ಕೆಪಿಎಲ್ ಹಗರಣ : ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು

   ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದ ಸಂಬಂಧ ಆಟಗಾರರು ತಂಡಗಳ ಮಾಲೀಕರು ಸೇರಿದಂತೆ 16 ಮಂದಿ ಆರೋಪಿಗಳ ವಿರುದ್ಧ ಕೇಂದ್ರ ಅಪರಾಧ ವಿಭಾಗ( ಸಿಸಿಬಿ) ಪೊಲೀಸರು ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

   ಕರ್ನಾಟಕ ಪ್ರೀಮಿಯರ್ ಲೀಗ್‌ನ ಎರಡು ತಂಡಗಳ ಮಾಲೀಕರು ಮತ್ತು ಆರು ಮಂದಿ ಆಟಗಾರರು ಸೇರಿದಂತೆ 16 ಮಂದಿಯ ವಿರುದ್ಧ ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ

   ಕ್ರಿಕೆಟ್ ಪ್ರೇಮಿಗಳ ಅಸಹನೆಗೆ ಕಾರಣವಾಗಿದ್ದ ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದವನ್ನು ಸಿಸಿಬಿ ತನಿಖೆ ಕೈಗೊಂಡಾಗ ಕ್ರಿಕೆಟ್ ಕ್ಷೇತ್ರದ ದೊಡ್ಡ ದೊಡ್ಡ ಪ್ರಭಾವಿ ವ್ಯಕ್ತಿಗಳು, ತಂಡಗಳ ಮಾಲೀಕರು, ಕರ್ನಾಟಕ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿರುವ ಸದಸ್ಯರ ಹೆಸರುಗಳು ತಳಕು ಹಾಕಿಕೊಳ್ಳಲಾರಂಭಿಸಿದವು.

    ತನಿಖೆ ಕೈಗೆತ್ತಿಕೊಂಡ ಸಿಸಿಬಿಯವರು ಮೂರು ಪ್ರಕರಣಗಳಲ್ಲಿ ಒಟ್ಟು 16 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಮುಸ್ತಾಕ್ ಆಲಿತಾರ, ಬಳ್ಳಾರಿ ಟಸ್ಕರ್ ತಂಡದ ಮಾಲೀಕ ಅರವಿಂದ ವೆಂಕಟೇಶರೆಡ್ಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯರು ಹಾಗೂ ಬೆಳಗಾವಿ ಪ್ಯಾಂಥರ್ಸ್‌ನ ತರಬೇತುದಾರರಾಗಿದ್ದ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ ತಂಡದ ನಾಯಕ ಸಿ.ಎಂ.ಗೌತಮ್, ವಿಕೆಟ್ ಕೀಪರ್ ಅಬ್ರಾಹರ್ ಕಾಜಿ ಮತ್ತು ಬುಕ್ಕಿ ಅಮಿತ್ ಮಾವಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ವಿಚಾರಣೆ ಮುಂದುವರಿಕೆ

    ಭಾರತೀನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೌಲಿಂಗ್ ಕೋಚ್ ವಿನುಪ್ರಸಾದ್, ಬ್ಯಾಟ್ಸ್‌ಮನ್ ಎಂ.ವಿಶ್ವನಾಥ್, ಆಟಗಾರರಾದ ನಿಶಾಂತ್ ಸಿಂಗ್ ಶೇಖಾವತ್, ಮೋಹಂತಿ, ಬುಕ್ಕಿಗಳಾದ ವೆಂಕಿ ಮತ್ತು ಕಿರಣ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ 4 ಜನ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುಕ್ಕಿಯಾಗಿದ್ದ ಜತಿನ್ ಸೇಥಿ, ಭವೇಶ್ ಬಫ್ನಾ, ಸನ್ಯಾಮ್ ಗುಲಾಟಿ ಅವರುಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.ಸಿಸಿಬಿ ಈ ಎಲ್ಲಾ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಸದ್ಯಕ್ಕೆ ಜಾಮೀನಿನ ಮೇಲೆ ಎಲ್ಲರೂ ಬಿಡುಗಡೆಗೊಂಡಿದ್ದಾರೆ. ಬಹು ಕೋಟಿ ರೂ.ಗಳ ಈ ಹಗರಣದ ತನಿಖೆಯಲ್ಲಿ ಪ್ರಾಥಮಿಕ ಹಂತದ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap