ದಾವಣಗೆರೆ:
ಕ್ರೈಸ್ತ ಅನುಯಾಯಿಗಳು ಸಹಬಾಳ್ವೆ, ಶಾಂತಿ, ಸೌಹಾರ್ಧತೆ ತತ್ವದೊಂದಿಗೆ ಎಲ್ಲರೊಂದಿಗೆ ಬದುಕಿತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಅನುಪಮ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹರಿಹರದ ಆರೋಗ್ಯ ಮಾತೆಯ ಮಹಾಲಯದ ವತಿಯಿಂದ ಬುಧವಾರ ಏರ್ಪಡಿಸಿದ್ದ ಹರಿಹರ ಆರೋಗ್ಯ ಮಾತೆಯ ಕಿರು ಬಸಿಲಿಕ ಸಾಂಭ್ರಮಿಕ ಘೋಷಣೆ ಹಾಗೂ ಸಮರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಧರ್ಮ ಪಾಲನೆ ಪರಧರ್ಮ ಸಹಿಷ್ಣುತೆ ಭಾರತೀಯರಿಗೆ ರಕ್ತಗತವಾಗಿದೆ. ಮಹಾತ್ಮಾ ಗಾಂಧಿ ಅವರು ಎಲ್ಲ ಧರ್ಮಗಳನ್ನು ಪ್ರೀತಿಸು ; ನಿನ್ನ ಧರ್ಮದಲ್ಲಿ ಜೀವಿಸು ಎಂದಿರುವುದು ಉಲ್ಲೇಖಾರ್ಹವಾಗಿದ್ದು ಇದೇ ರೀತಿ ನಾವು ಜೀವಿಸುತ್ತಿದ್ದೇವೆ ಎಂದು ಹೇಳಿದರು.
ಅದೇ ರೀತಿ ಕವಿ ಕುವೆಂಪು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ. ಬಹುತ್ವಕ್ಕೆ ಉದಾಹರಣೆ ಎಂಬಂತೆ ಎಲ್ಲರೂ ಸೌಹಾರ್ಧತೆದಿಂದ ಬದುಕುತ್ತಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಸಮುದಾಯ ತಾವು ನೆಲೆ ನಿಂತ ಕಡೆ ಸ್ಥಳೀಯರ ಜೊತೆ ಹೊಂದಿಕೊಂಡು ಸಹ ಬಾಳ್ವೆ ನಡೆಸಿದಾಗ ಶಾಂತಿ, ಸಹನೆ ಮತ್ತು ನೆಮ್ಮದಿ ನೆಲೆಗೊಳ್ಳಲು ಸಾಧ್ಯ ಎಂದರು.
ಆಶ್ರಯ ಬಯಸಿ ಬರುವವರಿಗೆ, ಅಭಯ ನೀಡಿದವರಿಗೆ ಅಭ್ಯುದಯದ ಮಾರ್ಗ ತೋರುವ ಔದಾರ್ಯ ಭಾರತೀಯರಿಗೆ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿದೆ. ಧರ್ಮದ ಕಾರಣಕ್ಕೆ ಪಾಶ್ಚಾತ್ಯದಲ್ಲಿ ದೌರ್ಜನ್ಯಕ್ಕೊಳಗಾದ ಪಾರಸಿಕ ಜನರು ಸಹಸ್ರಾರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಗೊಂಡು ಇದೇ ಮಣ್ಣಿನಲ್ಲಿ ಧಾರ್ಮಿಕ, ಸಾಮಾಜಿಕ ಔನ್ನತ್ಯಕ್ಕೆ ತಲುಪಿರುವುದು ಇತಿಹಾಸ ದಾಖಲಿಸಿದೆ.
ತಮ್ಮದೇ ಆದ ಮಾತೃ ಭೂಮಿ ತೊರೆದು ಮತ್ತೊಂದು ನೆಲೆ ರೂಪಿಸಿಕೊಂಡ ಪಾರಸಿಕರು ತಮ್ಮ ಸಾಧನೆಗಾಗಿ ಪ್ರಸಿದ್ದರಾಗಿದ್ದಾರೆ. ಇದೇ ರೀತಿ ಕ್ರೈಸ್ತರು ಜೀಸಸ್ ಕ್ರೈಸ್ತರ ತರುವಾಯ ಭಾರತಕ್ಕೆ ಬಂದು ನೆಲೆಗೊಂಡರು. ಅವರನ್ನು ಭಾರತೀಯರು ಔದಾರ್ಯದಿಂದ ಬರ ಮಾಡಿಕೊಂಡು ಅಭ್ಯುದಯಕ್ಕೆ ಸಹಕರಿಸಿದರು. ಭಾರತ ಒಂದು ಮಹತ್ವವಾದ ದೇಶವಾಗಿದ್ದು, ಸರ್ವಧರ್ಮಗಳ ಪಾಲನೆಯ ತಾಣವಾಗಿದೆ. ಎಲ್ಲ ಧರ್ಮವನ್ನು ಪ್ರೀತಿಸಿ, ನಮ್ಮ ಧರ್ಮದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲ ಸಂಸ್ಕೃತಿಗಳನ್ನು ಆದರಿಸುತ್ತೇವೆ ಹಾಗೂ ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನ ಆರ್ಚ್‍ಬಿಷಿಪ್ ಡಾ.ಪೀಟರ್ ಮಜಾದೊ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಮುರುಘ ಮಠದ ಶ್ರೀ ಶಿವಮೂರ್ತಿ ಮುರುಘ ಶರಣರು, ದಾವಣಗೆರೆ ಇಸ್ಲಾಮಿಕ್ ಧಾರ್ಮಿಕ ಗುರು ಮೌಲನಾ ಬಿ.ಎ ಇಬಾಹಿಂ ಸಖಾಫಿ ಆಶೀರ್ವಚನ ನೀಡಿದರು.
ಆರ್ಚ್‍ಬಿಷಿಪ್ ಆಫ್ ಗೋವಾ ಆಂಡ್ ದಮನ್ ಮತ್ತು ಸಿಸಿಬಿಐ ಅಧ್ಯಕ್ಷ ಡಾ. ಫಿಲಿಪ್ ನೆರಿ ಫೆರಾಒ, ಮಂಗಳೂರಿನ ಬಿಷಿಪ್ ಎಮಿರೈಟಸ್ ಆಲೋಷಿಯಸ್ ಪೌಲ್ ಡಿಸೋಜ, ಬಿಷಿಪ್ ಎಮಿರೈಟಸ್ ಥಾಮಸ್ ಆ್ಯಂಟನಿ ವಾಝಪಿಲ್ಲಿ, ಬಳ್ಳಾರಿಯ ಬಿಷಿಪ್ ಹೆನ್ರಿ ಡಿಸೋಜ, ಉಡುಪಿಯ ಬಿಷಿಪ್ ಜೆರಾಲ್ಡ್ ಐಸಾಕ್ ಲೋಬೊ, ಚಿಕ್ಕಮಗಳೂರಿನ ಬಿಷಿಪ್ ಟಿ ಆ್ಯಂತೋನಿ ಸ್ವಾಮಿ, ಗುಲ್ಬರ್ಗದ ಬಿಷಿಪ್ ರಾಬರ್ಟ್ ಎಂ ಮಿರಂಡ, ಬೆಳಗಾವಿಯ ಬಿಷಿಪ್ ಡೆರೆಕ್ ಫರ್ನಾಂಡಿಸ್, ಸಂಸದ ಜಿ.ಎಂ ಸಿದ್ದೇಶ್ವರ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಎಸ್. ರಾಮಪ್ಪ, ಉಪಸ್ಥಿತರಿದ್ದರು.
ಬಿಷಿಪ್ ಆಫ್ ಶಿವಮೊಗ್ಗ ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ ಸ್ವಾಗತಿಸಿದರು.ಫಾದರ್ ನ್ಯಾನ್ಸಿ ಕಿರು ಬಿಸಿಲಿಕ ಉದ್ಘೋಷಣೆಯ ಕನ್ನಡಾನುವಾದ ಮಂಡಿಸಿದರು. ಬಿಷಪ್ ಆಂಟನಿ ಪೀಟರ್ ಆರೋಗ್ಯ ಮಾತೆ ದೇವಾಲಯ ನಡೆದು ಬಂದ ದಾರಿ ಕುರಿತು ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ