ಹಿರಿಯೂರು:
ರಾಜ್ಯದಲ್ಲಿ ಕ್ರೈಸ್ತ ಮಿಶನರಿಗಳು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮನುಷ್ಯನ ಜೀವನಕ್ಕೆ ಶಿಕ್ಷಣ ಅತ್ಯಮೂಲ್ಯವಾಗಿದ್ದು, ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯ ಹಾಗೂ ಸಂಸ್ಕಾರಗಳನ್ನು ಕಲಿಸಬೇಕಾಗಿದೆ ಎಂಬುದಾಗಿ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಅಸಂಷನ್ ಚರ್ಚ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಸಂಷನ್ ಪ್ರೌಢಶಾಲೆಯ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿವಮೊಗ್ಗ ಧರ್ಮಕ್ಷೇತ್ರದ ಫಾದರ್ ಡಾ.ಫ್ರಾನ್ಸಿಸ್‍ಸೆರೊವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ಮೌಲ್ಯಗಳೇ ಇಲ್ಲದ ಶಿಕ್ಷಣ ಅನರ್ಥಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂದಿನ ಮಕ್ಕಳಿಗೆ ಶಿಕ್ಷಕರು ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳುಳ್ಳ ಗುಣಗಳನ್ನು ಕಲಿಸುವುದು ಅತ್ಯವಶ್ಯಕ ಎಂದರು.
ಕರ್ನಾಟಕ ಸರ್ಕಾರದ ಸಕಾಲಸೇವೆಯ ಆಡಳಿತಾಧಿಕಾರಿ ಕೆ.ಮಥಾಯ್ ಮಾತನಾಡಿ, ವಿದ್ಯಾದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಸಂಷನ್ ಪ್ರೌಢಶಾಲೆ ಸಾವಿರಾರು ಪ್ರತಿಭಾವಂತರನ್ನು ಸಮಾಜದ ಆಸ್ತಿಯನ್ನಾಗಿ ತಯಾರುಮಾಡಿದೆ. ಅದು ಶಿಕ್ಷಕರಿಗೆ ಸಂದ ಗೌರವ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೆ ಪ್ರಖ್ಯಾತಿ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.
ಶಾಲೆಯ ವ್ಯವಸ್ಥಾಪಕ ಫ್ರಾಕ್ಲಿನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯೂರು ಕೋಮುಸಾಮರಸ್ಯಕ್ಕೆ ಹೆಸರಾದ ನಗರವಾಗಿದ್ದು, ಈ ಅಸಂಷನ್ ಶಾಲೆಯಲ್ಲಿ ಎಲ್ಲಾ ಜಾತಿಧರ್ಮಗಳಿಗೆ ಸೇರಿದ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಂಸ್ಥೆಯಿಂದ ಇನ್ನಷ್ಟು ಪ್ರತಿಭಾವಂತರು ಮೂಢಿಬರಲಿ ಎಂದರು.
ಇದೇ ಸಂದರ್ಭದಲ್ಲಿ ಅಸಂಷನ್ ಪ್ರೌಢಶಾಲೆಯ ಪ್ರಥಮಬ್ಯಾಚ್‍ನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತಂದು, ಇಂದು ತುಮಕೂರು ಜನನಿ ಆಸ್ಪತ್ರೆಯ ತಜ್ಞ ವೈದ್ಯರಾಗಿರುವ ಡಾ|| ಹಂಸನಾಗೇಶ್‍ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಸಂಷನ್ ಪ್ರೌಢಶಾಲೆಯ ಸಂಸ್ಥಾಪಕರಾದ ಫಾದರ್ ಸ್ಟ್ಯಾನಿಮರಿಯಪ್ಪ, ಡಿಡಿಪಿಐ ಆಂಥೋನಿ, ಮೌಂಟ್‍ಕಾರ್ಮಲ್ ಕಾರ್ಯದರ್ಶಿ ಫಾ.ವೀರೇಶ್‍ವಿನ್ಸೆಂಟ್, ಶಿವಮೊಗ್ಗ ಧರ್ಮಕ್ಷೇತ್ರದ ರೋಷನ್‍ಪಿಂಟೋ, ರಾಜ್ಯ ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್. ನಗರಸಭೆ ಅಧ್ಯಕ್ಷೆ ಮಂಜುಳಾ, ನಗರಸಭೆ ಸದಸ್ಯ ಜಿ.ಪ್ರೇಮ್‍ಕುಮಾರ್, ಜಿ.ಪಂ.ಸದಸ್ಯರಾದ ನಾಗೇಂದ್ರನಾಯ್ಕ್, ಅಸಂಷನ್ ಪ್ರೌಢಶಾಲೆಯ ಮುಖ್ಯಶಿಕ್ಷಕರುಗಳಾದ ಹೆನ್ರಿಕ್ರಾಸ್ಟಾ, ಸಿಸ್ಟರ್ ಭಾಗ್ಯತೆರೇಸಾ ಪಾಲ್ಗೊಂಡಿದ್ದರು ಹಿರಿಯಶಿಕ್ಷಕ ದಯಾನಂದ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ