ಚಳ್ಳಕೆರೆ
ಜಿಲ್ಲೆಯ ಅತಿಹೆಚ್ಚು ಪ್ರಗತಿಯನ್ನು ದಾಖಲಿಸಿದ ಇಲ್ಲಿನ ನಗರಸಭೆ ಈ ಹಿಂದೆ ಪುರಸಭೆಯಾಗಿದ್ದು, 2014ರಲ್ಲಿ ನಗರಸಭೆಯಾಗಿ ಪರಿರ್ತನೆಯಾಗಿದ್ದು, ನಗರದ ವಿಸ್ತೀರ್ಣದಲ್ಲೂ ಸಹ ಬದಲಾವಣೆ ಯಾಗಿದ್ದು, ನಗರದ ಸೌಂದರ್ಯವನ್ನು ಕಾಪಾಡುವ ದೃಷ್ಠಿಯಲ್ಲಿ ನಗರಸಭೆ ಹಲವಾರು ಸುಧಾರಿತ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.
ಅವರು, ಮಂಗಳವಾರ ನಗರಸಭಾ ಕಾರ್ಯಾಲಯದಲ್ಲಿ ನಗರಸಭೆ ವ್ಯಾಪ್ತಿಯ ಸುಮಾರು 5 ಕಿ.ಮೀ ಅಂತರದಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಚಿಂದಿ ಆಯುವ ಮೂಲಕ ನಗರಸಭೆಯ ಕಸವನ್ನು ವಿಂಗಡಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹರಡುವ ಅನೇಕರೋಗಗಳ ನಿಯಂತ್ರಣಕ್ಕೆ ಸಹಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಚಿಂದಿ ಆಯುವ ಕುಟುಂಬಗಳಿಗೆ ರಕ್ಷಣಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಪ್ರತಿನಿತ್ಯ ಬೆಳ್ಳಂಬೆಳಗ್ಗೆಯೇ ಪರಿಸರ ಸ್ನೇಹಿಯಾದ ಚಿಂದಿ ಆಯುವ ಮಹಿಳೆಯರು ಮತ್ತು ಪುರುಷರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ತುಂಬೆಲ್ಲಾ ಓಡಾಡಿಕೊಂಡು ಹಸಿ, ಒಣಕಸವನ್ನು ಬೇರ್ಪಡಿಸುವುದಲ್ಲದೆ, ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಡಬ್ಬಾ, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕೊಡದ ಸಾಮಾನುಗಳು, ಗಾಜಿನ ವಸ್ತುಗಳು ಮುಂತಾದವುಗಳನ್ನು ಮೂಲ ಕಸದಿಂದ ಬೇರ್ಪಡಿಸಿ ತಮ್ಮ ಹೊಟೆಪಾಡು ನಡೆಸುತ್ತಿದ್ದಾರೆ.
ಇದರಿಂದ ನಗರಸಭೆಗೆ ಕಸ ಬೇರ್ಪಡಿಸುವ ಕಾರ್ಯದಿಂದ ವಿಮುಕ್ತಿ ದೊರಕುತ್ತಿತ್ತು. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿಯಾದ ಚಿಂದಿ ಆಯುವ ಎಲ್ಲಾ ಕುಟುಂಬದ ಸದಸ್ಯರಿಗೆ ಆರೋಗ್ಯ ರಕ್ಷಣಾ ಸಾಮಾಗ್ರಿಗಳನ್ನು ನೀಡಿ ಪ್ರತಿನಿತ್ಯ ಇವುಗಳನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ನರೇಂದ್ರಬಾಬು, ಸಮನ್ವಯಾಧಿಕಾರಿ ಪಿ.ಪಾಲಯ್ಯ, ವ್ಯವಸ್ಥಾಪಕ ನಾಸೀರ್, ಕಂದಾಯಾ ಧಿಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ನಿರ್ಮಲ, ಭದ್ರಿನಾಥ, ಮಂಜುನಾಥ, ತಿಪ್ಪೇಸ್ವಾಮಿ, ವಿಶ್ವನಾಥ ಮುಂತಾದರು ಉಪಸ್ಥಿತರಿದ್ದರು.