ಪಠ್ಯದ ಜೊತೆ ಕ್ರೀಡೆಯಲ್ಲೂ ಆಸಕ್ತಿ ತೋರಬೇಕು

ಚಿತ್ರದುರ್ಗ:

        ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಠ್ಯಕ್ಕಷ್ಟೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿ ಕ್ರೀಡೆಯಲ್ಲಿ ಗೆಲ್ಲಲು ಪ್ರಯತ್ನಿಸಿದರೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದು ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಕ್ರೀಡಾಪಟುಗಳಿಗೆ ಕರೆ ನೀಡಿದರು.

        ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಜುಡೋ ಸ್ಪರ್ಧೆಯನ್ನು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.

        ನಮ್ಮ ರಾಜ್ಯ ಹಾಗೂ ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆಯಿದೆ. ಕ್ರೀಡೆಯಲ್ಲಿ ಭಾಗವಹಿಸಲು ಅನುದಾನದ ಕೊರತೆಯಿರಬಾರದು. ಆರ್ಥಿಕ ಮುಗ್ಗಟ್ಟು ಎದುರಾದರೆ ಕ್ರೀಡೆಯಲ್ಲಿ ಆಸಕ್ತಿ ಕುಗ್ಗುತ್ತದೆ. ಅದಕ್ಕಾಗಿ ಗ್ರಾ.ಪಂ.ಯಿಂದು ಹಿಡಿದು ಸಂಸದರ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕ್ರೀಡೆಯಲ್ಲಿ ಭಾಗವಹಿಸಿ ಎಂದು ಜುಡೋ ಕ್ರೀಡಾಳುಗಳಿಗೆ ತಿಳಿಸಿದರು.

        ಗ್ರಾ.ಪಂ., ತಾ.ಪಂ., ಜಿ.ಪಂ., ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಅಂಗವಿಕಲರಿಗೆ ಶೇ.5 ರಷ್ಟು ಹಣವನ್ನು ಮೀಸಲಿಡಲಾಗಿದೆ. ಅದೇ ರೀತಿ ಶೆ.2 ರಷ್ಟು ಹಣವನ್ನು ಕ್ರೀಡೆಗಳಿಗೆ ಸರಿಯಾಗಿ ಬಳಸಬೇಕಾಗಿದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್, ವಾಟ್ಸ್‍ಪ್, ಟಿ.ವಿ.ಯಲ್ಲಿ ಮಗ್ನರಾಗಿರುವುದರಿಂದ ಕ್ರೀಡೆಗಳು ದಿನದಿಂದ ದಿನೆ ನಶಿಸಿ ಹೋಗುತ್ತಿದೆ. ಜುಡೋದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಲ್ಲದೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬಹುದು ಎಂದು ಕ್ರೀಡೆಯಿಂದಾಗುವ ಪ್ರಯೋಜವನ್ನು ಹೇಳಿದರು.
ಆರೋಗ್ಯವಂತ ಯುವಕ-ಯುವತಿಯರೆ ದೇಶದ ಆಸ್ತಿ.

        ಅದಕ್ಕಾಗಿ ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಲ್ಳಿ. ಹೊರ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಶಿಕ್ಷಕರುಗಳ ಜವಾಬ್ದಾರಿ ಎಂದರು.ಏಕಲವ್ಯ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ತ್ರಿವೇಣಿ ಮಾತನಾಡಿ ಜುಡೋ ಮೂಲತಃ ಭಾರತ ಕ್ರೀಡೆ. ಬುದ್ದಿಸ್ಟ್‍ಗಳು ಇದನ್ನು ಜಪಾನ್‍ನಲ್ಲಿ ಪರಿಚಯಿಸಿದರು. ಪುನಃ ಅಲ್ಲಿಂದ ಭಾರತಕ್ಕೆ ಮರಳಿ ಬಂದಿದೆ. ಈಗಲೂ ಎಷ್ಟೊ ಮಂದಿಗೆ ಜುಡೋ ಎಂದರೆ ಏನು ಎಂಬುದು ಗೊತ್ತಿಲ್ಲ. ಹಾಗಾಗಿ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ. ಯಾವ ಜಿಲ್ಲೆಯಲ್ಲಿ ಯಾವ ಕ್ರೀಡೆ ಇಲ್ಲವೋ ಅಂತಹ ಕ್ರೀಡೆಯ ಮೇಲೆ ಬೆಳಕು ಚೆಲ್ಲಬೇಕು ಎಂದು ಹೇಳಿದರು.

       ರಾಜ್ಯದ ಹದಿಮೂರು ಜಿಲ್ಲೆಗಳಿಂದ ಕ್ರೀಡಾಪಟುಗಳು ಬರಬಹುದೆಂದು ನಿರೀಕ್ಷಿಸಲಾಗಿತ್ತು. ನಮ್ಮ ನಿರೀಕ್ಷೆಗೂ ಮೀರಿ ಹದಿನೆಂಟು ಜಿಲ್ಲೆಗಳಿಂದ ಜುಡೋ ಕ್ರೀಡಾಳುಗಳು ಆಗಮಿಸಿರುವುದು ಅತ್ಯಂತ ಖುಷಿ ತಂದಿದೆ.1980 ರಲ್ಲಿ ಜುಡೋ ನಮ್ಮ ರಾಜ್ಯದಲ್ಲಿ ಆರಂಭವಾಯಿತು. ಈ ಕ್ರೀಡೆಯಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು ಎಂದು ಜುಡೋ ಮಹತ್ವ ತಿಳಿಸಿದರು.
ಬೆಳಗಾಂನಲ್ಲಿ ಜುಡೋದಲ್ಲಿ 40 ಅಂತರಾಷ್ಟ್ರೀಯ ಪದಕಗಳನ್ನು ಪಡೆದವರು ಇರುವುದರಿಂದ ಜಗತ್ತಿನ ಭೂಪಟದಲ್ಲಿ ಬೆಳಗಾಂ ಗುರುತಿಸಿಕೊಂಡಿದೆ.

          ಜಿಲ್ಲೆಯಲ್ಲಿ ಯಾವ ಕ್ರೀಡೆ ಇಲ್ಲವೋ ಅದಕ್ಕೆ ಮಹತ್ವ ಕೊಟ್ಟರೆ ಒಲಂಪಿಕ್‍ನಲ್ಲಿ ಪದಕ ತರಬಹುದು. ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಜುಡೋ ಸ್ಪರ್ಧೆಯಲ್ಲಿ ಪದಕ ಪಡೆದವರು ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪಡೆಯುವುದಾದರೆ ಸರ್ಕಾರದಿಂದ ನೆರವು ಸಿಗಲಿದೆ. ಒಂದು ಸಾವಿರ ಕ್ರೀಡಾಪಟುಗಳಿಗೆ ತಲಾ ಒಂದು ಲಕ್ಷ ರೂ.ನಂತೆ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಕೇವಲ ನಾಲ್ಕು ನೂರು ಅರ್ಜಿಗಳು ಮಾತ್ರ ಬಂದಿದೆ. ಇನ್ನು ಆರುನೂರು ಕ್ರೀಡಾಪಟುಗಳ ಹಣ ಸರ್ಕಾರದಲ್ಲಿಯೇ ಇದೆ. ಕ್ರೀಡಾಪಟುಗಳು ಸರಿಯಾಗಿ ಬಳಸಿಕೊಳ್ಳಿ ಎಂದು ಮನವಿ ಮಾಡಿದರು.

          ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಸಿ.ಶೋಭ ಮಾತನಾಡುತ್ತ ಆಟ, ಊಟ, ಪಾಠ ಈ ಮೂರು ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾದುದು. ಆಟ ಮತ್ತು ಪಾಠ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯ ಸದೃಢವಾಗಿರಬೇಕಾದರೆ ಕ್ರೀಡೆ ಬೇಕು. ಆಟದಿಂದ ಮನೋವಿಕಾಸವಾಗುತ್ತದೆ. ಜೊತೆಯಲ್ಲಿ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಿ ಸದಾ ಲವಲವಿಕೆಯಿಂದ ಇರಬಹುದು ಎಂದು ಹೇಳಿದರು.

         ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ.ಬಾಲರೆಡ್ಡಿ, ಕಾರ್ಯದರ್ಶಿ ಪಿ.ಆರ್.ನಿಂಗಪ್ಪ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಗಣೇಶ್, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಟಿ.ಇಂದ್ರಣ್ಣ, ಕ್ರೀಡಾ ಸಂಯೋಜಕ ರಿಜ್ವಾನ್ ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link