ಹುಳಿಯಾರು:
ಹುಳಿಯಾರು ಸಮೀಪದ ಗೋಪಾಲಪುರದ ಗ್ರಾಮದ ಬಳಿ ಚಿರತೆಯೊಂದು ಆಗಾಗ ಕುರಿಗಳ ಮೇಲೆ ದಾಳಿ ನಡೆಸುತ್ತಿರುವುದು ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಚಿರತೆಯನ್ನು ಸೆರೆ ಹಿಡಿಯುಲು ಅರಣ್ಯ ಇಲಾಖೆ ಮುಂದಾಗುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಗೋಪಾಲಪುರದ ಈಶ್ವರನಗುಡಿ ಬಳಿಯ ಕೆರ ಹತ್ತಿರದ ಗದ್ದೆ ಬಯಲಿನಲ್ಲಿ ನರುಗಲ್ಲು ಗೊಲ್ಲರಹಟ್ಟಿ, ಗೋಪಾಲಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಕುರಿಗಾರರು ತಮ್ಮ ನೂರಾರು ಕುರಿಗಳನ್ನು ಮೇಯಿಸಲು ಬರುತ್ತಾರೆ. ಸುಮಾರು ವರ್ಷಗಳಿಂದ ನೆಮ್ಮದಿಯಿಂದ ಕುರಿ ಮೇಯಿಸುತ್ತಿದ್ದ ಕುರಿಗಾರರಿಗೆ ಹದಿನೈದಿಪ್ಪತ್ತು ದಿನಗಳಿಂದ ಚಿರತೆಯೊಂದು ಆಗಾಗಾ ಪ್ರತ್ಯಕ್ಷವಾಗಿ ನೆಮ್ಮದಿ ಕೆಡಿಸಿದೆ.
ಈಗಾಗಲೇ ಹತ್ತನ್ನೆರಡು ಕುರಿಗಳನ್ನು ಚಿರತೆ ಕಡಿದಿದ್ದು ಕುರಿಗಾರರ ಹೆದರಿಸಿ ಓಡಿಸಿದ ಪರಿಣಾಮ ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ. ಪರಿಣಾಮ ಈ ಗದ್ದೆ ಬಯಲಿಗೆ ಕುರಿ ಮೇಯಿಸಲು ಬರಲು ಕುರಿಗಾರರು ಹೆದರುತ್ತಿದ್ದಾರೆ. ಚಿರತೆ ಇಲ್ಲೇ ಓಡಾಡಿ ಕೊಂಡಿರುವುದರಿಂದ ರಾತ್ರಿ ಸಮಯದಲ್ಲಿ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಗದ್ದೆ ಪಕ್ಕದಲ್ಲೇ ರಾಜ್ಯ ಹೆದ್ದಾರಿ ಹಾದು ಹೋಗಿದ್ದು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡುವ ಆತಂಕ ಸಹ ಕಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಚಿರತೆ ಪ್ರತ್ಯಕ್ಷ ವಾಗುತ್ತಿರುವುದು ಹಾಗೂ ಮೇಯಲು ಹೋದ ಕುರಿಗಳ ಮೇಲೆ ದಾಳಿ ಮಾಡುತ್ತಿರುವ ಕಾರಣ ಈ ಭಾಗದ ಜನರು ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ. ಯಾವ ಸಮಯದಲ್ಲಿ ಚಿರತೆ ಎಲ್ಲಿ ದಾಳಿ ಮಾಡುತ್ತದೋ ಎಂಬ ಭಯವೂ ಜನರನ್ನು ಕಾಡುತ್ತಿದೆ. ಹಾಗಾಗಿ ಅರಣ್ಯ ಇಲಾಖೆಯವರು ತಕ್ಷಣ ಬೋನ್ ಇಟ್ಟು ಚಿರತೆ ಹಿಡಿದು ಜನರು ನೆಮ್ಮದಿಯಿಂದ ಇರುವಂತೆ ಮಾಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ