ಅಡಕೆ ತೋಟದ ನೀರಿಲ್ಲದ ಬಾವಿಗೆ ಬಿದ್ದ ಚಿರತೆ

ಗುಬ್ಬಿ:

    ಆಹಾರ ಹುಡುಕಿ ಗ್ರಾಮಕ್ಕೆ ಬಂದ ಚಿರತೆಯೊಂದು ಅಡಕೆ ತೋಟದ ನೀರಿಲ್ಲದ ಬಾವಿಗೆ ಬಿದ್ದ ಘಟನೆ ತಾಲ್ಲೂಕಿನ ಮಂಚೀಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಂಚೀಹಳ್ಳಿ ಗ್ರಾಮದ ಸುರೇಶ್ ಎಂಬ ರೈತರ ತೋಟದ ಬಾವಿಯಲ್ಲಿ ಬಿದ್ದ ಚಿರತೆ ಕಳೆದ ರಾತ್ರಿ ಆಹಾರ ಅರಸಿ ಬೇಟೆಗೆ ಮುಂದಾಗಿ ಆಯ ತಪ್ಪಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಬೆಳಿಗ್ಗೆ ಚಿರತೆಯ ದನಿಗೆ ಗಾಬರಿಗೊಂಡ ಗ್ರಾಮಸ್ಥರು ತಂಡೋಪತಂಡವಾಗಿ ಬಾವಿಯತ್ತ ಧಾವಿಸಿದರು. ಅರಣ್ಯ ಇಲಾಖೆಗೆ ತಿಳಿಸಿದರು.

    ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ. ಹಾಸನ ವಿಭಾಗದ ಅರವಳಿಕೆ ತಜ್ಞ ಡಾ.ಮರುಳೀಧರ್ ತಂಡ ಚಿರತೆ ಸಂರಕ್ಷಣೆಗೆ ಆಗಮಿಸಿ ಅರವಳಿಕೆ ಮದ್ದು ನೀಡಲು ತಯಾರು ನಡೆಸಿದರು. ನೂರಾರು ಜನ ಬಂದ ಹಿನ್ನಲೆಯಲ್ಲಿ ಗಾಬರಿಗೊಂಡ ಚಿರತೆ ಬಾವಿಯಲ್ಲಿ ಸುತ್ತಾಟ ನಡೆಸಿದೆ. ಗಾಯಗೊಂಡು ಆಕ್ರೋಶದಲ್ಲಿದ್ದ ಚಿರತೆಗೆ ಮದ್ದು ನೀಡಲು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿ ಯಶಸ್ವಿ ಕಂಡರು. ನಂತರ ಬೋನಿನ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರವಿ ತಿಳಿಸಿದರು.

    ಕಡಬ ಮತ್ತು ಸಿ.ಎಸ್.ಪುರ ಹೋಬಳಿಯಲ್ಲಿ ಸಾಕಷ್ಟು ಚಿರತೆಗಳು ಕಾಣಿಸಿಕೊಂಡಿದೆ. ಕಳೆದ 15 ದಿನದಲ್ಲಿ ಮೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದೆ. ತೋಟದ ಸಾಲಿನಲ್ಲಿ ಅನಾಯಾಸವಾಗಿ ಓಡಾಡುವ ಚಿರತೆಗಳು ತೋಟದಲ್ಲಿ ನಿರತರ ಕೃಷಿಕರ ಮೇಲೆರೆಗುವ ಸಾಧ್ಯತೆಗಳು ಹೆಚ್ಚಾಗಿವೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮವಹಿಸಿ ಚಿರತೆ ಹಾವಳಿ ತಪ್ಪಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈಗಾಗಲೇ ಗ್ರಾಮಗಳ ಸಮೀಪದಲ್ಲೇ ಹಗಲಿರುಳು ಓಡಾಡುತ್ತಿವೆ. ಹೆಚ್ಚಾಗಿ ಮುಂಜಾನೆ ಸಮಯದಲ್ಲೇ ಕಾಣಿಸಿಕೊಳ್ಳುತ್ತಿವೆ ಎಂದು ದೂರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link