ತುಮಕೂರು
ತುಮಕೂರು ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿಯಂಚಿನಲ್ಲಿ ಇಬ್ಬರನ್ನು ಹತ್ಯೆಗೈದು ಕಳೆದ ಮೂರು ತಿಂಗಳುಗಳಿಂದ ಭಾರಿ ಆತಂಕಕ್ಕೆ ಕಾರಣವಾಗಿದ್ದ ನರಹಂತಕ ಹೆಣ್ಣು ಚಿರತೆಯೊಂದು ಕೊನೆಗೂ ಬೋನಿಗೆ ಸಿಕ್ಕಿಬಿದ್ದಿದೆ. ಇದರೊಂದಿಗೆ ಈ ಭಾಗದ ಜನರು ತಕ್ಷಣಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
ಗಿಡದಪಾಳ್ಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಮಂಗಳವಾರ ರಾತ್ರಿ ಈ ಚಿರತೆ ಸಿಕ್ಕಿಬಿದ್ದಿದೆ. ಗಿಡದಪಾಳ್ಯವು ಕುಣಿಗಲ್ ತಾಲ್ಲೂಕಿಗೆ ಸೇರಿದೆಯಾದರೂ, ತುಮಕೂರು ತಾಲ್ಲೂಕಿನ ಗಡಿಯಂಚಿನಲ್ಲಿ (ಹೆಬ್ಬೂರು ಸಮೀಪ) ಇದೆ. ಈ ಗಡಿಯಂಚಿನಲ್ಲೇ ತುಮಕೂರು ತಾಲ್ಲೂಕಿಗೆ ಸೇರಿದ ಒಂದೆಡೆ ಹಾಗೂ ಕುಣಿಗಲ್ ತಾಲ್ಲೂಕಿಗೆ ಸೇರಿದ ಇನ್ನೊಂದೆಡೆ ಚಿರತೆ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರು.
ಬುಧವಾರ ಮುಂಜಾನೆ 5-30 ರಲ್ಲಿ ಸ್ಥಳೀಯ ಗ್ರಾಮಸ್ಥರು ಇದನ್ನು ಗಮನಿಸಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಚಿರತೆ ಹಿಡಿಯುವ ಕಾರ್ಯಾಚರಣೆಗಾಗಿ ರೂಪಿಸಿದ್ದ ತುಮಕೂರು ಮತ್ತು ಕುಣಿಗಲ್ ತಾಲ್ಲೂಕುಗಳ ಪ್ರತ್ಯೇಕ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸುದ್ದಿ ತಿಳಿದೊಡನೆ ಉಪಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ತುಮಕೂರು ತಾಲ್ಲೂಕು ವಲಯ ಅರಣ್ಯಾಧಿಕಾರಿ ಎಚ್.ಎಲ್. ನಟರಾಜ್, ಕುಣಿಗಲ್ ತಾಲ್ಲೂಕು ವಲಯ ಸಂರಕ್ಷಣಾಧಿಕಾರಿ ಮಂಜುನಾಥ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಬನ್ನೇರುಘಟ್ಟಕ್ಕೆ ರವಾನೆ
ಈ ಚಿರತೆಯನ್ನು ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿರುವ ಅರಣ್ಯ ಇಲಾಖೆಯ ಸಂರಕ್ಷಣಾ ಕೇಂದ್ರಕ್ಕೆ (ರೆಸ್ಕ್ಯೂ ಸೆಂಟರ್) ಅರಣ್ಯ ಇಲಾಖೆಯು ರವಾನಿಸಿತು.
2.5 ವರ್ಷದ ಹೆಣ್ಣು ಚಿರತೆ
ಚಿರತೆಯನ್ನು ಹಿಡಿಯುವ ಸಲುವಾಗಿ ಗಿಡದಪಾಳ್ಯದಲ್ಲಿ ಅರಣ್ಯ ಇಲಾಖೆಯು ಬೋನಿನಲ್ಲಿ ಕುರಿಯೊಂದನ್ನು ಆಹಾರವನ್ನಾಗಿ ಇರಿಸಿತ್ತು. ಆಹಾರ ಅರಸಿಕೊಂಡು ಬಂದ ಚಿರತೆ ಬೋನಿನಲ್ಲಿ ಕಾಲಿಟ್ಟೊಡನೆ ಬೋನಿನ ಬಾಗಿಲು ಸ್ವಯಂಚಾಲಿತವಾಗಿ ಮುಚ್ಚಲ್ಪಟ್ಟು ಸೆರೆ ಸಿಕ್ಕಿದೆ. ಈ ಬೋನಿನಲ್ಲಿ ಪ್ರತ್ಯೇಕ ಕಂಪಾರ್ಟ್‍ಮೆಂಟ್ ಇದ್ದುದರಿಂದ ಕುರಿ ಬದುಕುಳಿದಿದೆ. ಚಿರತೆ ಮಾತ್ರ ಸಿಕ್ಕಿಬಿದ್ದಿದೆ.
ಆತಂಕಕ್ಕೆ ತೆರೆ
ಈ ಚಿರತೆಯನ್ನು ಸುಮಾರು ಎರಡೂವರೆ ವರ್ಷ ವಯಸ್ಸಿನ ಹೆಣ್ಣು ಚಿರತೆಯೆಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದ ಚಿರತೆಯ ಚಹರೆ ಆಧರಿಸಿ, ಆ ನರಹಂತಕ ಚಿರತೆ ಇದೇ ಆಗಿದೆ ಎಂದು ವನ್ಯಜೀವಿ ತಜ್ಞರು ದೃಢಪಡಿಸಿ ದ್ದಾರೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ವಿವಿಧೆಡೆ ಕ್ಯಾಮರಾ ಅಳವಡಿಸಿದ್ದು, ಅದರಲ್ಲಿ ಎರಡು ಚಿರತೆಗಳು ಕಾಣಿಸಿವೆ.
ಒಂದು ಹೆಣ್ಣು ಮತ್ತು ಒಂದು ಗಂಡು ಚಿರತೆ ಇರುವುದು ಕಂಡುಬಂದಿದ್ದು, ಆ ಪೈಕಿ ಈಗ ನರಹಂತಕ ಹೆಣ್ಣುಚಿರತೆ ಸೆರೆಸಿಕ್ಕಿದೆ. ಇದರೊಂದಿಗೆ ಈ ಭಾಗದಲ್ಲಿ ಜನರಲ್ಲಿದ್ದ ಆತಂಕಕ್ಕೆ ಈಗ ತಕ್ಷಣಕ್ಕೆ ತೆರೆಬಿದ್ದಂತಾಗಿದೆ ಎಂದು ಹೇಳಲಾಗುತ್ತಿದೆ.
ಕ್ಯಾಮರಾದಲ್ಲಿ ಕಂಡುಬಂದಿರುವ ಗಂಡು ಚಿರತೆ ಎಲ್ಲಿದೆಯೆಂಬುದು ಇನ್ನೂ ಗೊತ್ತಾಗಿಲ್ಲ. ಅಲ್ಲದೆ ಇದಕ್ಕೆ ಹೊರತಾಗಿಯೂ ನೈಸರ್ಗಿಕವಾಗಿ ಚಿರತೆಗಳು ಇರಬಹುದೆಂಬುದನ್ನು ಸಹ ಅಲ್ಲಗಳೆಯಲಾಗುತ್ತಿಲ್ಲ. ಮಂಗಳವಾರವಷ್ಟೇ ತುಮಕೂರು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಚಿರತೆಯ ವಿಷಯ ಪ್ರತಿಧ್ವನಿಸಿತ್ತು. ಸದಸ್ಯರುಗಳು ಆಕ್ರೋಶ ಭರಿತರಾಗಿದ್ದರು.
ಚಿರತೆಯು ಬೋನಿನೊಳಕ್ಕೆ ಕಾಲಿಡುತ್ತಿಲ್ಲವೆಂಬುದೇ ದೊಡ್ಡ ತಲೆನೋವಾಗಿದೆಯೆಂಬ ಸಂಗತಿಯನ್ನು ಹಾಗೂ ಅಂತಿಮವಾಗಿ ಗುಂಡಿಕ್ಕುವ ಬಗ್ಗೆ ಇಲಾಖೆಯು ಸರ್ಕಾರದ ಅನುಮತಿ ಕೇಳಿದೆಯೆಂಬ ವಿಚಾರವನ್ನು ವಲಯ ಅರಣ್ಯಾಧಿಕಾರಿ ಎಚ್.ಎಲ್. ನಟರಾಜ್ ಸಭೆಯ ಗಮನಕ್ಕೆ ತಂದಿದ್ದರು. ನರಹಂತಕ ಚಿರತೆಗೆ ಗುಂಡಿಕ್ಕಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ತಾ.ಪಂ. ಸಭೆ ನಿರ್ಣಯಿಸಿತ್ತು. ಇವೆಲ್ಲ ಬೆಳವಣಿಗೆ ಆದ ಬೆನ್ನಲ್ಲೇ ಇತ್ತ ಚಿರತೆಯೊಂದು ಬೋನಿಗೆ ಸಿಕ್ಕಿಬಿದ್ದಿದೆ.