ದಾವಣಗೆರೆ
ಪ್ರಸ್ತುತ ಮಕ್ಕಳ ಸಾಹಿತ್ಯವು ಹೊಳಪು ಕಳೆದುಕೊಂಡಿರುವ ಕಾರಣ ಹಿಂದಿನ ಗಾಂಭೀರ್ಯತೆ ಹಾಗೂ ಮಾಧುರ್ಯತೆ ಉಳಿದುಕೊಂಡಿಲ್ಲ ಎಂದು ಧಾರವಾಡದ ಗುಬ್ಬಚ್ಚಿಗೂಡು ಮಕ್ಕಳ ಮಾಸಪತ್ರಿಕೆ ಸಂಪಾದಕ ಶಂಕರ ಹಲಗತ್ತಿ ಕಳವಳ ವ್ಯಕ್ತಪಡಿಸಿದರು.
ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಶನಿವಾರ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಹಿರಿಯ ಸಾಹಿತಿಗಳಾದ ಪಂಜೆ ಮಂಗೇಶರಾಯರು, ದ.ರಾ.ಬೇಂದ್ರೆ, ಕುವೆಂಪುರಂತಹವರು ಮಕ್ಕಳ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡುವ ಮೂಲಕ ಎಳೆಯ ಮನಸ್ಸುಗಳನ್ನು ಅರಳಿಸುವ ಕೆಲಸ ಮಾಡಿದ್ದರು. ಆದರೆ, ಪ್ರಸ್ತುತ ಮಕ್ಕಳ ಸಾಹಿತ್ಯವು ಹೊಳಪು ಕಳೆದುಕೊಂಡಿದೆ. ಆದ್ದರಿಂದ ಮಕ್ಕಳ ಸಾಹಿತ್ಯವನ್ನು ಮುಂಚೂಣಿಗೆ ತರುವ ಗಂಭೀರ ಪ್ರಯತ್ನ ಮಾಡುವ ಮೂಲಕ ಅದರ ಗತವೈಭವಕ್ಕೆ ಮತ್ತೆ ಮರುಕಳುಸುವಂತೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಆಧುನಿಕತೆಯ ಭರಾಟೆಯಿಂದ ಪೋಷಕರು ಮಾಕ್ರ್ಸ್(ಅಂಕ)ಗಳ ಹಿಂದೆ ಬಿದ್ದಿರುವ ಮಾಕ್ರ್ಸ್‍ವಾದಿಗಳಾಗಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ಮಕ್ಕಳು ಒಳ್ಳೆಯ ಅಂಕ ಗಳಿಸುವುದೇ ಪ್ರತಿಯೊಬ್ಬರ ಆದ್ಯತೆಯಾಗಿದೆ. ಹೊರತು, ಯಾರೂ ಸಹ ಮಕ್ಕಳ ಮನಸ್ಸು ಕಟ್ಟುವ ಕೆಲಸಕ್ಕೆ ಮಾಡುತ್ತಿಲ್ಲ ಎಂದು ವಿಷಾಧಿಸಿದರು.
ಪೋಷಕರು ಮಕ್ಕಳ ಮುಗ್ಧ ಮನಸ್ಸಿನ ಆಲೋಚನೆ, ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನ ಹೇಗೆ ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ ಅವರು, ಮಕ್ಕಳು ತನ್ನ ಮನಸ್ಸಿಗೆ ತೋಚಿದಂತೆ ಮುಕ್ತವಾಗಿ ಆಟವಾಡಲು ಮನೆಯ ಮುಂದೆ ಅಂಗಳವೂ ಇಲ್ಲವಾಗಿದೆ. ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವ ಪೋಷಕರು, ಮಕ್ಕಳ ಕನಸು, ಬಾಲ್ಯವನ್ನು ಕಸಿದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಎಳೆಯ ವಯಸ್ಸಿನ ಮಕ್ಕಳ ಮನಸ್ಸುಗಳು ಸುಂದರ ಹಾಗೂ ಆರೋಗ್ಯಪೂರ್ಣವಾಗಿ ಅರಳಲು ಮಕ್ಕಳ ಸಾಹಿತ್ಯ ಅತ್ಯವಶ್ಯವಾಗಿದೆ. ಹೀಗಾಗಿ ಪೋಷಕರು ಮಕ್ಕಳಿಗೆ ತಿಂಡಿ-ತಿನಿಸು ಕೊಡಿಸುವಷ್ಟೇ ಕಾಳಜಿಯಿಂದ ಪುಸ್ತಕಗಳನ್ನು ಕೊಡಿಸಿ, ಓದಲು ಉತ್ತೇಜನ ನೀಡುವ ಮೂಲಕ ಸಾಹಿತ್ಯಿಕವಾಗಿ ಮಕ್ಕಳನ್ನು ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ ಮಾತನಾಡಿ, ಸಾಹಿತ್ಯ ಇಲ್ಲದಿದ್ದರೆ, ಮನುಷ್ಯನ ಬದುಕೇ ನಶ್ವರವಾಗಲಿದೆ. ಹೀಗಾಗಿ ಮಕ್ಕಳನ್ನು ಗಣಿತ, ವಿಜ್ಞಾನ ವಿಷಯಗಳಿಗೆ ಮಾತ್ರ ಸೀಮಿತ ಮಾಡದೇ, ಶ್ರೇಷ್ಠ ಸಾಹಿತಿಗಳ ಕೃತಿ ಅಧ್ಯಯನ ಮಾಡುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.ಸಾಹಿತ್ಯದ ಒಡನಾಟವಿದ್ದರೆ ಪತ್ರಿಕೋದ್ಯಮ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಬಹುದು. ಮಕ್ಕಳ ಮನಸ್ಸನ್ನು ಕಟ್ಟುವ, ಕನಸುಗಳನ್ನು ವಿಸ್ತರಿಸುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದರು.
ಸೋಮೇಶ್ವರ ವಿದ್ಯಾಲಯದಲ್ಲಿ ಮಂಜೂಷ ಎಂಬ ಕೈಬರಹದ ಪತ್ರಿಕೆ ಹೊರ ತರುವ ಮೂಲಕ ಮಕ್ಕಳ ಸೃಜನಶೀಲತೆಗೆ ಒತ್ತು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲೂ ಕೈಬರಹದ ಪತ್ರಿಕೆ ಹೊರತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಾಲೆಯ ಅಧ್ಯಕ್ಷ ಹೆಚ್.ಆರ್.ಅಶೋಕ ರೆಡ್ಡಿ, ಕಾರ್ಯದರ್ಶಿ ಕೆ.ಎಂ.ಸುರೇಶ, ಜಿಲ್ಲಾ ವರದಿಗಾರರ ಕೂಟದ ಕಾರ್ಯದರ್ಶಿ ನಾಗರಾಜ ಬಡದಾಳ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಂತರ ಹಿರಿಯ ಪತ್ರಕರ್ತ ಜಿ.ಎಂ.ಆರ್.ಆರಾಧ್ಯ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲಿ ಬೇಂದ್ರೆ ಬದುಕು-ಬರಹ ಕುರಿತು ಧಾರವಾಡದ ಸಾಹಿತಿ ಸುರೇಶ ಕುಲಕರ್ಣಿ ವಿಷಯ ಮಂಡಿಸಿದರು. ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವ್ಯಂಗ್ಯ ಚಿತ್ರಕಾರ ಹೆಚ್.ಬಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ 2ನೇ ಗೋಷ್ಠಿಯಲ್ಲಿ ತುಮಕೂರಿನ ಸಾಹಿತಿ ಡಾ.ಜಿ.ವಿ.ಆನಂದಮೂರ್ತಿಯವರು ಕುವೆಂಪು ಬದುಕು-ಬರಹ ಕುರಿತು ವಿಷಯ ಮಂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ