ಚಿತ್ರದುರ್ಗ:
ಮರಳು ಮಾಫಿಯಾದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಮಟ್ಟಾ ಹಾಕುವ ಬದಲು ಚಿಕ್ಕಪುಟ್ಟ ಮನೆಗಳನ್ನು ಕಟ್ಟಿಕೊಳ್ಳುವ ಬಡವರನ್ನು ಹಿಂಸಿಸುತ್ತಿರುವ ಪೊಲೀಸರು ಮತ್ತು ಕಂದಾಯ ಇಲಾಖೆಯವರು ಇನ್ನಾದರೂ ಎಚ್ಚರಿಕೆಯಿಂದ ನಡೆದುಕೊಳ್ಳದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕಟುವಾಗಿ ಎಚ್ಚರಿಸಿದರು.
ಹೊಸದುರ್ಗದಲ್ಲಿ ರಾಜಾರೋಷವಾಗಿ ಮರಳು ದಂಧೆ ನಡೆಯುತ್ತಿರುವುದನ್ನು ನಿಲ್ಲಿಸುವಂತೆ ಅನೇಕ ಬಾರಿ ಪ್ರತಿಭಟನೆ ಹೋರಾಟ ನಡೆಸಿ ಕೊನೆಗೆ ಮಾನಸಿಕವಾಗಿ ನೊಂದಿರುವ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೊಸದುರ್ಗ ಠಾಣೆ ಎದುರಿನಲ್ಲಿಯೇ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಮರಳು ಲೂಟಿಕೋರರಿಂದ ಪೊಲೀಸರು ಹಾಗೂ ಕಂದಾಯ ಇಲಾಖೆ ತಿಂಗಳ ಮಾಮೂಲು ಪಡೆಯುವುದು ಮೊದಲು ನಿಲ್ಲಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ. ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರತಿನಿತ್ಯವೂ ರಾತ್ರಿ ವೇಳೆ ಮರಳು ಹೋಗುವುದನ್ನು ಬಿಜೆಪಿ.ಕಾರ್ಯಕರ್ತರು ಹಿಡಿದುಕೊಟ್ಟರೂ ಕೇಸ್ ದಾಖಲಿಸಿದೆ ಪೊಲೀಸರು ಲಂಚ ಪಡೆದು ಕೈಬಿಡುತ್ತಿದ್ದಾರೆ. ಈ ಹಿಂದೆಯೇ ವಿಧಾನಸಭೆ ಅಧಿವೇಶನದಲ್ಲಿ ಮರಳು ದಂಧೆ ನಿಲ್ಲಬೇಕೆಂದು ಸರ್ಕಾರದ ಗಮನ ಸೆಳೆದು ಕೊನೆಕ್ಷಣದವರೆಗೂ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇನೆ. ಇನ್ನು ಮುಂದಾದರೂ ಗೂಂಡ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಶಾಸಕರು, ಸಚಿವರು, ಮುಖ್ಯಮಂತ್ರಿಯೇ ಎಲ್ಲವನ್ನು ನೋಡಲು ಆಗುವುದಿಲ್ಲ.
ಮತದಾರರೇ ನಮಗೆ ಮಾಲೀಕರಾಗಿರುವುದರಿಂದ ಸಾರ್ವಜನಿಕ ಸೇವೆಯಲ್ಲಿರುವ ನಾವುಗಳು ಜನರ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ದ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮರಳು ದಂಧೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಒಬ್ಬ ಶಾಸಕನಾಗಿ ನನ್ನ ತಾಕತ್ತು ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಸವಾಲು ಹಾಕಿದರು.ಎಲ್.ಬಿ.ರಾಜಶೇಖರ್, ಸಾಮಿಲ್‍ಶಿವಣ್ಣ, ಮೋಹನ್, ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
