ಚುನಾವಣಾ ಪರೀಕ್ಷೆಯಲ್ಲಿ ಭಾರತ ಗೆಲ್ಲಿಸಿ

ದಾವಣಗೆರೆ:

       ಲೋಕಸಭಾ ಚುನಾವಣೆಯ ಎಂಬ ಪರೀಕ್ಷೆಯಲ್ಲಿ ಭಾರತವನ್ನು ಡಿಸ್ಟಿಂಗ್ಷನ್‍ನಲ್ಲಿ ಪಾಸು ಮಾಡಲು, ಮತ್ತೊಮ್ಮೆ ಮೋದಿಯನ್ನು ಬೆಂಬಲಿಸಬೇಕೆಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕ ಅವಿನಾಶ್ ಕರೆ ನೀಡಿದರು.

       ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವನ್ನು ಗೆಲ್ಲಿಸಲು ರಾಜ್ಯದಲ್ಲಿ ಏ.18 ಹಾಗೂ ಏ.23ರಂದು ಚುನಾವಣೆ ಎಂಬ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಕೇವಲ 35 ಅಂಕಗಳನ್ನು ಪಡೆದು ಸಾಮಾನ್ಯ ದರ್ಜೆಯಲ್ಲಿ ಪಾಸ್ ಮಾಡುವ ಬದಲು, ಮತ್ತೊಮ್ಮೆ ಮೋದಿಯವರನ್ನು ಬೆಂಬಲಿಸಿ 95 ಅಂಕಗಳನ್ನು ಪಡೆದು ಡಿಸ್ಟಿಂಗ್ಷನ್‍ನಲ್ಲಿ ಭಾರತವನ್ನು ಉತ್ತಿರಣಗೊಳಿಸಬೇಕೆಂದು ಕಿವಿಮಾತು ಹೇಳಿದರು.

       2013ರ ವೇಳೆಗೆ 9 ವರ್ಷಗಳ ಕಾಲ ಆಡಳಿತ ನಡೆಸಿದ್ದ ಯುಪಿಎ ಸರ್ಕಾರದ ದುರಾಡಳಿತದಿಂದ ದೇಶದಾದ್ಯಂತ ಎಲ್ಲೆಡೆಯೂ ಕತ್ತಲೆ ಆವರಿಸಿ, ದಿಗ್ಭ್ರಮೆಯ ವಾತಾವರಣ ಸೃಷ್ಟಿಯಾಗಿತ್ತು. ಈ ಹೊತ್ತಿನಲ್ಲಿ ಭಾರತ ದೇಶದಲ್ಲಿ ಭ್ರಷ್ಟ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತಿದ್ದರ ಕಾರಣಕ್ಕೆ ಭಾರತಕ್ಕೆ ಭವಿಷ್ಯವಿದೆಯೇ ಎಂಬ ಪ್ರಶ್ನೆ ದೇಶದ ಜನರನ್ನು ಕಾಡತೊಡಗಿತ್ತು. 2011ರಲ್ಲಿ ನಡೆದ ಮುಂಬೈದಾಳಿಯ ಬಗ್ಗೆಯೂ ಅಂದಿನ ಪ್ರಧಾನಿ ಮೌನ್‍ಮೋಹನ್‍ಸಿಂಗ್ (ಮನಮೋಹನ್‍ಸಿಂಗ್) ಯಾವುದೇ ಪ್ರತಿಕ್ರಿಯೆ ನೀಡದೇ, ಮೌನ ವಹಿಸಿದ್ದರು.

       ಅಲ್ಲದೇ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಜಾಗತಿಕ ಮಟ್ಟದಲ್ಲೂ ಭಾರತ ದುರ್ಬಲವಾಗಿತ್ತು. ಅಂತಹ ಸಂದರ್ಭದಲ್ಲಿ ದೂರದಲ್ಲಿ ಬೆಳಕು ಕಂಡಂತೆ, ಅಂದಿನ ಗುಜರಾತ್‍ನ ಮುಖ್ಯಮಂತ್ರಿ ನರೇಂದ್ರ ಮೋದಿ ಕಂಡರು. ಆಗ ದೇಶ ಕಟ್ಟಲಿಕ್ಕಾಗಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಸಂಕಲ್ಪ ಮಾಡಿದ ಕಾರಣಕ್ಕೆ 2014ರಲ್ಲಿ ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದರು ಎಂದು ವಿಶ್ಲೇಷಿಸಿದರು.

         ಭಾರತೀಯರು ಮತ್ತೊಮ್ಮೆ ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಶ್ರಮ ವಹಿಸಿ ದುಡಿಯಬೇಕು. ಅದಕ್ಕಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಬೇಕು ಎಂದರು.

         ಇಡೀ ವಿಶ್ವವೇ ಯೋಗಕ್ಕೆ ಶರಣಾಗುವಂತೆ ಮಾಡಿದ್ದು ಪ್ರಧಾನಿ ಮೋದಿಯವರ ಐತಿಹಾಸಿಕ ಸಾಧನೆಯಾಗಿದೆ. ಅಲ್ಲದೆ, ಮೋದಿಯವರು ಆಯುಷ್ಮಾನ್ ಭವ ಮೂಲಕ ಬಿಪಿಎಲ್ ಕಾರ್ಡ್‍ದಾರರಿಗೆ 5 ಲಕ್ಷದವರೆಗಿನ ಆರೋಗ್ಯ ವಿಮೆ ಒದಗಿಸಿದ್ದಾರೆ. ದೇಶದ ವಿವಿಧೆಡೆ 4500 ಜನೌಷಧ ಕೇಂದ್ರಗಳನ್ನು ತೆರೆದು, ಅತ್ಯಾವಶ್ಯಕ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, 12.34 ಕೋಟಿ ಜನರಿಗೆ ಮುದ್ರಾ ಯೋಜನೆಯಡಿ ಸ್ವಯಂ ಉದ್ಯೋಗಕ್ಕೆ ಸಾಲ ಒದಗಿಸಿದ್ದಾರೆ. ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಮೂಲಕ ಪ್ರತಿಭಾವಂತ ಯುವಕರನ್ನು ಸ್ವಾವಲಂಬಿಗಳಾಗಿ ಮಾಡಿದ್ದಾರೆಂದು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದರು.

         ಭಯೋತ್ಪಾದಕರು ನಡೆಸಿದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ಮನೆಯೊಳಗೆ ನುಗ್ಗಿ ಬುದ್ಧಿ ಕಲಿಸಿದ್ದಾರೆ. ಶತೃರಾಷ್ಟ್ರ ಪಾಕಿಸ್ತಾನದ ಗಡಿ ದಾಟಿ ಬಾಲ್‍ಕೋಟ್‍ನಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸ ಮಾಡಿದರೂ ಜಗತ್ತಿನ ಯಾವುದೇ ರಾಷ್ಟ್ರಗಳು ಭಾರತದ ಕ್ರಮವನ್ನು ಖಂಡಿಸಲಿಲ್ಲ. ಇದಕ್ಕೆ ನರೇಂದ್ರ ಮೋದಿ ಅವರು ವಿದೇಶಗಳೊಂದಿಗೆ ವಿಶ್ವಾಸವೇ ಕಾರಣವಾಗಿದೆ ಎಂದರು.

          ರೈತರ ಕಣ್ಣೀರು ಒರೆಸುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ವಿಕ್ಸ್ ಫ್ಯಾಮಿಲಿಯ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. 49 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವರೆಗೂ ಒಂದು ಸಾವಿರ ಚಿಲ್ಲರೆ ಕೋಟಿ ಸಾಲ ಮಾತ್ರ ಮನ್ನಾ ಮಾಡಿದ್ದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಸಶಕ್ತರನ್ನಾಗಿಸುವ ಕೆಲಸ ಮಾಡಿದೆ ಎಂದು ಹೇಳಿದರು.

         ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹೆಚ್.ಸಿ.ಜಯಮ್ಮ, ಮುಖಂಡರಾದ ಹೆಚ್.ಎಂ.ರುದ್ರಮುನಿಸ್ವಾಮಿ, ಆರ್.ಲಕ್ಷ್ಮಣ್, ಶಿವರಾಜ ಪಾಟೀಲ್, ಸವಿತಾ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link