ಹುಳಿಯಾರು
ಕೋಳಿ ಮೊಟ್ಟೆ ಸ್ಟಾಲ್ ತೆರವಿನ ವಿಚಾರವಾಗಿ ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಮೊಟ್ಟೆ ಅಂಗಡಿ ಮಾಲೀಕ ನಯಾಜ್ ಅವರು ನಡು ಬೀದಿಯಲ್ಲಿ ಕಿತ್ತಾಡಿದ ಘಟನೆ ಶನಿವಾರ ಬೆಳಗ್ಗೆ ಹುಳಿಯಾರಿನಲ್ಲಿ ನಡೆದಿದೆ.ತಹಸೀಲ್ದಾರ್ ತೇಜಸ್ವಿನಿ ಅವರ ಆದೇಶದನ್ವಯ ಮಾ.21 ಶನಿವಾರದಿಂದ ಹೋಟೆಲ್, ಜಂಕ್ ಫುಡ್ ಸ್ಟಾಲ್, ಕೋಳಿ ಅಂಗಡಿ ತೆರವು ಮಾಡುವಂತೆ ಫುಟ್ ಪಾತ್‍ನ ವ್ಯಾಪಾರಿಗಳಿಗೆ ಮಾ.20 ರ ಶುಕ್ರವಾರ ಪಪಂ ಮುಖ್ಯಾಧಿಕಾರಿಗಳು ನೋಟಿಸ್ ನೀಡಿದ್ದರು.
ಅದರಂತೆ ಹುಳಿಯಾರು ಬಸ್ ನಿಲ್ದಾಣದ ಫುಟ್‍ಪಾತ್‍ನ ಎಲ್ಲಾ ಅಂಗಡಿಗಳನ್ನು ಮುಚ್ಚಿದ್ದು, ಕೋಳಿ ಮೊಟ್ಟೆ ವ್ಯಾಪಾರಿ ನಯಾಜ್ ಮಾತ್ರ ಸ್ಟಾಲ್ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದನ್ನು ಗಮನಿಸಿದ ಪಪಂ ಮುಖ್ಯಾಧಿಕಾರಿಗಳು ಸ್ಟಾಲ್ ಬಳಿ ತೆರಳಿ ಅಂಗಡಿ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.
ಇದಕ್ಕೆ ಮೊಟ್ಟೆ ಅಂಗಡಿ ಮಾಲೀಕ ನಯಾಜ್ ಆಕ್ಷೇಪ ವ್ಯಕ್ತಪಡಿಸಿ ಶುಕ್ರವಾರ ನೀವು ಕೊಟ್ಟ ನೋಟೀಸಿನಲ್ಲಿ ಕೋಳಿ ಅಂಗಡಿ ಎಂದಿದೆಯೇ ವಿನಃ ಕೋಳಿ ಮೊಟ್ಟೆ ಅಂಗಡಿ ಎಂದಿಲ್ಲ. ಅಲ್ಲದೆ ಮೊಟ್ಟೆಯಿಂದ ಕೊರೊನಾ ಬರುವುದಿಲ್ಲ. ಅಲ್ಲದೆ ಇದರಲ್ಲಿ ಪೌಷ್ಟಿಕಾಂಶವಿದ್ದು ಕೊರೊನಾ ರಜೆ ನೀಡಿದ್ದರೂ ಸಹ ಮಕ್ಕಳ ಮನೆಗಳಿಗೆ ಮೊಟ್ಟೆ ತಲುಪಿಸುವಂತೆ ಅಂಗನವಾಡಿಗೆ ಸರ್ಕಾರವೆ ಆದೇಶಿಸಿದೆ. ಹಾಗಾಗಿ ನಾನು ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ಇದರಿಂದ ಕೋಪಗೊಂಡ ಪಪಂ ಮುಖ್ಯಾಧಿಕಾರಿ ಫುಟ್ ಪಾತ್‍ನ ಎಲ್ಲಾ ವ್ಯಾಪಾರವನ್ನೂ ಸ್ಥಗಿತ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ತಕ್ಷಣ ತೆರವು ಮಾಡಬೇಕು ಎಂದು ಏರಿದ ಧ್ವನಿಯಲ್ಲಿ ವಾಗ್ವಾದಕ್ಕೆ ಇಳಿದರು. ಇದಕ್ಕೆ ಪ್ರತಿಯಾಗಿ ಊರು ಕ್ಲೀನ್ ಮಾಡಿ ಎಂದರೆ ಮಾಡಲ್ಲ, ನೋಡಿ ಕೆರೆ ಅಂಗಳದಲ್ಲೆ ಎಷ್ಟೋಂದು ಕಸ ಬಿದ್ದಿದೆ. ಇದರಿಂದ ಕಾಯಿಲೆ ಬರುವುದನ್ನು ತಡೆಯಿರಿ ಎಂದು ನಯಾಜ್ ತಿರುಗಿ ಬಿದ್ದರು.
ಇದರಿಂದ ಆಕ್ರೋಶಗೊಂಡ ಮುಖ್ಯಾಧಿಕಾರಿ ಮೊಟ್ಟೆ ಕ್ರೇಟ್‍ಗಳನ್ನು ಕಿತ್ತೆಸೆಯಲು ಮುಂದಾದರು. ಆಗ ಅಲ್ಲೇ ಇದ್ದ ಸಾರ್ವಜನಿಕರು ಮುಖ್ಯಾಧಿಕಾರಿಗಳನ್ನು ತಡೆದು ಮೊಟ್ಟೆ ನಯಾಜ್ ಅವರಿಗೆ ಮಾ.31 ರ ವರವಿಗೆ ಸಹಕರಿಸಿ. ಇಡೀ ದೇಶವೇ ಕೊರೋನಾದಿಂದ ತತ್ತರಿಸಿದೆ. ಸರ್ಕಾರದ ಆದೇಶಕ್ಕೆ ತಲೆಬಾಗಿ ಎಂದು ಕಿವಿ ಮಾತು ಹೇಳಿ ಮೊಟ್ಟೆ ಅಂಗಡಿ ತೆರವು ಮಾಡಿಸಿ ಇಬ್ಬರ ಜಗಳಕ್ಕೆ ಇತಿಶ್ರೀ ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ