ತುಮಕೂರು:
ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ದಿನೇ ದಿನೆ ಹೆಚ್ಚಾಗತ್ತಲೇ ಇದೆ. ಅಂಥದ್ದೇ ಮತ್ತೊಂದು ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, 5 ವರ್ಷದ ಪುಟ್ಟ ಬಾಲಕ ಚಿರತೆಗೆ ಬಲಿಯಾಗಿದ್ದಾನೆ.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಗುರುವಾರ ಸಮರ್ಥ್ ಗೌಡ (4) ಚಿರತೆ ದಾಳಿಗೆ ಬಲಿ ಆಗಿದ್ದಾನೆ.
ತನ್ನ ಅಜ್ಜಿಯ ಜತೆ ಹಸುವನ್ನು ಮೇಯಿಸಲು ಗ್ರಾಮದ ಹೊರವಲಯದ ತೋಪಿಗೆ ಹೋಗಿದ್ದ. ಸಂಜೆ ಮನೆಗೆ ಮರಳುವಾಗ ಹಸುಗಳನ್ನು ಹಿಡಿದುಕೊಂಡು ಅಜ್ಜಿ ಮುಂದೆ ಸಾಗಿದ್ದಾರೆ. ಸಮರ್ಥ್ ಆಟ ಆಡುತ್ತ ನಿಧಾನವಾಗಿ ಬರುತ್ತಿದ್ದ ವೇಳೆ ಚಿರತೆ ಹಿಂಬದಿಯಿಂದ ದಾಳಿ ನಡೆಸಿದೆ. ನೂರು ಮೀಟರ್ ದೂರ ಬಾಲಕನನ್ನು ಎಳೆದುಕೊಂಡು ಹೋಗಿದೆ.ಇದನ್ನು ನೋಡಿದ ಆತನ ಅಜ್ಜಿ ಮತ್ತು ದಾರಿಹೋಕರು ಕಿರುಚಾಡಿದ್ದಾರೆ. ಚಿರತೆ ಅಲ್ಲಿಂದ ಮರೆಯಾಗಿದ್ದು ಬಾಲಕ ಮೃತಪಟ್ಟಿದ್ದಾನೆ.
ದುರ್ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಪದೇ ಪದೇ ಚಿರತೆ ದಾಳಿ ಪ್ರಕರಣಗಳು ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು.