾ ಸಿಬ್ಬಂದಿಗಳು ತಪ್ಪದೇ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು : ಗಜೇಂದ್ರ ಕುಮಾರ್.

ತುಮಕೂರು

      ಅಪಘಾತಗಳನ್ನು ನಿಯಂತ್ರಿಸಲು ಚಾಲನಾ ಸಿಬ್ಬಂದಿಗಳು ತಪ್ಪದೆ ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದರು.

      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಬುಧವಾರ ಸಂಜೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ “ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಹಾಗೂ ಜನ ಸಂಪರ್ಕ ಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ನಮ್ಮ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದರು.

      ಕ್ಯಾತಸಂದ್ರ-ಬಟವಾಡಿ ನಡುವೆ ಅಗ್ನಿ ಶಾಮಕ ಠಾಣೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ನಿಲುಗಡೆ ಕೋರಿ ಸಾರ್ವಜನಿಕರಿಂದ ಮನವಿ ಮೇರೆಗೆ ಉಚ್ಛ ನ್ಯಾಯಾಲಯವು ಅಗ್ನಿಶಾಮಕ ಠಾಣೆ ಮುಂಭಾಗದಲ್ಲಿ ಸ್ಕೈವಾಕ್ (ಮೇಲು ಸೇತುವೆ) ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶಿಸಿದೆ. ಸ್ಕೈವಾಕ್ ನಿರ್ಮಾಣಕ್ಕೆ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಬೇಕಾಗಿದ್ದು, 1 ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

       ನಗರ ಪೊಲೀಸ್ ಠಾಣೆ ಪಿ.ಎಸ್.ಐ. ವಿಜಯಲಕ್ಷ್ಮಿ ಮಾತನಾಡಿ ರಸ್ತೆ ಸುರಕ್ಷತೆ ಬಗ್ಗೆ ಎಲ್ಲರಲ್ಲಿ ಅರಿವಿರಬೇಕು. ಪ್ರತಿ ದಿನ ರಸ್ತೆ ಅಪಘಾತಗಳು ನಡೆಯುತ್ತಿರುತ್ತವೆ. ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 600 ರಿಂದ 700 ಮಂದಿ ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿರುವುದು ದುಃಖಕರ ಸಂಗತಿ. ಎಲ್ಲರ ಜೀವ ಅತ್ಯಮೂಲ್ಯವಾದುದು. ವಾಹನ ಚಾಲನೆ ಮಾಡುವಾಗ ನಮ್ಮ ಹಾಗೂ ಇತರರ ಸುರಕ್ಷತೆ ನೋಡುವುದು ಬಹಳ ಮುಖ್ಯ.

      ವಾಹನ ಚಾಲನೆ ಮಾಡುವಾಗ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಬಾರದು. ಚಾಲನೆ ಮಾಡುವಾಗ ಮೊಬೈಲ್ ಪೋನ್‍ಗಳನ್ನು ಬಳಸಬಾರದು. ವಿರುದ್ಧ ದಿಕ್ಕಿನಿಂದ ಬರುವ ವಾಹನ ಚಾಲಕರ/ಪಾದಚಾರಿಗಳ ಚಲನವಲನಗಳನ್ನು ಅರಿತು ಗಮನಿಸಿ ವಾಹನಗಳನ್ನು ಚಲಾಯಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.

       ವಿಭಾಗಿಯ ಸಂಚಾರಾಧಿಕಾರಿ ಫ್ರಕೃದ್ದೀನ್ ಮಾತನಾಡಿ, ರಸ್ತೆ ಅಪಘಾತ ತಡೆಗಟ್ಟುವುದರಲ್ಲಿ ಸಾರ್ವಜನಿಕರ ಪಾತ್ರ ಮಹತ್ವವಾದುದು. ಗ್ರಾಮೀಣ ರಸ್ತೆಗಳಲ್ಲಿ ಸಂಭವಿಸುವ ಬೈಕ್ ಸವಾರರ ಅಪಘಾತಗಳಿಂದ ಮರಣ ಪ್ರಮಾಣ ಹೆಚ್ಚಾಗುತ್ತಿವೆ. ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಲು ಹಾಗೂ ರಸ್ತೆ ಬದಿ ನಿಲ್ಲಿಸಿರುವ ಇತರೆ ವಾಹನಗಳ ಬಗ್ಗೆ ಎಚ್ಚರ ವಹಿಸಿ ಚಾಲನೆ ಮಾಡುವುದು ಸೂಕ್ತ ಎಂದು ಮಾಹಿತಿ ನೀಡಿದರು.

      ಗೋಕುಲ ಬಡವಾಣೆ ನಿವಾಸಿ ನಚಿಕೇತ್ ಮಾತನಾಡಿ ರಸ್ತೆ ಸುರಕ್ಷತೆ ಬಗ್ಗೆ ಮಕ್ಕಳಿಗೆ ಪಠ್ಯ ಪುಸ್ತಕಗಳಲ್ಲಿ ಮಾಹಿತಿ ತಿಳಿಸಬೇಕು ಹಾಗೂ ಬೈಕ್ ಸವಾರರು ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಪ್ರಯಾಣಿಸ ಬೇಕು ಎಂದು ಸಲಹೆ ನೀಡಿದರು. ನಗರದಿಂದ ಹಲವಾರು ನಿವಾಸಿಗಳು ತಮ್ಮ ಅಹವಾಲುಗಳನ್ನು ವಿಭಾಗ ನಿಯಾಂತ್ರಣಾಧಿಕಾರಿಗಳಿಗೆ ಸಲ್ಲಿಸಿದರು.

        ಕಾರ್ಯಕ್ರಮದಲ್ಲಿ ಸಹಾಯಕ ಸಂಚಾರಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು, ಕಾನೂನಾಧಿಕಾರಿ ಸವಿತಾ, ಸಾರ್ವಜನಿಕ ಪ್ರತಿನಿಧಿ(ವಕೀಲ) ರಮೇಶ್ ನಾಯ್ಕ್ ಹಾಗೂ ಸಾರ್ವಜನಿಕರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap