ಮಿಡಿಗೇಶಿ:
ಮಿಡಿಗೇಶಿ ವ್ಯಾಪ್ತಿಯ ಸ.ನಂಬರ್‍ನ ಸರ್ಕಾರಿ ಹಳ್ಳದಲ್ಲಿ ನೂತನವಾಗಿ ಚೆಕ್ ಡ್ಯಾಂ ಮಂಜೂರಾಗಿದ್ದು, ಇದನ್ನು ನಿರ್ಮಾಣ ಮಾಡಬಾರದೆಂದು ಅಲ್ಲಿನ ಕೆಲವರು ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸ.ನಂ.63/1 ರಲ್ಲಿರುವ ಸರ್ಕಾರಿ ಹಳ್ಳದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಿದೆ. ಸದರಿ ಚೆಕ್ ಡ್ಯಾಂ ನಿರ್ಮಿಸಿದ್ದೇ ಆದಲ್ಲಿ ಗಿರಿಯಮ್ಮನಪಾಳ್ಯ ಹಾಗೂ ಪಡಸಾಲಹಟ್ಟಿ ಗ್ರಾಮಸ್ಥರಿಗೆ ತೊಂದರೆ ಆಗುವ ಸಾಧ್ಯತೆಗಳಿದ್ದು, ಇದನ್ನು ತಡೆಹಿಡಿಯುವಂತೆ ಅಲ್ಲಿನ ಗ್ರಾಮಸ್ಥರು ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರಿ ಹಳ್ಳಕ್ಕೆ ಹೊಂದಿಕೊಂಡಂತೆ ಇತ್ತೀಚೆಗೆ ಕೆಲವರು ಜಮೀನು ಖರೀದಿಸಿ ಹಳ್ಳ ಒತ್ತುವರಿ ಮಾಡಿಕೊಂಡಿದ್ದಾರೆ. ಮಂಜೂರಾಗಿರುವ ಚೆಕ್ ಡ್ಯಾಂ ಸಹ ಅವರೇ ಮಾಡಲು ಮುಂದಾಗಿದ್ದು, ಇದರಿಂದ ಈ ಭಾಗದ ಜನರಿಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗಲಿದೆ. ಆದಕಾರಣ ಚೆಕ್ ಡ್ಯಾಂ ನಿರ್ಮಾಣ ಪ್ರಕ್ರಿಯೆ ತಡೆಹಿಡಿಯುವಂತೆ ಸುತ್ತಮುತ್ತಲ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದೇ ಸ.ನಂ.63/1 ಕ್ಕೆ ಸಂಬಂಧಿಸಿದಂತೆ 2017 ರಲ್ಲಿ ಗ್ರಾಮದ ಕೆಲವರಿಂದ ಬಂದ ದೂರಿನ ಮೇರೆಗೆ ಮಧುಗಿರಿ ತಾಲ್ಲೂಕು ಸರ್ವೇ ಇಲಾಖೆಯಿಂದ ಸರ್ವೇ ನಡೆದಿತ್ತು. ಹಳ್ಳ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ವರದಿ ನೀಡಲಾಗಿತ್ತು. 29 ಗುಂಟೆ ಹಳ್ಳ ಮುಚ್ಚಿ ಹೋಗಿದ್ದು , ಒತ್ತುವರಿಯಾಗಿರುತ್ತದೆ ಎಂದು ಕೆಲವರು ದೂರು ನೀಡಿದ್ದಕ್ಕೆ ಸಂಬಂಧಿಸಿದಂತೆ ಈ ವರದಿ ನೀಡಲಾಗಿತ್ತು. ಇದನ್ನು ಅನುಸರಿಸಿ 7.1.2017 ರಂದು ಮಧುಗಿರಿ ತಹಸೀಲ್ದಾರ್ ಅವರು ಹಳ್ಳ ಒತ್ತುವರಿ ಮಾಡಿಕೊಂಡಿರುವ ಮಹಾಲಕ್ಷ್ಮೀ ಎಂಬುವವರ ವಿರುದ್ಧ ನೋಟೀಸ್ ಜಾರಿಗೊಳಿಸಿ ತಕ್ಷಣ ಒತ್ತುವರಿ ದಾರಿ ತೆರವುಗೊಳೀಸಬೇಕು. ಇಲ್ಲವಾದರೆ ಕಾನೂನಿನ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದರು.