ಕೊರೊನಾ ಭೀತಿ: ಬೇಡಿಕೆ ಕಳೆದುಕೊಂಡ ಚಿಕನ್

ದಾವಣಗೆರೆ:

     ಅಷ್ಟು ದಿನಗಳ ಕೋಳಿ ಮಾಂಸ ತಿನ್ನುವುದರಿಂದ ಹಕ್ಕಿ ಜ್ವರ, ಹಂದಿ ಜ್ವರ ಬರುತ್ತೆ ಎಂಬುದಾಗಿ ಆಧಾರವೇ ಇಲ್ಲದೆ ಹಬ್ಬಿಸುತ್ತಿದ್ದ ವದಂತಿಗಳ ಸಾಲಿಗೆ ಈಗ ಕೊರೊನಾ ವೈರಸ್ ಸಹ ಸೇರ್ಪಡೆಯಾಗಿದೆ. ಹೀಗಾಗಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿ ಅದರ ದರವೂ ಪತಾಳಕ್ಕೆ ಕುಸಿದಿದೆ.

    ಹೌದು… ಚೀನಾದಲ್ಲಿ ಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ಇಲ್ಲಿವ ವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಕೋಳಿ ಮಾಂಸ ಭಕ್ಷಣೆ ಮಾಡುವುದರಿಂದ ಕೊರೊನಾ ವೈರಸ್ ಬರಲಿದೆ ಎಂಬ ಸಂದೇಶ ಹಾಗೂ ಕೋಳಿಯೊಂದರ ದೇಹದಲ್ಲಿ ಹುಳು ಓಡಾಡುತ್ತಿರುವ ಮತ್ತು ಕೆಲ ಅಧಿಕಾರಿಗಳು ಕೋಳಿ ಮಾಂಸ ಸೀಜ್ ಮಾಡುತ್ತಿರುವ ಫೋಟೊಗಳನ್ನು ವಾಟ್ಸ್‍ಆ್ಯಪ್, ಫೆಸ್‍ಬುಕ್ ಸೇರಿದಂತೆ ಇತರೆ ಸಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಹರಿದು ಬಿಟ್ಟಿರುವ ಕಾರಣದಿಂದ ಕೋಳಿ ಮಾಂಸವನ್ನು ಕೇಳುವವರೆ ಇಲ್ಲವಾಗಿದೆ. ಹೀಗಾಗಿ ಕೋಳಿ ಮಾಂಸದ ದರವೂ ನೆಲ ಕಚ್ಚಿದೆ.

   ಆದ್ದರಿಂದ ಕೋಳಿ ಸಾಕಾಣಿಕೆಯನ್ನೇ ಕಸುಬು ಮಾಡಿಕೊಂಡಿರುವ ರೈತರು, ಆ ಕೋಳಿಗಳನ್ನು ತಂದು ಮಾರಾಟ ಮಾಡುವ ಕೋಳಿ ಮಾಂಸ ಮಾರಾಟಗಾರರು ಹಾಗೂ ರಸ್ತೆ ಬದಿಗಳಲ್ಲಿ ಚಿಕನ್ ಕಬಾಬ್, ಎಗ್ ರೈಸ್ ಮಾರಾಟ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುವ ಬೀದಿ ಬದಿಯ ವ್ಯಾಪಾರಸ್ಥರ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮವನ್ನು ಕೋಳಿ ಮಾಂಸ ಸೇವಿಸಿದರೆ ಕೊರೊನಾ ವೈರಸ್ ತಗುಲಲಿದೆ ಎಂಬ ಗಾಳಿ ಸುದ್ದಿ ಬೀರಿದ್ದು, ಕೋಳಿ ಮಾರಾಟ ಹಾಗೂ ಖರೀದಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಇದರಿಂದ ಕೋಳಿ ಸಾಕಾಣಿಕೆದಾರರು, ಕೋಳಿ ಮಾಂಸ ಮಾರಾಟಗಾರರು ಹಾಗೂ ಚಿಕನ್ ಕಬಾಬ್ ಮತ್ತು ಎಗ್ ರೈಸ್ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

   ಸಾರ್ವಜನಿಕರಲ್ಲಿ ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ನಮ್ಮ ದೇಹ ಸೇರಬಹುದು ಎಂಬ ಭೀತಿ ಇರುವುದರಿಂದ ಚಿಕನ್ ಸೆಂಟರ್‍ಗಳಲ್ಲಿ ಕೋಳಿ ಮಾಂಸ ಖರೀದಿಸುವವರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಹೀಗಾಗಿಯೇ ಕೋಳಿ ಸಾಕಾಣಿಕೆದಾರರಿಂದಲೂ ಮಾರಾಟಗಾರರು ಕೋಳಿ ಖರೀದಿಸುತ್ತಿಲ್ಲ. ಆದ್ದರಿಂದ ಮೊದಲು ಕೋಳಿ ಸಾಕಾಣಿಕೆದಾರರಿಂದ 50-60 ರೂ.ಗಳಿಗೆ ಕೋಳಿ ಖರೀದಿಸುತ್ತಿದ್ದ ಮಾರಾಟಗಾರರು ಈಗ 5 ರೂ.ಗೆ ಕೆಜಿ ಕೇಳುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್.

    ಇನ್ನೂ ಚಿಕನ್ ಸ್ಟಾಲ್‍ಗಳಲ್ಲಿ ಕಳೆದ ವಾರವಷ್ಟೆ ದುಗ್ಗಮ್ಮ ಜಾತ್ರೆಯಲ್ಲಿ 160ರಿಂದ 180 ರೂಪಾಯಿಗೆ ಕೆಜಿಯಂತೆ ಮಾರಾಟವಾಗಿದ್ದ ಕೋಳಿ ಮಾಂಸವನ್ನು ಈಗ ಕೇಳುವವರು ಇಲ್ಲವಾಗಿದ್ದಾರೆ. ಹೀಗಾಗಿ ಕೋಳಿ ಮಾಂಸಕ್ಕೆ ಶೇ.80 ರಷ್ಟು ಬೇಡಿಕೆ ಕಡಿಮೆಯಾಗಿದೆ. ಕೋಳಿ ಮಾಂಸದ ದರವೂ ಈಗ 75ರಿಂದ 80 ರೂಪಾಯಿಗೆ ಕುಸಿದಿದೆ ಎನ್ನುತ್ತಾರೆ ಚಿಕನ್ ಸ್ಟಾಲ್ ವ್ಯಾಪಾರಿ ಇಬ್ರಾಹಿಂ.

   ಕೋಳಿ ತಿಂದರೆ ಕಾಯಿಲೆ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ 15 ದಿನಗಳಿಂದ ವ್ಯಾಪಾರ ಇಲ್ಲ. ದಿನಕ್ಕೆ 5 ಕೆ.ಜಿ. ಕೋಳಿ ಮಾಂಸ ಖರೀದಿಯೂ ಆಗುತ್ತಿಲ್ಲ. ಅಷ್ಟೆಯಲ್ಲದೆ, ಹೋಟೆಲ್, ರಸ್ತೆ ಬದಿ ಅಂಗಡಿಗಳಲ್ಲೂ ಚಿಕನ್ ಖಾದ್ಯಗಳಿಗೆ ಬೇಡಿಕೆ ಇಲ್ಲವಾಗಿದೆ. ಚಿಕನ್ ಫ್ರೈ, ಚಿಕನ್ ಕಬಾಬ್, ಚಿಕನ್ ಮಸಾಲವನ್ನು ಯಾರೂ ಕೇಳುತ್ತಿಲ್ಲ.

   ಒಟ್ಟಿನಲ್ಲಿ ಕೊರೊನಾ ವೈರಸ್ ಹಾವಳಿಯಿಂದಾಗಿ ಕುಕ್ಕುಟೋದ್ಯಮ ಸಂಕಷ್ಟ ಎದುರಿಸುವಂತಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಕೋಳಿ ಮಾಂಸ ಭಕ್ಷಣೆ ಮಾಡುವುದರಿಂದ ಕೊರೊನಾ ವೈರಸ್ ಸೇರಿಂದಂತೆ ಇತರೆ ವೈರಾಣು ಜ್ವರ ಬರಲಿದೆಯೊ, ಇಲ್ಲವೊ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಮಾಂಸ ಮಾರಾಟಗಾರರು ಆಗ್ರಹಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link