ಕಡ್ಲೆಪುರಿ ತಿಂದು ಗ್ರಹಣ ವೀಕ್ಷಣೆ: ವಿಸ್ಮಯದ ಕೌತುಕ ವೀಕ್ಷಿಸಿದ ಮಕ್ಕಳು

ತುಮಕೂರು:

     ಅಪರೂಪದ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸಿ ಅನೇಕರು ತಮ್ಮ ಕಣ್ತುಂಬಿಕೊಂಡರು. ತುಮಕೂರಿನಲ್ಲಿ ಬೆಳಗ್ಗೆ 8.06 ಕ್ಕೆ ಗ್ರಹಣ ಗೋಚರಿಸಿ 11.05 ಗಂಟೆಗೆ ಮುಕ್ತಾಯವಾಯಿತು. 9.35ರ ವೇಳೆಗೆ ಶೇ.89ರಷ್ಟು ಗ್ರಹಣ ಗೋಚರಿಸಿತು. ಆ ಸಂದರ್ಭದಲ್ಲಿ ಇಡೀ ವಾತಾವರಣ ಸಂಜೆಯ ಮುಸುಕಿನ ವಾತಾವರಣದಂತೆ ಕಂಡುಬಂದು ಸೂರ್ಯನ ಪ್ರಖರತೆ ಕಡಿಮೆಯಾಗಿದ್ದು ವಿಶೇಷ.

     ಈ ಗ್ರಹಣ ವೀಕ್ಷಣೆಗೆ ಕಾತುರರಾಗಿದ್ದ ಅನೇಕರು ತಮ್ಮ ತಮ್ಮ ಮನೆಗಳ ಬಳಿಯೇ ಸೌರದರ್ಶಕಗಳನ್ನು ಉಪಯೋಗಿಸಿ ಸೂರ್ಯಗ್ರಹಣ ವೀಕ್ಷಿಸಿದರು. ಇನ್ನು ಕೆಲವರು ತುಮಕೂರು ವಿಜ್ಞಾನ ಕೇಂದ್ರ ಮತ್ತಿತರ ಸಂಘಟನೆಗಳಿಂದ ಆಯೋಜಿಸಿದ್ದ ಸ್ಥಳಗಳಿಗೆ ತೆರಳಿ ಅಲ್ಲಿನ ದರ್ಶಕಗಳನ್ನು ಬಳಸಿ ಸೂರ್ಯಗ್ರಹಣ ವೀಕ್ಷಿಸಿದರು.

    ಸೂರ್ಯ ಗ್ರಹಣ ವೀಕ್ಷಣೆಗಾಗಿಯೇ ಗಾರ್ಡನ್ ರಸ್ತೆಯಲ್ಲಿರುವ ತುಮಕೂರು ವಿಜ್ಞಾನ ಕೇಂದ್ರದ ಆವರಣದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಎರಡು ದೂರದರ್ಶಕ ಯಂತ್ರಗಳು, ತುಮಕೂರು ವಿಜ್ಞಾನ ಕೇಂದ್ರದಿಂದಲೇ ತಯಾರಿಸಿರುವ ಎರಡು ಕೀ ಹೋಲ್ ದೂರದರ್ಶಕಗಳು ಹಾಗೂ ಸೋಲಾರ್ ಫಿಲ್ಟರ್‍ಗಳ ಮೂಲಕ ಗ್ರಹಣ ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೂ ನೂರಾರು ಮಂದಿ ಇಲ್ಲಿಗೆ ಆಗಮಿಸಿ ಗ್ರಹಣ ವೀಕ್ಷಿಸಿದರು. ಅಲ್ಲಿಗೆ ಬಂದವರಿಗೆಲ್ಲಾ ಕಡಲೆಪುರಿ ಹಂಚಲಾಯಿತು.

      ವಿಜ್ಞಾನ ಕೇಂದ್ರದಿಂದ ಸ್ಥಳದಲ್ಲಿಯೇ ಹಾಗೂ ಕಳೆದ ಮೂರ್ನಾಲ್ಕು ದಿನಗಳಿಂದ ಸೋಲಾರ್ ಫಿಲ್ಟರ್ ಕನ್ನಡಕಗಳನ್ನು ವಿತರಿಸಲಾಗಿತ್ತು. ಇವುಗಳ ಮೂಲಕ ಅನೇಕರು ಗ್ರಹಣ ವೀಕ್ಷಿಸಿದರು. ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕರ್ನಾಟಕ ರಾಜ್ಯ ರೆಡ್‍ಕ್ರಾಸ್ ಸಭಾಪತಿ ಎಸ್.ನಾಗಣ್ಣ, ಕಾರ್ಪೋರೇಟರ್ ಮಲ್ಲಿಕಾರ್ಜುನ್, ರೂಪಶ್ರೀ ಮಹೇಶ್ ಸೇರಿದಂತೆ ನಗರದ ಇತರೆ ಪ್ರಮುಖರು ವಿಜ್ಞಾನ ಕೇಂದ್ರದ ಆವರಣದಲ್ಲಿ ಗ್ರಹಣ ವೀಕ್ಷಿಸಿದರು. ವಿಜ್ಞಾನ ಕೇಂದ್ರದ ಸಿ.ವಿಶ್ವನಾಥ್, ಬಿ.ಮರುಳಯ್ಯ, ರವಿಶಂಕರ್, ಪಿ.ಪ್ರಸಾದ್, ನಿತ್ಯಾನಂದ, ಸಿ.ಯತಿರಾಜು, ಶಿವಲಿಂಗಯ್ಯ, ಅಜ್ಜಪ್ಪ, ನಾಗರಾಜರಾವ್ ಸೇರಿದಂತೆ ಪದಾಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದರು.

     ನಗರದ ಎಸ್.ಐ.ಟಿ. ಬಡಾವಣೆಯ ಶ್ರೀ ವಾಸವಿ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿತಿಯಿಂದ ಕಂಕಣ ಸೂರ್ಯಗ್ರಹಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ಜಿ.ರಸ್ತೆಯ ಬಾಲ ಭವನದಲ್ಲಿ ಮಹಿಳಾ ಇಲಾಖೆ ಸಹಯೋಗದೊಂದಿಗೆ ಮಕ್ಕಳಿಗೆ ಗ್ರಹಣ ವೀಕ್ಷಿಸುವ ಅವಕಾಶ ಮಾಡಲಾಗಿತ್ತು. ಇದೇ ರೀತಿ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಗ್ರಹಣದ ಬಗ್ಗೆ ಅರಿವು ಮೂಡಿಸಲಾಯಿತು. ಸೋಲಾರ್ ಫಿಲ್ಟರ್ ಮೂಲಕ ಮಕ್ಕಳು ಸೂರ್ಯಗ್ರಹಣ ವೀಕ್ಷಿಸಿ ಅಚ್ಚರಿಯೊಂದಿಗೆ ಸಂಭ್ರಮಪಟ್ಟರು.

ದೇವಾಲಯಗಳು ಬಂದ್

       ಗ್ರಹಣದ ಹಿನ್ನೆಲೆಯಲ್ಲಿ ತುಮಕೂರು ನಗರದ ದೇವಾಲಯಗಳು ಬಂದ್ ಆಗಿದ್ದವು. ಸೂರ್ಯಗ್ರಹಣದ ಸಮಯದಲ್ಲಿ ಮುಚ್ಚಲಾಗಿದ್ದ ದೇವಾಲಯಗಳ ಬಾಗಿಲು ನಂತರ ತೆರಯಲ್ಪಟ್ಟವು. ಕೆಲವು ಕಡೆ ಹೋಮ ಹವನ ಹಾಗೂ ವಿಶೇಷ ಪೂಜೆಗಳು ನಡೆದವು. ಸೂರ್ಯಗ್ರಹಣದ ಮೋಕ್ಷದ ಬಳಿಕ ಶುದ್ಧೀಕಾರ್ಯ, ಪೂಜೆ ಪುನಸ್ಕಾರಗಳು ಆರಂಭವಾದವು. 

     ಹೋಟೆಲ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಗ್ರಾಹಕರ ಸಂಖ್ಯೆ ಸ್ವಲ್ಪ ವಿರಳವಾಗಿತ್ತು. ಗ್ರಹಣದ ಸಮಯದಲ್ಲಿ ರಸ್ತೆಗಳಲ್ಲಿ ಎಂದಿನಂತೆ ಸಂಚಾರ ಒತ್ತಡ ಕಂಡುಬರಲಿಲ್ಲ. ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದ್ದು ಗೋಚರಿಸಿತು. ಇನ್ನು ಕೆಲವರು ತಮ್ಮ ಮನೆಗಳಲ್ಲಿಯೇ ಕುಳಿತು ದೂರದರ್ಶನದ ಮೂಲಕ ಗ್ರಹಣದ ಬಗೆಗಿನ ಚರ್ಚೆಗಳನ್ನು ವೀಕ್ಷಿಸಿದರು. ಗ್ರಹಣದ ಬಗ್ಗೆ ಈ ಹಿಂದೆ ಇದ್ದ ಮೌಢ್ಯತೆಗಳ ಬಗ್ಗೆ ಜಾಗೃತಿ ಮೂಡಿದ್ದರೂ ಸಹ ಕೆಲವರು ತಮ್ಮ ಮನೆಗಳಿಂದ ಹೊರಬರಲಿಲ್ಲ. ಗ್ರಹಣದ ಸಮಯದಲ್ಲಿ ನೀರು, ಉಪಹಾರ ಸೇವಿಸಲಿಲ್ಲ. ಗ್ರಹಣ ಮೋಕ್ಷದ ನಂತರವೇ ಉಪಹಾರ ಸೇವಿಸಿದರು. ಆದರೆ ಇತ್ತೀಚೆಗೆ ಗ್ರಹಣದ ವೈಜ್ಞಾನಿಕತೆಯ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡುತ್ತಿರುವುದರಿಂದ ಹಿಂದೆ ಇದ್ದಂತಹ ಅತಂಕ, ಭಯ ಇದಾವುದೂ ಕಂಡುಬರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link