ಹುಳಿಯಾರು:
ನಿತ್ಯ ತೈಲ ಬೆಲೆ ಏರಿಳಿಕೆ ಆಗುತ್ತಿರುವ ರೀತಿಯಲ್ಲೇ ಕೋಳಿ ಬೆಲೆಯೂ ಸಹ ಏರಿಳಿಕೆ ಆಗುತ್ತಿತ್ತು. ಅದರಲ್ಲೂ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದಷ್ಟು ಕೆಜಿಗೆ 200 ರೂ. ಬೆಲೆ ಆಗಿತ್ತು. ಇದರಿಂದ ಮಾಂಸ ಪ್ರಿಯರ ಜೇಬಿಗೆ ಹೊರೆ ಬಿದ್ದು ವ್ಯಾಪಾರ ಇಳಿಮುಖವಾಗಿತ್ತು.
ಲಾಕ್‍ಡೌನ್ ಆರಂಭದ ಸಂದರ್ಭ ಕೋಳಿ ಮಾಂಸದ ದರ ತೀವ್ರ ಕುಸಿತ ಕಂಡಿತ್ತು. ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿ ನಿರಾಕರಣೆ ಹಾಗೂ ಕೆಲವೆಡೆ ಹಕ್ಕಿ ಜ್ವರದ ಭೀತಿಯಿಂದಾಗಿ ಬೆಲೆ ಪಾತಾಳಕ್ಕೆ ಇಳಿದು ವರ್ತಕರು ತೀವ್ರ ನಷ್ಟ ಅನುಭವಿಸಿದ್ದರು.ಪರಿಣಾಮ ಕೋಳಿ ಮಾಂಸ ಕೊಳ್ಳುವವರೇ ಇಲ್ಲದಾದರು. ಇದರಿಂದ ಬೇಸತ್ತ ಕೋಳಿ ಫಾರಂ ಮಾಲೀಕರು ತಮ್ಮಲ್ಲಿನ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದರು. 100 ರೂ ಗೆ ನಾಲ್ಕೈದು ಜೀವಂತ ಕೋಳಿ ಕೊಟ್ಟು ಖಾಲಿ ಮಾಡಿಕೊಂಡರು.
ಫಾರಂಗಳು ಬಂದ್ ಆಗಿ ಪೂರೈಕೆ ಸ್ಥಗಿತಗೊಂಡ ಕಾರಣ ಸಹಜವಾಗಿಯೇ ಕೋಳಿ ಮಾಂಸಕ್ಕೆ ಮತ್ತೆ ಬೇಡಿಕೆ ಹೆಚ್ಚಿ ಬೆಲೆ ಗಗನಮುಖಿಯಾಯಿತು. ಉತ್ಪನ್ನ ಇಲ್ಲದ ಕಾರಣ ಪ್ರಮುಖ ಮಾಂಸ ಸರಬರಾಜು ಕಂಪನಿಗಳು ಕೋಳಿಗಳ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಇದರಿಂದಾಗಿ ಬೆಲೆ ಇನ್ನಷ್ಟು ಏರಿಕೆಯಾಗಿತ್ತು.
ಸದ್ಯ ಮಾರುಕಟ್ಟೆಯಲ್ಲಿ ಕೋಳಿ ಸರಬರಾಜು ನಿರಂತರವಾಗಿದೆ. ಅದರಲ್ಲೂ ಸಹಜ ಬೆಲೆಗೆ ಕೋಳಿ ಬೆಲೆ ಬಂದು ನಿಂತಿದೆ. ಪಾರಂ ಮತ್ತು ಬಾಯ್ಲರ್ ಕೋಳಿ ಎರಡೂ ಸಹ ಕೆಜಿಗೆ 120 ರೂ. ಆಗಿದೆ. ಹಾಗೆ ನೋಡಿದರೆ ಲಾಕ್ ಡೌನ್ ತೆರವಿನ ನಂತರ 200 ರೂ. ಸಮೀಪಿಸಿದ್ದ ಬಾಯ್ಲರ್ ಕೋಳಿ ಸಹಜ ದರಕ್ಕಿಂತ ಈಗ ಕಡಿಮೆ ಬೆಲೆಗೆ ಸಿಗುತ್ತಿದೆ.
ಕಳೆದೊಂದು ವಾರದಲ್ಲೇ ಪ್ರತಿ ಕೆ.ಜಿ.ಗೆ 50 ರೂ. ರಷ್ಟು ಇಳಿಕೆ ಆಗಿದೆ. ಸದ್ಯ ಆಷಾಢ ಮಾಸ ಇರುವ ಕಾರಣಕ್ಕೆ ಬೆಲೆಯೂ ಇದೇ ದರದಲ್ಲಿ ಸ್ಥಿರವಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರ ಹೊರೆ ತಗ್ಗಿದೆಯಲ್ಲದೆ ವ್ಯಾಪಾರ ಸಹ ಚೇತರಿಕೆ ಕಂಡಿದೆ ಎಂದು ಕೋಳಿ ವ್ಯಾಪಾರಿಗಳ ಸಂಘದ ಕೋಳಿಶ್ರೀನಿವಾಸ್ ಹೇಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ