ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಲು ಮಾಜಿ ಸಿಎಂ ಸಿದ್ದರಾಮಯ್ಯಚಿಂತನೆ …!!!!

ಬೆಂಗಳೂರು

       ನಾಜಿಗಳ ಕಾಲದಲ್ಲಿ ಜರ್ಮನಿಯಲ್ಲಿ ಯಶಸ್ವಿಯಾಗಿದ್ದ ಗೋಬೆಲ್ಸ್ ನೀತಿ ಭಾರತದಲ್ಲೂ ಯಶಸ್ವಿಯಾಗಿದ್ದು ಈ ಹಿನ್ನೆಲೆಯಲ್ಲಿ ಸೈದ್ಶಾಂತಿಕ ರಾಜಕಾರಣ ಮಾಡುವುದು ಕಷ್ಟ ಎಂದು ಆಪ್ತರ ಬಳಿ ಹೇಳಿಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಸಿಎಂ ಸಿದ್ಧರಾಮಯ್ಯ ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ನಿರ್ಧರಿಸಿದ್ದಾರೆ.

       ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ನಾಲ್ಕು ವರ್ಷಗಳ ನಂತರ ಚುನಾವಣೆ ಬಂದರೂ ಅಷ್ಟೇ.ಮಧ್ಯಂತರ ಚುನಾವಣೆ ಬಂದರೂ ಅಷ್ಟೇ.ಇನ್ನು ನನಗೆ ಚುನಾವಣಾ ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ ಎಂದು ಸಿದ್ಧರಾಮಯ್ಯ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದಿವೆ.

     ನರೇಂದ್ರಮೋದಿ ನೇತೃತ್ವದ ಬಿಜೆಪಿ ಗೋಬೆಲ್ಸ್ ನೀತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ.ತನ್ನ ಪರವಾದ ಪ್ರಚಾರ ಎಲ್ಲೆಲ್ಲೂ ಹರಡುವಂತೆ ನೋಡಿಕೊಂಡು ಒಂದು ಮೇನಿಯಾ ಸೃಷ್ಟಿಸಿ ಅಧಿಕಾರ ಹಿಡಿದಿದೆ.ಇಂತಹ ಸಂದರ್ಭದಲ್ಲಿ ಸೈದ್ಧಾಂತಿಕ ರಾಜಕಾರಣದ ಮಾತನಾಡುತ್ತಾ ಕೂರುವುದು ಸಾಧ್ಯವಿಲ್ಲ.

      ಮೋದಿಯವನ್ನು ಮೀಡಿಯಾಗಳು ಎತ್ತಿ ಹಿಡಿದ ರೀತಿಯ ಮುಂದೆ ಜನರಿಗಾಗಿ ಕೆಲಸ ಮಾಡಿದವರು ಸೋತಿದ್ದಾರೆ.ಜಾತಿ ಬಲವೂ ಸಿಗದೆ ಸೊರಗಿದ್ದಾರೆ.ಸಾಮಾಜಿಕ ನ್ಯಾಯದ ಕಳಕಳಿ ಹೊಂದಿದ್ದವರನ್ನೂ ಸೋಲಿಸಿದ್ದಾರೆ.ಹೀಗಿರುವಾಗ ಯಾವ ಭರವಸೆಯ ಮೇಲೆ ರಾಜಕಾರಣ ಮಾಡಬೇಕು?

     ಚಾಮರಾಜನಗರದ ಸಂಸದರಾಗಿದ್ದ ಧ್ರುವ ನಾರಾಯಣ ಒಬ್ಬ ಶಾಸಕ ಮಾಡಬೇಕಾದ್ದಕ್ಕಿಂತ ತಳಮಟ್ಟಕ್ಕೆ ಹೋಗಿ ಕೆಲಸ ಮಾಡಿದರು.ಅವರು ಮಾಡಿದ ಕೆಲಸವೇ ಅವರನ್ನು ಸಂಸತ್ತಿಗೆ ಕಳಿಸಬೇಕಿತ್ತು.ಆದರೆ ಅವರನ್ನು ಜನ ಸೋಲಿಸಿದರು.

      ಬಿಜೆಪಿಯ ಗದ್ದೀಗೌಡರ್ ಯಾರು ಎಂದೇ ಕ್ಷೇತ್ರದ ಬಹುತೇಕ ಮತದಾರರಿಗೆ ಗೊತ್ತಿಲ್ಲ.ಆದರೆ ಮೋದಿಯವರ ಪರವಾದ ಪ್ರಚಾರದ ಅಲೆ ಗದ್ದೀಗೌಡರ್ ಅವರ ಎಲ್ಲ ಲೋಪಗಳನ್ನು ಮರೆಸಿ ಒಂದೂವರೆ ಲಕ್ಷದಷ್ಟು ಅಧಿಕ ಅಂತರದಿಂದ ಗೆಲುವು ಸಾಧಿಸಲು ಕಾರಣವಾಯಿತು.ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಮಾಡಿದ ಕೆಲಸವನ್ನು ಮುಂದಿನ ದಿನಗಳಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ.ಆ ಮಟ್ಟದಲ್ಲಿ ಕೆಲಸ ಮಾಡಿದರೂ ಅವರು ಕೂಡಾ ಮೋದಿ ಪರವಾಗಿ ಸೃಷ್ಟಿಸಿದ ಅಲೆಯ ಮುಂದೆ ಸೋತರು.

      ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸೋಲರಿಯದ ಸರದಾರ ಎಂದೇ ಖ್ಯಾತರಾಗಿದ್ದ ಕೆ.ಹೆಚ್.ಮುನಿಯಪ್ಪ ಅವರ ಮುಂದೆ ಬಿಜೆಪಿಯ ಒಬ್ಬ ಕಾರ್ಪೋರೇಟರ್ ನಿಂತು ನಿರಾಯಾಸವಾಗಿ ಗೆಲ್ಲಲು ಸಾಧ್ಯವಾಯಿತು.

       ಸಂಸತ್ತಿನಲ್ಲಿ ಕರ್ನಾಟಕದ ಪ್ರಬಲ ಧ್ವನಿಯಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತುಮಕೂರಿನಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜು ಅವರ ವಿರುದ್ದ ಸೋತರು.ರಾಜ್ಯದ ಹಿತ ಕಾಯುವ ವಿಷಯದಲ್ಲಿ ದೇವೇಗೌಡರಿಗಿಂತ ದೊಡ್ಡ ನಾಯಕರು ಬೇಕೇ?ಆದರೆ ಅವರು ಕೂಡಾ ಮೋದಿ ಪರವಾದ ಮೀಡಿಯಾಗಳು ಸೃಷ್ಟಿಸಿದ ಅಲೆಯೆದುರು ಪರಾಭವ ಅನುಭವಿಸಿದರು.

     ವಿಪರ್ಯಾಸವೆಂದರೆ ಮೋದಿ ಪರವಾದ ಅಲೆಯನ್ನು ತಡೆಯಲು ನಮ್ಮಲ್ಲಿ ಯಾವ ಗುರಾಣಿಯೂ ಇರಲಿಲ್ಲ.ಕೇರಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಕ್ತಿಗಳು ಪ್ರಬಲವಾದ ಮೀಡಿಯಾ ನೆಟ್‍ವರ್ಕ್ ಹೊಂದಿದ್ದು ಪರಿಣಾಮವಾಗಿ ಅವರು ಮೋದಿ ಅಲೆಯನ್ನು ತಡೆದು ಜಯಗಳಿಸಿದರು.

      ತಮಿಳುನಾಡಿನಲ್ಲಿ ಡಿಎಂಕೆಗೆ ಪ್ರಬಲವಾದ ಟಿವಿ ಜಾಲವಿದ್ದು ಇದರ ಪರಿಣಾಮವಾಗಿ ಅದು ಕೂಡಾ ಗೆಲುವು ಸಾಧಿಸಿತು. ಎಐಎಡಿಎಂಕೆಗೆ ಪರ್ಯಾಯವಾಗಿ ಮೇಲೆದ್ದು ನಿಂತುಕೊಂಡಿತು.ಆದರೆ ನಮ್ಮಲ್ಲಿ ಅಂತಹ ಯಾವ ನೆಟ್‍ವರ್ಕ್‍ಗಳೂ ಇರಲಿಲ್ಲ.

   ಇನ್ನು ಮುಂದೆ ಇಂತಹ ನೆಟ್‍ವರ್ಕ್‍ಗಳನ್ನು ಮಾಡಿ ಏನನ್ನೋ ಸಾಧಿಸುತ್ತೇವೆ ಎಂಬುದು ಸಧ್ಯದ ಸ್ಥಿತಿಯಲ್ಲಿ ಆಶಾವಾದವಷ್ಟೇ. ಹಾಗೆಯೇ ಚುನಾವಣಾ ರಾಜಕೀಯ ಬೇಸರ ತಂದಿರುವುದಿಂದ ಈ ವಿಧಾನಸಭೆಯ ಅವಧಿ ಮುಗಿದ ಕೂಡಲೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತೇನೆ.

     ಯಾವ ಕಾರಣಕ್ಕೂ ಇನ್ನು ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ.ಗೋಬೆಲ್ಸ್ ನೀತಿಯ ವಿರುದ್ಧ ನಾವು ಸೈದ್ಶಾಂತಿಕ ರಾಜಕಾರಣ ಮಾಡುವುದು ಬಹಳ ಕಷ್ಟ.ಯಾಕೆಂದರೆ ನಾವು ಯಾರ ಪರವಾಗಿ ಹೋರಾಡಬೇಕು ಎಂದು ಬಯಸುತ್ತೇವೋ?ಅವರೇ ಗೋಬೆಲ್ಸ್ ನೀತಿಯ ಪರವಾಗಿ ನಿಂತಿರುವಾಗ ಸಾಮಾಜಿಕ ನ್ಯಾಯದ ಕತೆ ಹೇಳುವುದರಲ್ಲಿ ಯಶಸ್ವಿ ರಾಜಕಾರಣ ಅಡಗಿಲ್ಲ ಎಂದು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.ಸಿದ್ಧರಾಮಯ್ಯ ಅವರ ಈ ನಿಲುವು ಕಾಂಗ್ರೆಸ್‍ನ ಒಳವಲಯಗಳಲ್ಲಿ ಕುತೂಹಲಕಾರಿ ಚರ್ಚೆಗೆ ಕಾರಣವಾಗಿದ್ದು ಮುಂದಿನ ರಾಜಕೀಯ ವಿದ್ಯಮಾನಗಳ ಬಗೆಗೂ ನಾನಾ ರೀತಿಯ ಅನುಮಾನಗಳು ಕಾಡ ತೊಡಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap