ತಿಪಟೂರು :
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ಕಳೆದ ಎರಡು ವರ್ಷಗಳಿಂದ ಕೈಕೊಡುತ್ತಾ ಸಾಗಿದ್ದ ಮಳೆ ಈ ಬಾರಿ ಅನ್ನದಾತರ ಮೇಲೆ ಕೃಪೆತೋರಿ ಉತ್ತಮವಾಗಿ ಬಂದ ಪರಿಣಾಮದಿಂದ ರಾಗಿಯ ಫಸಲು ಉತ್ತವಾಗಿದ್ದು ಅನ್ನದಾತರು ಲಾಭದ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲು ರಾಗಿಯು ಉತ್ತಮವಾಗಿ ಬೆಳೆದು ನಳನಳಿಸುತ್ತಿದೆ. ರಾಗಿಯ ಈ ಉತ್ತಮ ಫಸಲನ್ನು ನೋಡಿದ ರೈತರ ಮೊಗವು ಮಂದಹಾಸ ಬೀರುವಂತಿದ್ದು ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯು ರಾಗಿ ಕೈಕೊಡುವಂತೆ ಕಾಣುತ್ತಿತ್ತು ಆದರೆ ಕಳೆದ ತಿಂಗಳನಿಂದ ಬರುತ್ತಿರುವ ಮಳೆಯ ರೈತರಿಗೆ ನವ ಚೈತನ್ಯವನ್ನು ತುಂಬಿದಂತಿದ್ದು ರಾಗಿ ಬೆಳೆ ಅಳಿಯುವ ಕಾಲದಲ್ಲಿ ಸೂಕ್ತ ಸಮಯಕ್ಕೆ ಬಂದ ಮಳೆ ಮತ್ತೆ ಜೀವಕಳೆಯನ್ನು ತುಂಬಿತು.
ತಾಲ್ಲೂಕಿನಲ್ಲಿ ಹೆಚ್ಚಾಗಿ ಮಳೆಯಾಶ್ರಿತ ಭೂಮಿಯಲ್ಲಿ ಬಳೆದಿರುವ ಹೆಚ್ಚಿನ ರಾಗಿ ಬೆಳೆ ಈಗ ಕಾಳುಕಟ್ಟುವ ಹಂತದಲ್ಲಿದೆ. ಆದರೆ ಮೊದಲೆ ಹಾಕಿದ್ದ ರಾಗಿ ಬೆಳೆಯ ತಿನ್ನುವ ತೆನೆಯಾಗಿದೆ. ಇನ್ನು ಕೊನೆಗೆ ಹಾಕಿದ ಬೆಳೆಗೆ ಇನ್ನೊಂದೆರಡು ಬಾರಿ ಮಳೆಯಾದರೆ ಈ ಬಾರಿ ಶೇಕಡ 100ರಷ್ಟು ರಾಗಿಯು ಅನ್ನದಾತನ ಒಡಲು ಸೇರುವುದರಲ್ಲಿ ಸಂದೇಹವೆ ಇಲ್ಲ.
ರಾಗಿಯು ಉತ್ತಮವಾಗಿ ಬರುವುದಲ್ಲದೇ ಉತ್ತಮ ಸ್ವಾದಿಷ್ಟಭರಿತವಾದ ರಾಗಿ ಹುಲ್ಲು ದೊರೆಯುವುದರಿಂದ ಹೈನುಗಾರಿಕೆ ಯು ಮುಂದುವರೆಯುವ ವಿಶ್ವಾಸವನ್ನು ತುಂಬಿದ್ದು ರೈತರಲ್ಲಿ ಹೊಸನಗೆಯನ್ನು ಸೂಚಿಸುವಂತೆ ಮಾಡಿದೆ ಆದರೆ ಕೆಲವು ಬಾರಿ ಉತ್ತಮ ಬೆಳೆ ಬಂದ ಸಮಯದಲ್ಲೇ ಬರುವ ವಾಯುಬಾರ ಕುಸಿತದಿಂದ ಮಳೆಬಂದು ಕೆಡೆಸುವಂತಹ ಕಥೆಯನ್ನು ಮಾಡುವಂತೆ ಮಾಡದಿದ್ದರೆ ಸಾಕೆಂದು ರೈತರು ವರಣದೇವನ್ನು ಪ್ರಾರ್ಥಿಸುತ್ತಿದ್ದಾರೆ.
ಇನ್ನು ಕೆಲವು ರೈತರು ಹೇಳಿದಂತೆ ರಾಗಿ ಕಳೆದ ಎರಡು ವರ್ಷದಲ್ಲಿ ಇಳುವರಿಗೆ ಕಡಿಮೆ ಇದ್ದಾಗ ರಾಗಿಗೆ ಒಳ್ಳೆಯ ಬೆಲೆ ಸಿಕ್ಕಿತ್ತು ಆದರೆ ಈ ಬಾರಿ ಉತ್ತಮವಾದ ಫಸಲು ಬರುತ್ತಿದ್ದು ದಲ್ಲಾಳಿಗಳು ಮದ್ಯಪ್ರವೇಶಿಸಿ ನಮಗೆ ಉತ್ತಮ ಬೆಲೆಸಿಗದಂತೆ ಮಾಡುತ್ತಾರೆ ಬೆಳೆಬಂದ ತಕ್ಷಣವೇ ಬೆಂಬಲ ಬೆಲೆಯನ್ನು ಘೋಷಿಸಿ ಸರ್ಕಾರವೇ ರಾಗಿಯನ್ನು ರೈತರಿಂದ ನೇರವಾಗಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ.